Mudhol Constituency: ಗೋವಿಂದ ಕಾರಜೋಳಗೆ ಸವಾಲೊಡ್ಡಲಿದೆಯೇ ಕಾಂಗ್ರೆಸ್? ವರದಿ, ವಿಶ್ಲೇಷಣೆ
ಈ ಬಾರಿ ಮುಧೋಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್ ಬಿಜೆಪಿ ಸೆಣಸಲಿವೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.
ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಮುಧೋಳ ಎಂದೊಡನೆ ಥಟ್ಟನೆ ನೆನಪಾಗುವುದು ಆದಿಕವಿ ರನ್ನ. ಬಾಗಲಕೋಟೆ ಜಿಲ್ಲೆಯ ಮುಧೋಳ ಈ ಕವಿರತ್ನನ ತವರು. ಹಳೆಗನ್ನಡದ ಹೆಸರಾಂತ ಮಹಾನ್ ಕವಿ ಚಕ್ರವರ್ತಿ ರನ್ನ ಜನಿಸಿದ ಊರು ಈ ಮುಧೋಳ್ ತಾಲೂಕಿನ ಬೆಳಗಲಿ ಎಂಬ ಗ್ರಾಮ. ಇಗಲೂ ಈ ಗ್ರಾಮ ರನ್ನಬೆಳಗಲಿ ಎಂದೇ ಹೆಸರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ತಾಣ ಮತ್ತೊಂದು ಕಾರಣಕ್ಕೂ ಪ್ರಸಿದ್ಧವಾಗಿದೆ. ಕರುನಾಡಿನ ಹೆಮ್ಮೆಯ ಶ್ವಾನ ತಳಿ 'ಮುಧೋಳ ನಾಯಿ' ಇದೇ ನೆಲದ್ದು. ಈ ಮುಧೋಳ ನಾಯಿಗಳು ಭಾರತೀಯ ವಾಯುಪಡೆಗೂ ಸೇರಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಕವಿರತ್ನನ ತವರು ಮುಧೋಳ ಕ್ಷೇತ್ರದಲ್ಲಿ ಈಗ ವಿಧಾನಸಭೆ ಚುನಾವಣೆಗೆ ಮತಯುದ್ಧದ ಕಹಳೆ ಮೊಳಗಿದೆ. ದಿಗ್ಗಜರು ಮತ್ತೊಂದು ಸ್ಪರ್ಧೆಗೆ ಅಣಿಯಾಗಿದ್ದಾರೆ. ಭರಪೂರ ಕಬ್ಬಿನ ಬೆಳೆ, ಸಮೃದ್ಧ ನೀರಾವರಿಯಿಂದ ಗಮನಸೆಳೆಯುವ ಮುಧೋಳ (ಮೀಸಲು)ಕ್ಷೇತ್ರ ಜಿದ್ದಾಜಿದ್ದಿ ರಾಜಕಾರಣಕ್ಕೂ ಹೆಸರಾಗಿದೆ. ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಎದುರಾಳಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಹೋರಾಟಕ್ಕೆ ಮುಧೋಳ ಕ್ಷೇತ್ರ ಈ ಬಾರಿ ಸಾಕ್ಷಿಯಾಗಲಿದೆ.
ಮತ್ತೊಂದು ವಿಚಾರ ಅಂದರೆ ಮುಧೋಳವನ್ನು 'ಶಾಶ್ವತ ಸಚಿವರ ಕ್ಷೇತ್ರ' ಎಂದು ಕರೆಯಲಾಗುತ್ತದೆ. ಯಾಕೆಂದರೆ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಹಲವು ಬಾರಿ ಮಂತ್ರಿಗಿರಿ ಪಡೆದಿದ್ದಾರೆ. ಒಮ್ಮ ಗೋವಿಂದ ಕಾರಜೋಳ, ಮತ್ತೊಮ್ಮೆ ತಿಮ್ಮಾಪೂರ ಸಚಿವ ಸ್ಥಾನ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ಒಂದು ಎಸ್.ಟಿ.ಮೀಸಲಾತಿ ಹೊಂದಿರುವ ಕ್ಷೇತ್ರ ಮುಧೋಳವಾಗಿದೆ. ಕಳೆದ ನಾಲ್ಕು ಚುನಾವಣೆಗಳಿಂದ ಗೋವಿಂಧ ಕಾರಜೋಳ ಅವರು ಗೆಲ್ಲುತ್ತ ಬಂದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಪಕ್ಷದ ಆರ್.ಬಿ.ತಿಮ್ಮಾಪುರ ಮತ್ತು ಸತೀಶ್ ಚಿನ್ನಪ್ಪ ಬಂಡಿವಡ್ಡರ ಸೋಲು ಕಂಡಿದ್ದಾರೆ.
ಈಗ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಮುಧೋಳ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಸತೀಶ್ ಚಿನ್ನಪ್ಪ ಬಂಡಿವಡ್ಡರ್ 15482 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಮುಧೋಳ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

'ಕೈ'ಪಾಳೆಯದಲ್ಲಿ ಟಿಕೆಟ್‌ಗಾಗಿ ಪೈಪೋಟಿ
ಈ ಬಾರಿ ಬಿಜೆಪಿಯಿಂದ ಗೋವಿಂದ ಕಾರಜೋಳ ಹೆಸರು ಅಂತಿಮವಾದಂತಿದೆ. ಆದರೆ ಯುವಕರಿಗೆ ಆದ್ಯತೆ ನೀಡಿದರೆ ಅವರ ಪುತ್ನ ಅರುಣ್ ಕಾರಜೋಳಗೆ ಟಿಕೆಟ್ ನೀಡುವ ಸಾಧ್ಯತೆಗಳು ಇವೆ. ಅರುಣ್ ಕೂಡ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್‌ನಲ್ಲಿ ಆರ್. ಬಿ ತಿಮ್ಮಾಪೂರ ಹಾಗೂ ಯುವ ಮುಖಂಡ ಸತೀಶ್ ಬಂಡಿವಡ್ಡರ ಆಕಾಂಕ್ಷಿಗಳಾಗಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ತಿಮ್ಮಾಪೂರ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಲಾಗಿತ್ತು. 2018ರ ಚುನಾವಣೆಯಲ್ಲಿ ಸತೀಶ್‌ಗೆ ಟಿಕೆಟ್ ಸಿಕ್ಕಿತ್ತು. ಈತ ತಮ್ಮಾಪುರ ಸ್ಪರ್ಧೆಗೆ ಸಿದ್ಧರಾಗಿದ್ದು, ಸತೀಶ್ ಕೂಡ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇದರಿಂದ 'ಕೈ'ಪಾಳೆಯದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.
ಈ ಮುಧೋಳ್ ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟಾಗಿ ಪ್ರಾಬಲ್ಯವನ್ನು ಹೊಂದಿಲ್ಲ. ಸೂಕ್ತ ಅಭ್ಯರ್ಥಿ ಹುಟುಕಾಟದಲ್ಲಿ ತೆನೆಹೊತ್ತ ಮಹಿಳೆ ಇದ್ದಾಳೆ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್- ಬಿಜೆಪಿ ನಡುವೆ ನೇರಾ ಜಿದ್ದಾಜಿದ್ದಿ ಏರ್ಪಡುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕ
ಶಾಸಕ ಗೋವಿಂದ ಕಾರಜೋಳ ಅವರು ನೀರಾವರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ಇಲ್ಲಿನ ಕಾರ್ಯಕರ್ತರ ಮಾತು. ಇಲ್ಲಿ ರೆಡ್ಡಿ ಸುಮುದಾಯದ ಮತಗಳು ನಿರ್ಣಾಯಕ. ಒಳ ಒಪ್ಪಂದದ ರಾಜಕೀಯ ನಡೆಯುತ್ತೆ ಎನ್ನುವುದು ಸದ್ಯದ ಸುದ್ದಿ. ಗೋವಿಂದ ಕಾರಜೋಳ ಅವರ ತಂತ್ರಗಾರಿಕೆಯಿಂದ ಈ ಬಾರಿ ಮತ್ತೆ ಗೆಲ್ಲಲಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಗೋವಿಂದ ಕಾರಜೋಳ ಅವರು ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ ಮುಗಿಸಿದ್ದಾರೆ. ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಕಾರಜೋಳ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಇವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಲಸಂನ್ಮೂಲ ಸಚಿವರಾಗಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋವಿಂದ ಎಂ. ಕಾರಜೋಳ ಪೂರ್ಣ ಹೆಸರು ಗೋವಿಂದ ಮುಕ್ತಪ್ಪ ಕಾರಜೋಳ. ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕ.

ಮುಧೋಳ ಸಮಸ್ಯೆಗಳಿಗೆ 'ಕೈ' ಕಮಲವೇ ಕಾರಣ?
ಸಕ್ಕರೆ ಕಾರ್ಖಾನೆ ವರ್ಷದ ಹಿಂದೆ ಬಂದ್ ಮಾಡಿ ಖಾಸಗಿಗೆ ನೀಡುವ ವಿಚಾರವಾಗಿ ಇಲ್ಲಿ ಹಲವಾರು ಬಾರಿ ಹೋರಾಟ ನಡೆದಿವೆ. ಕಾರಜೋಳ ಆಪ್ತ ರಾಮಣ್ಣ ತಳೇವಾಡ ಅಧ್ಯಕ್ಷತೆಯ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಇದಾಗಿದ್ದು ಖಾಸಗಿಗೆ ನೀಡುವುದನ್ನು ವಿರೋಧಿಸಿ ಕಾಂಗ್ರೆಸ್‌ನ ತಿಮ್ಮಾಪೂರ ಕೂಡ ಪ್ರತಿಭಟನೆ ಮಾಡಿದ್ದಾರೆ. ನಂತರ ಈಗಿನ ಆಡಳಿತ ಮಂಡಳಿಯೇ ಕಾರ್ಖಾನೆ ಆರಂಭಿಸುವುದಾಗಿ ಘೋಷಿಸಲಾಯಿತು. ಕಬ್ಬು ಬೆಳೆಗಾರರು ಅಧಿಕವಾಗಿರುವ ಮುಧೋಳ ಕ್ಷೇತ್ರದಲ್ಲಿ ಕೃಷಿ ಸಮಸ್ಯೆಗಳ ಬಗ್ಗೆ ಹೋರಾಟ ನಡೆದಿವೆ. ಈ ಹೋರಾಟಗಳು ರಾಜಕಾರಣದ ಮೇಲೂ ಪ್ರಭಾವ ಬೀರುತ್ತಿವೆ.
ಇನ್ನೂ ಇಲ್ಲಿನ ಮತ್ತೊಂದು ಬಹುದೊಡ್ಡ ಸಮಸ್ಯೆ ಅಂದರೆ ಘಟಪ್ರಭಾ ನದಿ ಪ್ರವಾಹ. ಘಟಪ್ರಭಾ ನದಿ ಪ್ರವಾಹದಿಂದ ಕಂಗಾಲಾಗಿದ್ದ ಮುಧೋಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಈ ಕ್ಷೇತ್ರವನ್ನು ಮಾದಿಗ ಕ್ಷೇತ್ರವನ್ನಾಗಿಸುತ್ತೇನೆಂದು ಕಾರಜೋಳ ಮತಭೇಟೆಯನ್ನು ಶುರುಮಾಡಿದ್ದಾರೆ. ಇತ್ತ 'ನಾನು ರೂಸಿಪಿದ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಅಭಿವೃದ್ಧಿ ಆಗಿಲ್ಲ,'' ಎನ್ನುವುದು ತಮ್ಮಾಪೂರ ಪ್ರತಿವಾದಿಸುತ್ತಾ ಮತದಾರರಿಗೆ ಹಲವಾರು ಭರವಸೆ ನಿಡಲು ಮುಂದಾಗಿದ್ದಾರೆ. ಇನ್ನೂ ಸ್ಥಳೀಯರಲ್ಲಿ ಕುಡಚಿ- ಬಾಗಲಕೋಟೆ ರೈಲು ಮಾರ್ಗ ಕಾಮಗಾರಿ ಚುರುಕು, ಯುಕೆಪಿ ಅಡಿ ಮುಳುಗಡೆಯಾಗುವ ಗ್ರಾಮಗಳ ತ್ವರಿತ ಸ್ಥಳಾಂತರ ಬೇಡಿಕೆಗಳು ಇವೆ.

ಮುಧೋಳ ಕ್ಷೇತ್ರ ಮತದಾರರ ಸಂಖ್ಯೆ
ಮುಧೋಳ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 95564 ಇದ್ದು ಮಹಿಳಾ ಮತದಾರರ ಸಂಖ್ಯೆ 96168 ಇದೆ. ಒಟ್ಟು ಮುಧೋಳ ಕ್ಷೇತ್ರದಲ್ಲಿ 191735 ಮತದಾರರಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ರೆಡ್ಡಿ ಸಮಾಜದ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಕುರುಬ ಹಾಗೂ ಲಿಂಗಾಯತ ಸಮಾಜ, ಮುಸ್ಲೀಂ ಮತಗಳು ನಂತರದ ಸ್ಥಾನಗಳಲ್ಲಿವೆ. ಗೋವಿಂದ ಕಾರಜೋಳ ಹಾಗೂ ಆರ್.ಬಿ ತಿಮ್ಮಾಪೂರ ಮಾದಿಗ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತಗಳು ಅಧಿಕವಾಗಿದ್ದು, ಸಹಜವಾಗಿ ಮತಗಳಿಕೆಗೆ ಹೋರಾಟ ನಡೆಯುತ್ತಿದೆ. ಈ ಬಾರಿ ಮತದಾರರು ಯಾರತ್ತ ವಾಲುತ್ತಾರೆಂದು ಕಾದು ನೋಡಬೇಕಿದೆ.












Click it and Unblock the Notifications