ಶಿವಾಜಿ ಇಲ್ಲದಿದ್ದರೆ ಹಿಂದೂಗಳು ಇಸ್ಲಾಂಗೆ ಮತಾಂತರವಾಗುತ್ತಿದ್ದರು: ಕೆ.ಎಸ್.ಈಶ್ವರಪ್ಪ
ಬಾಗಲಕೋಟೆ, ಆಗಸ್ಟ್ 28: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ತೆರವು ವಿಚಾರದಲ್ಲಿ ಕರ್ನಾಟಕ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಶಿವಾಜಿ ಮಹಾರಾಜರಿಲ್ಲದಿದ್ದರೆ ಹಿಂದೂಗಳೆಲ್ಲ ಇಸ್ಲಾಂಗೆ ಮತಾಂತರವಾಗುತ್ತಿದ್ದರು ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಸೋಮವಾರ ಹೇಳಿಕೆ ನೀಡಿದ್ದಾರೆ.
ಜಿಲ್ಲಾಡಳಿತದಿಂದ ಶಿವಾಜಿ ಮಹಾರಾಜರ ಪ್ರತಿಮೆ ತೆರವು ಮಾಡಿದ್ದನ್ನು ಸೋಮವಾರ ಬಾಗಲಕೋಟೆಯಲ್ಲಿ ಬಿಜೆಪಿಯ ಫೈರ್‌ಬ್ರಾಂಡ್ ಮುಖಂಡ ಕೆಎಸ್ ಈಶ್ವರಪ್ಪ ಖಂಡಿಸಿದರು.

ಛತ್ರಪತಿ ಶಿವಾಜಿ ಮಹಾರಾಜರಿಲ್ಲದಿದ್ದರೆ ನಾನು ಮತ್ತು ನೀವು ಹಿಂದೂಗಳಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ನಾವು ಸಹ ಕತ್ತರಿಸಲ್ಪಡುತ್ತಿದ್ದೆವು (ಸುನ್ನತ್). ನಾನು ಗಂಭೀರವಾಗಿ ಮಾತನಾಡುತ್ತಿದ್ದೇನೆ, ಅಲ್ಲದೆ ನಾನು ಪ್ರಕರಣಗಳಿಗೆ ಹೆದರುವುದಿಲ್ಲ. ಅವರು ನಮ್ಮನ್ನು ತುಂಡುಗಳಾಗಿ ಕತ್ತರಿಸುತ್ತಿದ್ದರು. ಸಾವರ್ಕರ್ ಸೇರಿದಂತೆ ಇಂತಹ ವ್ಯಕ್ತಿಗಳನ್ನು ಅವಮಾನಿಸಿ ಮುಸ್ಲಿಂ ಮತಗಳನ್ನು ಪಡೆಯುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕಾಂಗ್ರೆಸ್ ದೇಶವಿರೋಧಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಬಹಿರಂಗವಾಗಿ ಹೇಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಯಾರ ಆದೇಶದ ಮೇರೆಗೆ ಜಿಲ್ಲಾಡಳಿತ ಶಿವಾಜಿ ಪ್ರತಿಮೆಯನ್ನು ತೆಗೆದಿದೆ ಎಂದು ಪ್ರಶ್ನಿಸಿದರು. ಎರಡು ದಿನಗಳ ನಂತರ ಪ್ರತಿಮೆಯನ್ನು ಏಕೆ ತೆಗೆದುಹಾಕಲಾಯಿತು? ಯಾವ ಕಾಂಗ್ರೆಸ್ ನಾಯಕ ಅವರಿಗೆ ಬೆದರಿಕೆ ಹಾಕಿದ್ದಾರೆ ಇಲ್ಲ ಬ್ಲಾಕ್ ಮೇಲ್ ಮಾಡಿದ್ದಾರೆ? ತನಿಖೆ ನಡೆಸಿ, ಘಟನೆಯ ಹಿಂದೆ ಇರುವ ಸಚಿವರು ರಾಜೀನಾಮೆ ನೀಡಬೇಕು. ಇದು ಬಾಗಲಕೋಟೆಗೆ ಮಾಡಿದ ಅವಮಾನವಲ್ಲ ದೇಶದ ಹಿಂದೂಗಳಿಗೆ ಮಾಡಿದ ಅವಮಾನ ಎಂದು ಹಿರಿಯ ಮುಖಂಡರು ಹೇಳಿದರು.
ಆಗಸ್ಟ್ 13 ರಂದು ಬಾಗಲಕೋಟೆಯ ಸೋನಾರ್ ಲೇಔಟ್‌ನಲ್ಲಿ ಜನರ ಗುಂಪು ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಿತ್ತು. ಅನುಮತಿ ಪಡೆಯದೆ ಅಕ್ರಮವಾಗಿ ಅಳವಡಿಸಲಾಗಿದೆ ಎಂದು ಜಿಲ್ಲಾಡಳಿತ ಆರೋಪಿಸಿ ಆಗಸ್ಟ್ 15ರಂದು ತೆರವು ಮಾಡಿತ್ತು. ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಗಸ್ಟ್ 19ರಂದು ಬಂದ್ ಆಚರಿಸಿದ್ದವು.
ಪ್ರತಿಮೆ ತೆರವಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಅವರು ಪ್ರತಿಮೆಯನ್ನು ಮರುಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.












Click it and Unblock the Notifications