ಮಳೆ ತಂದ ಆಪತ್ತು: ಬಾಗಲಕೋಟೆಯಲ್ಲಿ ಸಿಡಿಲು ಬಡಿದು ಬಾಲಕಿ ಸಾವು! ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಕಳೆದ ದಿನ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಗೆ ಸಿಡಿಲು ಬಡಿದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಕೈಗೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶಿವಮೊಗ್ಗ, ಕೊಪ್ಪಳ, ತುಮಕೂರು, ಬಾಗಲಕೋಟೆ, ಚಿಕ್ಕಮಗಳೂರು ಸೇರಿ ರಾಜ್ಯದ ಒಂಬತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದ್ದು ಬಾಗಲಕೋಟೆ ಜಿಲ್ಲೆಯ ಜಾಡರ ಅರಳಿಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.

ಬಾಲಗಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಡರ ಅರಳಿಕಟ್ಟೆ ಗ್ರಾಮದ ಭಾಗ್ಯ ಶ್ರೀ (16) ಮೃತ ಬಾಲಕಿ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ರಾಯಚೂರಿನಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದ್ದು ರಸ್ತೆ, ವೃತ್ತಗಳು ಜಲಾವೃತಗೊಂಡಿವೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸಿಡಿಲು ಬಡಿದು ದನದ ಕೊಟ್ಟಿಗೆ ಸುಟ್ಟು ಭಸ್ಮವಾಗಿದೆ. ದಾವಣಗೆರೆಯ ರಾಮಕೃಷ್ಣನಗರದಲ್ಲಿ ತಾತ್ಕಾಲಿಕ ಶೆಡ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, 500 ಕುಟುಂಬಗಳು ಅತಂತ್ರವಾಗಿವೆ. ಹಾಸನದ ಅರಕಗೂಡು ತಾಲೂಕಿನ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ರಾಜಧಾನಿ ಬೆಂಗಳೂರಿನಲ್ಲಿ ಮೇ 19 ಹಾಗೂ ಮೇ 20ರಂದು ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ. ಇನ್ನು ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು, ಮೇ 21ಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.












Click it and Unblock the Notifications