ಗೂಳಿಗಳು ತಿವಿದುಕೊಂಡು ಸಾಯುತ್ತವೆ: ಡಿಕೆಶಿ-ಎಚ್‌ಡಿಕೆ ದೋಸ್ತಿಗೆ ಈಶ್ವರಪ್ಪ ಲೇವಡಿ
ಬಾಗಲಕೋಟೆ, ಮಾರ್ಚ್ 27: ಚುನಾವಣೆ ಮುಗಿಯುತ್ತಿದ್ದಂತೆಯೇ ಎರಡು ಗೂಳಿಗಳು ಪರಸ್ಪರ ಗುದ್ದಾಡಿಕೊಂಡು ಸರ್ವನಾಶವಾಗುತ್ತವೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ಡಿ.ಕೆ. ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಜೋಡಿಯನ್ನು ಲೇವಡಿ ಮಾಡಿದರು.
ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಎರಡು ಗೂಳಿಗಳು ಜಾಗೃತವಾಗಿ ಒಂದಾಗಿವೆ. ಒಂದಾಗದಿದ್ದರೆ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ, ಮತ್ತೊಬ್ಬರಿಗೆ ಸಚಿವ ಸ್ಥಾನ ಹೋಗುತ್ತದೆ ಎಂದು ಭಯ. ಇದು ಮೇಲ್ನೋಟಕ್ಕೆ ಮಾತ್ರ. ಯಾವುದೇ ಕಾರಣಕ್ಕೂ ಜೆಡಿಎಸ್ ಗೆಲ್ಲಿಸಲು ಕಾಂಗ್ರೆಸ್, ಕಾಂಗ್ರೆಸ್ ಗೆಲ್ಲಿಸಲು ಜೆಡಿಎಸ್ ಪ್ರಯತ್ನ ನಡೆಸುವುದಿಲ್ಲ. ಈಗ ಹೇಗೋ ಚುನಾವಣೆ ಎದುರಿಸುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಬಹಿರಂಗವಾಗಿ ಬಡಿದಾಡಿಕೊಳ್ಳುತ್ತಾರೆ.
ಎರಡು ಗೂಳಿಗಳು ಒಬ್ಬರಿಗೊಬ್ಬರು ತಿವಿದುಕೊಂಡು ಸಂಹಾರ ಆಗುವುದರಲ್ಲಿ ಸಂಶಯವಿಲ್ಲ. ಯಾರು ಕಳ್ಳೆತ್ತು ನಿಜವಾಗಿ ಕೆಲಸ ಮಾಡುವ ಎತ್ತು ಎಂದು ಗೊತ್ತಾಗದಷ್ಟು ಮಂಡ್ಯದ ಜನರು ದಡ್ಡರಾ? ಎಂದು ಪ್ರಶ್ನಿಸಿದರು.

ಎಚ್ ಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ಇಬ್ಬರೂ ಧೃತರಾಷ್ಟ್ರರು. ಇಬ್ಬರೂ ಧೃತರಾಷ್ಟ್ರರು ಆಲಿಂಗನ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡೂ ಪಕ್ಷಗಳು ನಿರ್ನಾಮ ಆಗುತ್ತವೆ ಎಂದರು.
ಯಾರ ಪರವಾಗಿ ಯಾರು ಬೇಕಾದರೂ ಮತ ಕೇಳಬಹುದು. ಸುಮಲತಾ, ದರ್ಶನ್, ಯಶ್ ಸೇರಿದಂತೆ ಸುಮಲತಾ ಪರವಾಗಿ ಪ್ರಚಾರ ಮಾಡುವವರಿಗೆ ಪೊಲೀಸರ ರಕ್ಷಣೆ ಕೊಡಬೇಕು. ಸುಮಲತಾ ಗೆಲ್ಲುತ್ತಾರೆಂದು ಮೂರು ಜನ ಸುಮಲತಾರನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ. ಇನ್ನಷ್ಟು ಸುಮಲತಾರನ್ನು ಜೆಡಿಎಸ್ ಹುಡುಕಲಿ. ಮಂಡ್ಯದಲ್ಲಿ ಸಿಗದೆ ಇದ್ದರೆ, ಬೇರೆ ಜಿಲ್ಲೆಗಳಿಂದ ನೂರು ಸುಮಲತಾರನ್ನು ತರಲಿ. ಎಷ್ಟು ಜನರನ್ನು ನಿಲ್ಲಿಸಿದರೂ ಮಂಡ್ಯದ ಜನರು ಜೆಡಿಎಸ್ ಸೋಲಿಸಲು ತೀರ್ಮಾನಿಸಿದ್ದಾರೆ ಎಂದರು.
ರಾಹು, ಕೇತು, ಶನಿ ನನ್ನನ್ನು ಸೋಲಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಮೂವರಲ್ಲಿ ಒಬ್ಬರು ದೇವೇಗೌಡ ಎಂಬುದನ್ನು ಸಿದ್ದರಾಮಯ್ಯ ಬಾಯಿಬಿಟ್ಟು ಹೇಳಿಲ್ಲ. ಆ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ತೀರಿಸಿಕೊಳ್ಳುತ್ತಾರೆ. ಇದು ದೇವೇಗೌಡರ ಕುಟುಂಬಕ್ಕೂ ಗೊತ್ತು ಎಂದು ಹೇಳಿದರು.
ಚುನಾವಣೆ ಮುಗಿಯುವ ತನಕ ಕುಮಾರಸ್ವಾಮಿ ಅವರು ಮಂಡ್ಯ ಮತ್ತು ಹಾಸನಕ್ಕೆ ಮುಖ್ಯಮಂತ್ರಿಯಾಗಿರುತ್ತಾರೆ. ಮಂಡ್ಯದಲ್ಲಿ ಸುಮಲತಾ ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿಗೆ ಗೊತ್ತಾಗಿದೆ. ಅದಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರ ಎಂದು ಆರೋಪಿಸಿದರು.












Click it and Unblock the Notifications