ನಟಿ ಜೊತೆಗೆ ಫೋಟೋ ವೈರಲ್: 2ನೇ ಮದುವೆಯಾದ್ರಾ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್?
ಬಾಗಲಕೋಟೆ, ಜುಲೈ 23: ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಟಿಯೊಬ್ಬರ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು, ಮಾಜಿ ಶಾಸಕ 2ನೇ ವಿವಾಹವಾಗಿರಬಹುದೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ನಟಿ ಜೊತೆಗಿನ ಫೋಟೋಗಳ ಜೊತೆಗೆ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗುತ್ತಿದ್ದು, ಅದರಲ್ಲಿ ತಂದೆಯ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂಬ ಹೆಸರನ್ನು ನಮೂದಿಸಲಾಗಿದೆ. ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ಪೂಜಾಶ್ರಿ ಎಸ್ ಎಂದಿದೆ, ಹಾಗಾಗಿ ವಿಜಯಾನಂದ ಕಾಶಪ್ಪನವರ ಪೂಜಾಶ್ರಿ ಎಂಬ ನಟಿಯ ಜೊತೆ ಎರಡನೇ ಮದುವೆ ಆಗಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಜನನ ಪ್ರಮಾಣ ಪತ್ರದಲ್ಲಿ ಮಗು ಹೆಣ್ಣುಮಗುವಾಗಿದ್ದು, ಜನ್ಮದಿನಾಂಕ 1-9-2021, ಜನ್ಮಸ್ಥಳ ಮದರ್ ಹುಡ್ ಆಸ್ಪತ್ರೆ ಬೆಂಗಳೂರು, ನೋಂದಣಿ ದಿನಾಂಕ 22-09-2021 ಎಂದು ಎಂದು ನಮೂದಾಗಿದೆ.

ಮೊದಲ ಪತ್ನಿ ವೀಣಾ ಕಾಶಪ್ಪನವರ ಜೊತೆಗಿನ ಜಗಳಕ್ಕೆ ಇದೇ ಕಾರಣವಾ?
ಇನ್ನೂ ಕಳೆದ ಒಂದು ವರ್ಷದ ಹಿಂದೆ ವಿಜಯಾನಂದ ಕಾಶಪ್ಪನವರ ಮತ್ತು ಮೊದಲ ಪತ್ನಿ ವೀಣಾ ಕಾಶಪ್ಪನವರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದ್ದು, ಇದಕ್ಕೆ 2ನೇ ಮದುವೆಯೇ ಮುಖ್ಯ ಕಾರಣ ಎಂಬ ಮಾತು ಬಾಗಲಕೋಟೆಯಲ್ಲಿ ಈ ಹಿಂದೆ ಕೇಳಿಬಂದಿತ್ತು. ಇದೀಗ ನಟಿಯೊಂದಗಿನ ಫೋಟೋ ಹಾಗೂ ಮಗುವಿನ ಜನನ ಪ್ರಮಾಣದಲ್ಲಿ ಹೆಸರು ಹಾಗೂ ಕಳೆದ ವರ್ಷ ವೀಣಾರ ಜೊತೆಗಿನ ಜಗಳ ಎಲ್ಲವೂ ವಿಜಯಾನಂದ ಅವರು 2ನೇ ವಿವಾಹ ಆಗಿರಬಹುದು ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿವೆ.
ಕಾಶಪ್ಪನವರ ಪ್ರತಿಕ್ರಿಯೆ
ಕೊಪ್ಪಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ನೀವು ಎರಡನೇ ವಿವಾಹವಾಗಿದ್ದೀರಾ, ಕೆಲವು ಯುವತಿಯೊಂದಿಗಿರುವ ನಿಮ್ಮ ಫೋಟೋಗಳು ವೈರಲ್ ಆಗುತ್ತಿವೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ವಿಜಯಾನಂದ ಕಾಶಪ್ಪನವರ, " ನನಗೆ ಯಾವುದೇ ಫೋಟೋಸ್ ಬಂದಿಲ್ಲ, ನನಗೆ ಸಿಕ್ಕಿಲ್ಲ, ನೀವು ದಾಖಲೆ ತಂದುಕೊಟ್ಟರೆ ನಾನು ಮಾತನಾಡುತ್ತೇನೆ. ದಾಖಲೆ ಕೊಡಲಿಲ್ಲ ಎಂದರೆ ನಾನು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ" ಎಂದರು.

ವೈಯಕ್ತಿಕ ಬದುಕನ್ನು ಯಾರಾದರೂ ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ, " ನೋಡಿ, ಯಾರ ವೈಯಕ್ತಿಕಕ್ಕೂ ಹೋಗಬಾರದು, ರಾಜಕೀಯ ಜೀವನ ಬೇರೆ, ವೈಯಕ್ತಿಕ ಜೀವನ ಬೇರೆ ಇರುತ್ತದೆ. ನೀವು ಜನನ ಪ್ರಮಾಣ ಪತ್ರವನ್ನು ತಂದು ನನಗೆ ತೋರಿಸಿದರೆ ನಾನು ನಂತರ ಮಾತನಾಡುತ್ತೇನೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಇಂತದ್ದೆಲ್ಲಾ ಮಾಡಿಕೊಳ್ತಾರೆ, ಇದನ್ನೇ ಕಾಯುತ್ತಿರುತ್ತಾರೆ, ಇಂತದಕ್ಕೆಲ್ಲಾ ನಾವು ಬಗ್ಗೋದಿಲ್ಲ, ಜಗ್ಗೋದಿಲ್ಲ ಎಂದು ತಿಳಿಸಿದರು.












Click it and Unblock the Notifications