ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸುರಕ್ಷಿತವಲ್ಲ: ಗೋವಿಂದ ಕಾರಜೋಳ
ಬಾಗಲಕೋಟೆ ನವೆಂಬರ್ 15: ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸುರಕ್ಷಿತವಲ್ಲ. ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ನೆಟ್ಟಗೆ ಇಲ್ಲ. ಕೋಲಾರದಲ್ಲಿ ಭಿನ್ನಮತ ಜಾಸ್ತಿ ಇದೆ. ಅಲ್ಲಿ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪನವರನ್ನು ಕಾಂಗ್ರೆಸ್‌ನವರು ಸೋಲಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಚಾಮುಂಡಿ ಕ್ಷೇತ್ರದಲ್ಲಿ ಕೈ ಬಿಟ್ಟಾಗ, ಬಾದಾಮಿ ಜನ ಅವರನ್ನು ಗೌರವದಿಂದ ಗೆಲ್ಲಿಸಿದ್ದರು. ಸಿದ್ದರಾಮಯ್ಯ ಅವರ ಸೇವೆ ಮಾಡಿಕೊಂಡು ಅಲ್ಲೇ ಇರಬೇಕಿತ್ತು. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ತಳ್ಳುವ ಕೆಲಸ ಮಾಡಬಾರದು. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಮರೆಯಬಾರದು ಎಂದರು.
ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳುವವರೇ ಇಲ್ಲ. ರಾಜ್ಯದಲ್ಲಿ 224 ಕ್ಷೇತ್ರಗಳಿವೆ. ಅರ್ಜಿ ಬಂದಿದ್ದೆ 200 ಒಳಗಡೆ. ಇದರ ಅರ್ಥ ದೇಶದಲ್ಲಿ ಕಾಂಗ್ರೆಸ್ ಅಧೋಗತಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಅದಕ್ಕಿಂತಲೂ ಕಾಂಗ್ರೆಸ್ ಕೆಟ್ಟ ಪರಿಸ್ಥಿತಿಗೆ ಹೋಗುತ್ತದೆ ಎನ್ನುವ ಮುನ್ಸೂಚನೆ ಇದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಹಿರಿಯ ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಇನ್ನು ಕೆಲವರು ಸಾಲಾಗಿ ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಮುಂದಿನ ದಿನಗಳಲ್ಲಿ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳುವುದು ಕಷ್ಟ. ಕಾಂಗ್ರೆಸ್ ಅವಸಾನದಲ್ಲಿದೆ. ಕಾಂಗ್ರೆಸ್ ಮುಳುಗುವ ಹಡಗು. 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. 2024ಕ್ಕೆ ದೇಶದಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿವಾದದ ವಿಚಾರವಾಗಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಈ ಬಗ್ಗೆ ಆರೋಪ ಮಾಡಿದವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶರಣರು, ಸಂತರು, ಸೂಫಿ ಸಂತರು ಕಾವಿ ಧರಿಸುತ್ತಿದ್ದರು. ಕಾವಿಯನ್ನೇ ಉಪಯೋಗ ಮಾಡುತ್ತಿದ್ದರು. ಆ ಕಾವಿಯ ಬಣ್ಣ ಸಾಧು ಸಂತರಿಗೆ ಮಾತ್ರ ಸೀಮಿತ ಆಗಿರಲಿಲ್ಲ. ಈ ದೇಶದ ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ. ವಿನಾಕಾರಣ ವಿವಾದ ಸೃಷ್ಟಿ ಮಾಡುವುದರಲ್ಲಿ ಅರ್ಥ ಇಲ್ಲ ಇದೊಂದು ಸಣ್ಣತನದ, ಕೀಳುಮಟ್ಟದ ರಾಜಕಾರಣ ಆಗುತ್ತದೆ ಎಂದರು.












Click it and Unblock the Notifications