ಚಾಮುಂಡೇಶ್ವರಿಯಲ್ಲಿ ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ಬಲಿ: ಸಿದ್ದರಾಮಯ್ಯ
Recommended Video

ಬಾದಾಮಿ, ಜೂನ್ 8: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ವಿರೋಧ ಪಕ್ಷದವರ ಷಡ್ಯಂತ್ರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಬಾದಾಮಿಯಲ್ಲಿ ಅಲ್ಪ ಅಂತರದಿಂದ ಗೆಲುವಿನ ಸಮಾಧಾನ ನೀಡಿದ ಬಾದಾಮಿ ಜನರಿಗೆ ಕೃತಜ್ಞತೆ ಸಲ್ಲಿಸಲು ಕ್ಷೇತ್ರ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ, ಜನರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ನನ್ನ ಕೆಲಸಗಳನ್ನು ನೋಡಿ ಸಹಿಸಿಕೊಳ್ಳಲಾಗದ ವಿರೋಧ ಪಕ್ಷದವರು, ಚಾಮುಂಡೇಶ್ವರಿಯಲ್ಲಿ ಷಡ್ಯಂತ್ರ ರೂಪಿಸಿ ನನ್ನನ್ನು ಸೋಲಿಸಿದರು.

ಅಲ್ಲಿನ ಜನರು ವಿರೋಧ ಪಕ್ಷದ ತಂತ್ರಕ್ಕೆ ಮರುಳಾದರು. ಆದರೆ, ಬಾದಾಮಿಯ ಜನರು ಅವರು ಷಡ್ಯಂತ್ರಕ್ಕೆ ಮರುಳಾಗಲಿಲ್ಲ. ನೀವು ನನ್ನನ್ನು ಗೆಲ್ಲಿಸಿದಿರಿ ಎಂದು ಸಿದ್ದರಾಮಯ್ಯ ಅವರು ಜನತೆಗೆ ಕೃತಜ್ಞತೆ ಅರ್ಪಿಸಿದರು.
ಬಾದಾಮಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಐದು ವರ್ಷ ಎಲ್ಲ ರೀತಿಯಿಂದಲೂ ಶ್ರಮಿಸುವುದಾಗಿ ಅವರು ಹೇಳಿದರು.
ಬಾದಾಮಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಸಿದ್ದರಾಮಯ್ಯ, ಗುರುವಾರದಿಂದ ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಪ್ರಬಲ ಎದುರಾಳಿಯಾಗಿದ್ದ ಜೆಡಿಎಸ್‌ನ ಜಿ.ಟಿ. ದೇವೇಗೌಡ ಅವರ ಎದುರು ಹೀನಾಯ ಸೋಲು ಅನುಭವಿಸಿದ್ದರು.
ಜೆಡಿಎಸ್ ಜತೆಗೆ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿರುವ ಮಧ್ಯೆಯೇ ವಿರೋಧ ಪಕ್ಷಗಳ ಷಡ್ಯಂತ್ರದಿಂದ ಸೋಲು ಕಂಡಿರುವುದಾಗಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಶರಣಾಗಿಲ್ಲ. ಕೋಮುವಾದಿ ಪಕ್ಷವು ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವುದಾಗಿ ಅವರು ಗುರುವಾರ ಹೇಳಿಕೆ ನೀಡಿದ್ದರು.












Click it and Unblock the Notifications