ಬಾಗಲಕೋಟೆ: ಊರಿನ ಕೆರೆಯಲ್ಲಿ ಕಂಡ ಮೊಸಳೆಯನ್ನು ಕೊಲ್ಲುತ್ತೇನೆಂದು ನೀರಿಗೆ ಜಿಗಿದ ಕುಡುಕ!
ಬಾಗಲಕೋಟೆ, ಅಕ್ಟೋಬರ್ 7: ಪ್ರವಾಹಕ್ಕೆ ಸಿಲುಕಿ ನದಿ ತಟದಿಂದ ಬೇರೋಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಮುರನಾಳ ಗ್ರಾಮದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದ್ದು, ನಿದ್ದೆಗೆಡಿಸುತ್ತಿದೆ.
ಊರಿನ ಆಸುಪಾಸಿನಲ್ಲಿ ಯಾವ ನದಿಯೂ ಇಲ್ಲ. ಆದರೂ ಆ ಊರಲ್ಲಿ ಕಾಣಿಸಿಕೊಂಡಿರುವ ಮೊಸಳೆ ಪತ್ತೆಯಾಗಿದೆ. ಅರಣ್ಯ ಇಲಾಖೆ ಕೈಗೆ ಸಿಗದೆ ಆಟವಾಡಿಸುತ್ತಿದೆ. ಕೆರೆ ಅಕ್ಕಪಕ್ಕದಲ್ಲಿ ಸ್ಕೂಲು, ಮನೆಗಳಿರುವ ಕಾರಣದಿಂದ ಬೃಹತ್ ಮೊಸಳೆ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ.
ಈ ಹಿಂದೆ ಘಟಪ್ರಭಾ ನದಿ ತೀರದಲ್ಲಿದ್ದ ಮುರನಾಳ ಗ್ರಾಮ ಮುಳುಗಡೆಯ ಬಳಿಕ ಸ್ಥಳಾಂತರಗೊಂಡಿದೆ. ಅದು ನದಿ ತೀರದಿಂದ ಸುಮಾರು 10 ಕಿ.ಮೀ ದೂರದಲ್ಲಿ ಅದರಲ್ಲೂ ಜನನಿಬೀಡ ಪ್ರದೇಶದಲ್ಲಿ ಹೊಸ ಮುರನಾಳ ಗ್ರಾಮ ಮರಳಿ ಅಸ್ತಿತ್ವ ಪಡೆದುಕೊಳ್ಳುತ್ತಿದೆ. ಹೀಗಿರುವಾಗ ಮುರನಾಳ ಗ್ರಾಮದಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡಿರುವುದು ಅಚ್ಚರಿ ತಂದಿದೆ.
ಗ್ರಾಮದ ಯುವಕರು ಡ್ರೋನ್ ಮೂಲಕ ಕೆರೆ ಚಿತ್ರಿಕರಿಸುವಾಗ ಮೊಸಳೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಕ್ಷಣ ಯುವಕರು ಮೊಸಳೆ ಹೋಗುವದನ್ನ ಕೆಲವು ಸೆಕೆಂಡುಗಳವರೆಗೆ ಸೆರೆ ಹಿಡಿದಿದ್ದರು. ಈ ಕೆರೆ ಊರ ಮದ್ಯದಲ್ಲೇ ಇರುವುದಿರಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ನಿತ್ಯ ಗ್ರಾಮದ ದನಕರುಗಳು ಇದೆ ಕೆರೆಯಲ್ಲೇ ನೀರು ಕುಡಿಯುತ್ತಿದ್ದವು. ಆದರೆ ಮೊಸಳೆ ಇವರೆಗೂ ಯಾವುದೇ ತೊಂದರೆ ಮಾಡಿರದಿದ್ದಕ್ಕೆ ಮೊಸಳೆ ಇರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಇದೀಗ ಡ್ರೋನ್‌ನಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದಾಗಿ ಗ್ರಾಮದ ಜನತೆಗೆ ಅಚ್ಚರಿ ಜೊತೆಗೆ ಆತಂಕವನ್ನುಂಟು ಮಾಡಿತ್ತು.

ಕೆರೆಯ ನೀರಿಗೆ ಅವಲಂಬಿಸದಿರುವುದರಿಂದ ತಪ್ಪಿದ ದುರಂತ
ಸುಮಾರು 6 ರಿಂದ 7 ಅಡಿಯಷ್ಟು ಉದ್ದವಿರುವ ಮೊಸಳೆಯು ಮುರನಾಳ ಗ್ರಾಮದಲ್ಲಿ ಇರುವ ಬೃಹತ್ ಕೆರೆಯಲ್ಲಿ ವಾಸವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಮೊಸಳೆ ಪತ್ತೆಯಾಗಿದ್ದು, ಗ್ರಾಮಸ್ಥರು ಕೆರೆ ಕಡೆಗೆ ಹೆಚ್ಚಾಗಿ ಹೋಗದೇ ಇರುವುದು. ಮತ್ತು ಕೆರೆಯ ನೀರಿಗೆ ಅವಲಂಬನೆ ಮಾಡಿಕೊಳ್ಳದೇ ಇರುವುದು ದುರಂತ ಉಂಟಾಗುವುದನ್ನು ತಪ್ಪಿಸಿದೆ.
ಅಚ್ಚರಿಯ ವಿಷಯವೆಂದರೆ ಮೊಸಳೆಗೆ ಇದುವರೆಗೂ ಯಾವುದೇ ಪ್ರಾಣಿಗಳು ಆಹುತಿಯಾಗಿಲ್ಲ. ಆದರೆ ಬೃಹತ್ ಮೊಸಳೆ ಗ್ರಾಮದ ಕೆರೆಯಲ್ಲಿ ಇರುವುದು ಗ್ರಾಮಸ್ಥರಲ್ಲಿ ಭಯವನ್ನು ಉಂಟು ಮಾಡಿದೆ. ಕೆರೆಯ ಅಕ್ಕಪಕ್ಕದಲ್ಲಿ ಅನೇಕ ಮನೆಗಳಿವೆ. ಜೊತೆಗೆ ಶಾಲೆಯೂ ಇದೆ. ಹೀಗಾಗಿ ಶೀಘ್ರವೇ ಮೊಸಳೆ ಹಿಡಿಯುವ ಕಾರ್ಯ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಮೊಸಳೆ ಹಿಡಿಯಲು ಕೆರೆಗೆ ಜಿಗಿದ ಕುಡುಕ
ಕುಡಕನೊಬ್ಬ ಕೆರೆಯಲ್ಲಿನ ಮೊಸಳೆ ಹಿಡಿಯುತ್ತೇನೆ ಎಂದು ಕೆರೆಗೆ ಧುಮುಕಿ ದುಸ್ಸಾಹಸ ಮೆರೆದ ಘಟನೆಯೂ ನಡೆಯಿತು. ಮೌಲಾಸಾಬ್ ವಾಲೀಕಾರ್ ಎಂಬ ಕುಡುಕ ಮತ್ತಿನಲ್ಲಿ ಮುರನಾಳನದಲ್ಲಿರುವ ಕೆರೆಯಲ್ಲಿರುವ ಮೊಸಳೆ ಕೊಲ್ಲುತ್ತೇನೆ ಎಂದು ಕೆರೆಗೆ ಜಿಗಿದಿದ್ದಾನೆ. ಬಳಿಕ ಕಾಪಾಡಿ ಎಂದು ಕಿರುಚಾಡಿದಾಗ ಗ್ರಾಮದ ಮತ್ತೊಬ್ಬರು ಕೆರೆಗೆ ಧುಮುಕಿ ಮೌಲಾಸಾಬ್ ನನ್ನು ರಕ್ಷಿಸಿದ್ದಾರೆ.

ಮೊಸಳೆ ನೋಡಲು ಮುಗಿಬಿದ್ದ ಜನತೆ
ಇತ್ತ ಕೆರೆಯ ಸುತ್ತಮುತ್ತಲೂ ಪೊಲೀಸರನ್ನು ಕೂಡಾ ನಿಯೋಜನೆ ಮಾಡಲಾಗಿದೆ. ಆದರೂ ಜನ ಮೊಸಳೆ ನೋಡುವ ಉತ್ಸಾಹದಿಂದ ಕೆರೆ ಕಡೆಗೆ ಬರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ಮುರುನಾಳ ಗ್ರಾಮದ ಕೆರೆಯಲ್ಲಿರುವ ಮೊಸಳೆ ಬಗ್ಗೆ ತಿಳಿದ ತಕ್ಷಣ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳ ಕಾರ್ಯಪ್ರವೃತ್ತರಾಗಿದ್ದಾರೆ. ಜನರು ಕೆರೆ ಬಳಿ ಹೋಗದಂತೆ ಗ್ರಾಮದ ಅಲ್ಲಲ್ಲಿ ಎಚ್ಚರಿಕೆಯ ಬ್ಯಾನರ್ ಗಳನ್ನು ಅಳವಡಿಸಿದ್ದಾರೆ.

ಆದಷ್ಟು ಬೇಗ ಮೊಸಳೆ ಹಿಡಿಯಲು ಒತ್ತಾಯ
ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು, ಅಧಿಕಾರಿಗಳು ಕೆರೆಯಲ್ಲಿನ ಮೊಸಳೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಆಲೋಚನೆಯಲ್ಲಿದ್ದಾರೆ. ಆದಷ್ಟು ಬೇಗ ಮೊಸಳೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಶೀಘ್ರವಾಗಿ ಮೊಸಳೆ ಸೆರೆಹಿಡಿದು ಗ್ರಾಮಸ್ಥರ ಭಯ ದೂರ ಮಾಡಬೇಕಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರು ತಿಳಿಸಿದ್ದಾರೆ.












Click it and Unblock the Notifications