ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ; ವೇಳಾಪಟ್ಟಿ
ಬಳ್ಳಾರಿ, ಏಪ್ರಿಲ್ 11; ವಿಜಯನಗರ ಜಿಲ್ಲೆಯ ಹೊಸಪೇಟೆ ಮತ್ತು ದಾವಣಗೆರೆ ನಡುವಿನ ನೂತನ ಡೆಮು ರೈಲಿಗೆ ಸೋಮವಾರ ಚಾಲನೆ ನೀಡಲಾಗಿದೆ. ಪ್ರಯಾಣಿಕರು ಹೊಸ ರೈಲು ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸೋಮವಾರ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ-ಹರಿಹರ ಡೆಮು ರೈಲು (ದಾವಣಗೆರೆ ಮಾರ್ಗ)ಕ್ಕೆ ಚಾಲನೆ ನೀಡಿದರು. ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಸಹ ಈ ಸಮಯದಲ್ಲಿ ಉಪಸ್ಥಿತರಿದ್ದರು.
ಏಪ್ರಿಲ್ 4ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಏಪ್ರಿಲ್ 11ರಿಂದ ರೈಲು ಸಂಚಾರ ಆರಂಭವಾಗಿದೆ. ಇದರಿಂದಾಗಿ ಹಲವು ದಿನಗಳ ವಿಜಯನಗರ ಜಿಲ್ಲೆಯ ಜನರ ಬೇಡಿಕೆ ಈಡೇರಿದಂತಾಗಿದೆ.

ವೇಳಾಪಟ್ಟಿ; ರೈಲು ಸಂಖ್ಯೆ 07397/ 98 ಹೊಸಪೇಟೆ-ಬಳ್ಳಾರಿ ಡೆಮು ರೈಲು ವಾರದಲ್ಲಿ ಆರು ದಿನಗಳು (ಏಪ್ರಿಲ್ 12 ರಿಂದ) ಸಂಚಾರ ನಡೆಸಲಿದೆ. ಹೊಸಪೇಟೆಯಿಂದ 5.40ಕ್ಕೆ ಹೊರಡುವ ರೈಲು, ಬಳ್ಳಾರಿಗೆ 7.20ಕ್ಕೆ ತಲುಪಲಿದೆ. ಬಳ್ಳಾರಿಯಿಂದ ಸಂಜೆ 8.10ಕ್ಕೆ ಹೊರಟು, ಹೊಸಪೇಟೆಗೆ 9.45ಕ್ಕೆ ತಲುಪುತ್ತದೆ.

ದರ ಪಟ್ಟಿ ಹೀಗಿದೆ; ಹೊಸಪೇಟೆ-ಹೆಚ್. ಬಿ. ಹಳ್ಳಿ 10 ರೂ., ಹೊಸಪೇಟೆ-ಕೊಟ್ಟೂರು 25 ರೂ., ಹೊಸಪೇಟೆ-ದಾವಣಗೆರೆ 35 ರೂ., ಹೊಸಪೇಟೆ-ಹರಿಹರ 35 ರೂ., ಹೊಸಪೇಟೆ-ಬಳ್ಳಾರಿ ಕಂಟೋನ್ಮೆಂಟ್ 15 ರೂ., ಹೊಸಪೇಟೆ-ಬಳ್ಳಾರಿ 20 ರೂ.ಗಳು.
ಈ ಡೆಮು ರೈಲು ಸಂಚಾರದಿಂದ ಹೊಸಪೇಟೆ-ದಾವಣಗೆರೆ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಪ್ರಯಾಣಿಕರೇ ದಯವಿಟ್ಟು ಗಮನಿಸಿ ಹೊಸ ರೈಲು ಸಂಖ್ಯೆ07397/98 ಹೊಸಪೇಟೆ - ಬಳ್ಳಾರಿ DEMU ವಾರದಲ್ಲಿ ಆರು ದಿನಗಳು ಏಪ್ರಿಲ್ 12 ರಿಂದ ಪ್ರಾರಂಭವಾಗಲಿದೆ.. Hpt 5:40 ಕ್ಕೆ ಹೊರಟು,BAY 7:20 ಕ್ಕೆ ತಲುಪುತ್ತದೆ. ತಿರುಗಿ BAY 8:10pm ನಿರ್ಗಮಿಸಿ HPT 9:45PM ಕ್ಕೆ ತಲುಪುತ್ತದೆ. ಪ್ರಯಾಣಿಕರು ಈ ಹೊಸ ರೈಲು ಸೇವೆಯನ್ನು ಬಳಸಿಕೊಳ್ಳಲು ವಿನಂತಿ. pic.twitter.com/WRicsxPjOR
— ಹೊಸಪೇಟೆ ರೈಲು ಬಳಕೆದಾರರು (@HospetRailUsers) April 10, 2022
ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿ ಹೊಸಪೇಟೆಯಿಂದ 10 ಕಿ. ಮೀ. ದೂರದಲ್ಲಿದೆ. ಇದರಿಂದಾಗಿ ಪ್ರವಾಸಿಗರಿಗೆ ಸಹ ಅನುಕೂಲವಾಗಲಿದೆ. ಬಳ್ಳಾರಿ ನಗರ ಮತ್ತು ವಾಣಿಜ್ಯ, ಶೈಕ್ಷಣಿಕ ನಗರಿ ದಾವಣಗೆರೆಗೆ ಸಂಚಾರ ನಡೆಸಲು ಸಹಾಯಕವಾಗಲಿದೆ.
ಉಭಯ ನಗರಗಳ ನಡುವೆ ಪ್ರತಿದಿನ ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರವಾಸಿಗರು ಸಂಚಾರ ನಡೆಸುತ್ತಾರೆ. ಅವರಿಗೆ ಅನುಕೂಲವಾಗಲಿದೆ. ಡೆಮು ರೈಲಿನಿಂದ ಹೆಚ್ಚಿನ ಆಸನ ಸಿಗಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
2014ರ ಮಾರ್ಚ್ 3ರಂದು ಕೊಟ್ಟೂರು-ಹರಿಹರ ನಡುವಿನ ರೈಲು ಸಂಚಾರಕ್ಕೆ ಅಂದಿನ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದರು. 2019ರ ನವೆಂಬರ್‌ನಲ್ಲಿ ವಿಜಯಪುರ-ಯಶವಂತಪುರ (ಕೊಟ್ಟೂರು ಮಾರ್ಗ) ರೈಲು ಸಂಚಾರಕ್ಕೆ ದಿ. ಸುರೇಶ್ ಅಂಗಡಿ ಚಾಲನೆ ನೀಡಿದ್ದರು. ಕೋವಿಡ್ ಸಮಯದಲ್ಲಿ ಈ ರೈಲುಗಳು ಸ್ಥಗಿತಗೊಂಡಿದ್ದವು.
ತಡವಾಗಿ ರೈಲುಗಳ ಸಂಚಾರ; ನೈಋತ್ಯ ರೈಲ್ವೆ ಮಾರ್ಚ್ 21ರಂದು ಹೊರಡಿಸಿದ್ದ ಪ್ರಕಟಣೆಯಂತೆ ಏಪ್ರಿಲ್ 4ರಿಂದ ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ ಏಪ್ರಿಲ್ 12ರಿಂದ ರೈಲುಗಳು ಸಂಚಾರ ನಡೆಸಲಿವೆ.
ರೈಲು ಸಂಚಾರದ ದಿನಾಂಕ ಮುಂದಕ್ಕೆ ಹೋಗುತ್ತಿದ್ದಂತೆ ಹೊಸಪೇಟೆ-ಕೊಟ್ಟೂರು ರೈಲ್ವೆ ಹೋರಾಟ ಸಮಿತಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಗಮನ ಸೆಳೆದಿದ್ದರು. ಈ ಕುರಿತು ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಸಹ ಮಾತುಕತೆ ನಡೆಸಿದ್ದರು.
ಹೊಸಪೇಟೆ-ದಾವಣಗೆರೆ ರೈಲನ್ನು ಬೆಂಗಳೂರಿಗೂ ವಿಸ್ತರಣೆ ಮಾಡುವ ಕುರಿತು ಸಮೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಹೊಸಪೇಟೆ-ದಾವಣಗೆರೆ ರೈಲು ಮುಂದೂಡಲಾಗಿದೆ, ರದ್ದು ಮಾಡಿಲ್ಲ ಎಂದು ಸಂಸದರು ಹೇಳಿಕೆ ನೀಡಿದ್ದರು.
ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದಲ್ಲಿ ಗೂಡ್ಸ್ ರೈಲುಗಳ ಸಂಚಾರವೇ ಅಧಿಕವಾಗಿದೆ. ಬಳ್ಳಾರಿ, ಶಿರಡಿ, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ರೈಲುಗಳ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ.
ಹೊಸಪೇಟೆ-ದಾವಣಗೆರೆ ರೈಲನ್ನು ಬೆಂಗಳೂರಿಗೆ ವಿಸ್ತರಣೆ ಮಾಡುವ ಕುರಿತು ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆಯ ವರದಿ ಅನ್ವಯ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications