ಅಂತಿಮ ಪಯಣ ಮುಗಿಸಿದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ
ಬಾಗಲಕೋಟೆ, ಮೇ 21 : ದುಶ್ಚಟವನ್ನು ಜೋಳಿಗೆಗೆ ಹಾಕಿ ಎಂದು ಸಾರುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದ ಮಹಾಂತ ಶ್ರೀಗಳು ಅಂತಿಮ ಯಾತ್ರೆ ಮುಗಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ಇಂದು ಸೋಮವಾರ ನೆರವೇರಿಸಲಾಯಿತು. ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಜಿಲ್ಲಾಡಳಿತದ ವತಿಯಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ವೀರಮಣಿ ಕ್ರೀಡಾಂಗಣದಲ್ಲಿ ಶ್ರೀಗಳ ಅಂತಿಮ ದರ್ಶನದ ನಂತರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಪ್ರದೇಶಗಳ ಭಕ್ತ ಸಮೂಹ, ಪ್ರಮುಖ ಮಠಾಧೀಶರು, ರಾಜಕೀಯ ಮುಖಂಡರು ಭಾಗವಹಿಸಿ ಅಂತಿಮ ದರ್ಶನ ಪಡೆದುಕೊಂಡರು.

ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಜಾನಪದ ಸಂಗೀತ ಏರ್ಪಡಿಸಲಾಗಿತ್ತು. ನಂತರ ವಿಜಯ ಮಹಾಂತ ಕೃರ್ತಗೆ ಹತ್ತಿರ ಶ್ರೀಗಳ ಲಿಂಗಾಯತ ಧರ್ಮದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಇತರ ಗಣ್ಯರು, ಪ್ರಮುಖ ಪೀಠಾಧೀಶರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ಯಡಿಯೂರಪ್ಪ ಅವರು ಮಾತನಾಡಿ, ಲಿಂಗೈಕ್ಯವಾಗಿರುವ ಮಹಾಂತ ಶ್ರೀಗಳ ಬಗ್ಗೆ ಕೊಂಡಾಡಿದರು. ಇಂತಹ ಮಹಾನ್ ಶ್ರೀಗಳನ್ನು ಕಳೆದುಕೊಂಡಿದ್ದು, ಈ ನಾಡಿಗೆ ತುಂಬಲಾರದ ನಷ್ಟ ಎಂದರು.












Click it and Unblock the Notifications