Ballari airport; ಗಣಿನಾಡಿನ ಏರ್‌ಪೋರ್ಟ್‌ ಬಗ್ಗೆ ಸಚಿವರ ಅಪ್‌ಡೇಟ್

ಬಳ್ಳಾರಿ, ಡಿಸೆಂಬರ್ 06; ಗಣಿನಾಡು ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುವುದು ಯಾವಾಗ?. ಕರ್ನಾಟಕ ಸರ್ಕಾರ ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ನೀಡುವುದು ಯಾವಾಗ?. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಇಲಾಖೆ ಖಾತೆ ಸಚಿವ ಎಂ. ಬಿ. ಪಾಟೀಲ್ ವಿಮಾನ ನಿಲ್ದಾಣದ ಕುರಿತು ಅಪ್‌ಡೇಟ್ ಕೊಟ್ಟಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಎಂಎಲ್‍ಸಿ ವೈ. ಎಂ. ಸತೀಶ್ ಕೇಳಿದ ಪ್ರಶ್ನೆಗೆ ಸಚಿವ ಎಂ. ಬಿ. ಪಾಟೀಲ್ ಪರವಾಗಿ ಸಚಿವ ಶರಣ ಬಸಪ್ಪ ದರ್ಶನಾಪುರ ಉತ್ತರ ನೀಡಿದರು. "ಸಿರಿವಾರ-ಚಾಗನೂರು ಗ್ರಾಮದ 900.96 ಎಕರೆ ಭೂ ಪ್ರದೇಶದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ದಪಡಿಸುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ"ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

Airport At Ballari Minister MB Patil Answer

"ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಸ್ವಾಧೀನ ಮಾಡಿಕೊಂಡಿರುವ 806.34 ಎಕರೆ ಭೂಮಿಯನ್ನು ಬಳ್ಳಾರಿ ತಹಶೀಲ್ದಾರ್‌ಗೆ ಹಸ್ತಾಂತರ ಮಾಡಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ವಿಮಾನ ನಿಲ್ದಾಣದ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯಿಂದ ಶೀಘ್ರದಲ್ಲಿಯೇ ಅನುಮೋದನೆ ಸಿಗಲಿದೆ" ಎಂದರು.

ಎಂಎಲ್‌ಸಿ ಹೇಳಿದ್ದೇನು?; ವೈ. ಎಂ. ಸತೀಶ್ ಮಾತನಾಡಿ, "ಹರಗಿನಡೋಣಿ-ಕುಡತಿನಿ ಮಧ್ಯದಲ್ಲಿದ್ದ ಹಳೆಯದಾದ ಬಂಡಿಜಾಡು ರಸ್ತೆಯನ್ನು ಅರ್ಸೆಲ್ಲರ್ ಮಿತ್ತಲ್‍ನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಂಪನಿಯ ವಶಕ್ಕೆ ನೀಡಿರುವ ಕಾರಣ ಕಂಪನಿಯು ಈ ರಸ್ತೆಯನ್ನು ಮುಚ್ಚಿದೆ. ರಸ್ತೆ ಮುಚ್ಚಿರುವ ಕಾರಣ ವಿದ್ಯಾರ್ಥಿಗಳು, ಕೆಪಿಟಿಸಿಎಲ್ ಹಾಗೂ ಇನ್ನಿತರೆ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವವರು, ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುವುದರ ಜೊತೆಯಲ್ಲಿ 30 ಕಿ. ಮೀ. ಸುತ್ತ ತಿರುಗಿ ಕುಡತಿನಿ ತಲುಪಬೇಕಾಗಿದೆ. ಮುಚ್ಚಿರುವ ರಸ್ತೆಯನ್ನು ತೆಗೆದು ಹಗರಿನಡೋಣಿಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಕಾರ್ಮಿಕರು ನಿತ್ಯ ತಿರುಗಾಡಲು ಅವಕಾಶ ಕಲ್ಪಿಸಬೇಕು" ಎಂದು ಮನವಿ ಮಾಡಿದರು.

ಸಚಿವ ಶರಣ ಬಸಪ್ಪ ದರ್ಶನಾಪುರ ಮಾತನಾಡಿ, "ಹರಗಿನಡೋಣಿ ಗ್ರಾಮಸ್ಥರು ಕುಡತಿನಿ ಮಧ್ಯೆ ತಿರುಗಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಸದನಕ್ಕೆ ಉತ್ತರ ಕೊಟ್ಟರು.

"ಉತ್ತಮ ಗಾಲ್ವಾ, ಅರ್ಸೆಲರ್ ಮಿತ್ತಲ್ ಪ್ರಾರಂಭವಾಗದ ಕಾರಣ ಭೂ ನಿರಾಶ್ರಿತ ರೈತರು ಉದ್ಯೋಗ, ಹೆಚ್ಚುವರಿ ಪರಿಹಾರ, ಇನ್ನಿತರೆ ಸೌಲಭ್ಯಗಳಿಗಾಗಿ ಆಗ್ರಹಿಸಿ 345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇವರ ಬೇಡಿಕೆಗಳ ಈಡೇರಿಕೆಗೆ ತುರ್ತಾಗಿ ಕ್ರಮಕೈಗೊಳ್ಳಬೇಕು" ಎಂದು ವೈ. ಎಂ. ಸತೀಶ್ ಒತ್ತಾಯಿಸಿದರು.

ಸಚಿವ ಶರಣ ಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ, "ಇಂಟಿಗ್ರೇಟೆಡ್ ಸ್ಟೀಲ್‍ಪ್ಲಾಂಟ್ ನಿರ್ಮಾಣ ಮಾಡಲು ಉತ್ತಮಗಾಲ್ವಾ ಫೆರೋಸ್ ಲಿಮಿಟೆಡ್‍ಗೆ 4877.81 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕೆ ನಿರ್ಮಾಣಕ್ಕಾಗಿ ಮಿನಿಸ್ಟ್ರಿ ಆಫ್ ಎನ್ವಿರಾಮ್ಮೆಂಟ್ ಅಂಡ್ ಫಾರೆಸ್ಟ್ (ಎಂಒಇಎಫ್)ನ ಎನ್ವಿರಾಮ್ಮೆಂಟ್ ಕ್ಲಿಯರೆನ್ಸ್‌ ಅನುಮತಿಗಾಗಿ ಕಂಪನಿಯು ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕಿಲ್ಲ" ಎಂದರು.

"ಭೂ ಸ್ವಾಧೀನದ ಪರಿಹಾರ ಹೆಚ್ಚಳಕ್ಕಾಗಿ ಕೆಲ ರೈತರು ಹೂಡಿರುವ ದಾವೆ ನ್ಯಾಯಾಲಯದಲ್ಲಿದೆ. ಕಾರಣ ಕಂಪನಿಯು ಈ ಯೋಜನೆಯ ಅನುಷ್ಠಾನಕ್ಕಾಗಿ ಹೆಚ್ಚುವರಿಯಾಗಿ 6 ವರ್ಷಗಳ ಕಾಲಾವಕಾಶವನ್ನು ಕೋರಿದೆ. ಈ ಕುರಿತು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಸೂಕ್ತ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಅರ್ಸೆಲ್ಲರ್ ಮಿತ್ತಲ್‍ನ ವಿಷಯ ಸುಪ್ರೀಂಕೋರ್ಟ್‍ನಲ್ಲಿದೆ" ಎಂದು ಉತ್ತರಿಸಿದರು.

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚೆನ್ನೈ ಮೂಲದ ಮಾರ್ಗ್‌ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ 13 ವರ್ಷಗಳು ಕಳೆದರೂ ಸಹ ಯೋಜನೆಯಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಆದ್ದರಿಂದ ಸರ್ಕಾರ 2022ರಲ್ಲಿ ಕಂಪನಿ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿತು ಮತ್ತು 4 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+