ಬಳ್ಳಾರಿ; ಗಮನಸೆಳೆದ 500 ಮೀ. ಉದ್ದದ ಕನ್ನಡ ಬಾವುಟ
ಬಳ್ಳಾರಿ, ನವೆಂಬರ್ 19: ಬಳ್ಳಾರಿ ನಗರದಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು 500 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿ ಎಲ್ಲರನ್ನೂ ಆಕರ್ಷಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಜಂಟಿಯಾಗಿ ಕನಕದುರ್ಗಮ್ಮ ದೇವಾಲಯದ ಆವರಣದಿಂದ 'ಕರ್ನಾಟಕ ಸಂಭ್ರಮ-50ರ' ಜ್ಯೋತಿ ರಥಯಾತ್ರೆಯ ಮೆರವಣಿಗೆ ಆಯೋಜಿಸಿದ್ದವು.

ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕನ್ನಡ ಬಾವುಟ ಹಾರಿಸುವ ಮೂಲಕ ಯಾತ್ರೆ ಸ್ವಾಗತಿಸಿದರು. ಮೆರವಣಿಗೆಗೆ ಮುನ್ನ ವಿವಿಧ ಜಾನಪದ ನೃತ್ಯ ಕಲಾ ತಂಡಗಳಿಂದ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದ್ದು ಜನರ ಗಮನ ಸೆಳೆಯಿತು. ನೋಡುಗರ ಚಪ್ಪಾಳೆಗಳ ನಡುವೆ ಸ್ಥಳೀಯ ಕಲಾವಿದರ ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು ಸೇರಿದಂತೆ ಕಲಾ ತಂಡಗಳ ಪ್ರದರ್ಶನ ನಡೆಯಿತು.
ಗಮನ ಸೆಳೆದ ಕನ್ನಡ ಧ್ವಜ; ರಥಯಾತ್ರೆಯ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ 500 ಮೀಟರ್ (ಅರ್ಧ ಕಿ. ಮೀ.) ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಿ ನೋಡುಗರನ್ನು ಆಕರ್ಷಿಸಿದರು. ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ನೋಂದಣಿ ಕಚೇರಿಯವರೆಗೆ ಸಾಗಿ ಮರಳಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಸಂಗಂ ವೃತ್ತಕ್ಕೆ ಬಂದು ರಾಘವ ಕಲಾ ಮಂದಿರದವರೆಗೆ ಕೊನೆಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಂಭ್ರಮ-50 ಅಂಗವಾಗಿ 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಯಡಿ ನವೆಂಬರ್ 1 ರಿಂದ ಒಂದು ವರ್ಷಗಳ ಕಾಲ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿಯೇ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ನಡೆಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸಂಭ್ರಮ-50ರ ಉದ್ಘಾಟನೆ ಮಾಡಿದ್ದರು. ವೀರಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ್ದರು. ಬಾಲ್ಯದಲ್ಲಿ ಕಲಿತ ವಿದ್ಯೆ ಬದುಕಿನುದ್ದಕ್ಕೂ ನೆನಪಿನಲ್ಲುಳಿಯುತ್ತದೆ. ಹೆಜ್ಜೆ ಹಾಕುತ್ತಾ ಹಾಕುತ್ತಾ ನನ್ನೂರ ಗೆಳೆಯರೊಡನೆ ಕುಣಿಯುತ್ತಿದ್ದ ಬಾಲ್ಯದ ದಿನಗಳು ನೆನಪಾದವು ಎಂದು ಹೇಳಿದ್ದರು.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳಲಿರುವ ಸಂದರ್ಭದಲ್ಲಿ 'ಕರ್ನಾಟಕ ಸಂಭ್ರಮ-50' 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ, ಮತ್ತು ಯುವಜನತೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ರಾಜ್ಯಾದ್ಯಂತ ಕನ್ನಡಾಂಬೆಗೆ ನುಡಿ ನಮನ ಅರ್ಪಿಸಲಾಗುತ್ತಿದೆ. ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', ಕುವೆಂಪು ಅವರ 'ಎಲ್ಲಾದರೂ ಇರು ಎಂತಾದರು ಇರು', ದ.ರಾ. ಬೇಂದ್ರೆ ಅವರ 'ಒಂದೇ ಒಂದೇ ಒಂದೇ ಕರ್ನಾಟಕ ಒಂದೇ' ಸಿದ್ದಯ್ಯ ಪುರಾಣಿಕ ಅವರ 'ಹೊತ್ತಿತೋ ಹೊತ್ತಿತೋ ಕನ್ನಡದ ದೀಪ' ಹಾಗೂ ಚೆನ್ನವೀರ ಕಣವಿ ಅವರ 'ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ' ಗೀತೆಗಳನ್ನು ಹಾಡಲಾಗುತ್ತಿದೆ.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯನ್ನು ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದಿಂದ, ಅದ್ದೂರಿಯಾಗಿ ಸ್ಥಳೀಯ ಕಲಾತಂಡಗಳ ಪ್ರದರ್ಶನದ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಕನ್ನಡಿಗರಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನವನ್ನ ಮೂಡಿಸಲಾಗುತ್ತಿದೆ.












Click it and Unblock the Notifications