ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ : ವೀರಣ್ಣ ಚರಂತಿಮಠ
ಬಾಗಲಕೋಟೆ, ಮೇ 27 : ಹಸಿದವರು ಮತ್ತು ಹಳಸಿದವರು ಕೂಡಿಕೊಂಡು ಮಾಡಿರುವ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಲ್ಪ ಕಾಲ ಆಡಳಿತ ನಡೆಸಲಿದ್ದು, ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗಾಗಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇನ್ನು ಅಧಿಕಾರ ವಹಿಸಿಕೊಂಡು ನಾಲ್ಕೈದು ದಿನಗಳು ಕಳೆದಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಸರ್ಕಾರ ಗೊಂದಲದಲ್ಲೇ ಬಿದ್ದು ಹೋಗಲಿದೆ ಎಂದರು. ಅತಿ ವೇಗವಾಗಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜನರ ಕಲ್ಯಾಣಕ್ಕಾಗಿ ಬರಲಿದೆ.

2018ರಲ್ಲಿ ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ರಾಜ್ಯದಲ್ಲಿರುವ ಕಿಚಡಿ ಸರ್ಕಾರ ಮತ್ತು ಅಪಮೈತ್ರಿ ಮಾಡಿಕೊಂಡ ಸರ್ಕಾರಕ್ಕೆ ಆಯುಷ್ಯ ಕಡಿಮೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದು ಟೀಕಿಸಿದರು.












Click it and Unblock the Notifications