Weather Forecast: ಬಾಗಲಕೋಟೆ ಜನರಿಗೆ ಉರಿ ಬಿಲಿನ ಶಾಕ್: ತಾಪಮಾನ 39°C ಗೆ ಹೆಚ್ಚಳ, ವರದಿ
ಬಾಗಲಕೋಟೆ, ಮಾರ್ಚ್ 13: ಉತ್ತರ ಕರ್ನಾಟಕದ ಭಾಗದ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯ ದರ್ಶನವೇ ಇಲ್ಲದಂತಾಗಿದೆ. ಸಮುದ್ರ ಭಾಗದಲ್ಲಿ ಚಂಡಮಾರುತ ಪರಿಚಲನೆ ಉಂಟಾದರೂ ಸಹಿತ ಈ ಭಾಗಕ್ಕೆ ಯಾವುದೇ ಪ್ರಭಾವ ಉಂಟು ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಈ ವಾರಾಂತ್ಯದ ಹೊತ್ತಿಗೆ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಇದೆ. ಇದರ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಎಷ್ಟಿದೆ ತಾಪಮಾನ, ಹವಾಮಾನ ವರದಿ ಮುನ್ಸೂಚನೆ ಇಲ್ಲಿದೆ.
ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಉತ್ತರ ಒಳನಾಡಿನ ಭಾಗಲಕೋಟೆಯಲ್ಲಿ ಇಂದು ಗುರುವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಮುಂದಿನ ಮೂರರಿಂದ ಐದು ದಿನಗಳಲ್ಲಿ 39 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು, ಮಂಗಳೂರು, ದಕ್ಷಿಣ ಕನ್ನಡ, ಬೆಂಗಳೂರು, ಉಡುಪಿ, ಶಿವವೊಗ್ಗ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಜೋರು ಮಳೆ ಆಗಿದೆ. ಆದರೆ ಬಾಗಲಕೋಟೆ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ ಆಗಿಲ್ಲ. ಇಲ್ಲಿ ಶುಷ್ಕ ವಾತಾವರಣ ಮುಂದುವರಿದಿದೆ.
ಬಾಗಲಕೋಟೆಯು ಕೇವಲ ಖಾರೀಫ್, ರಾಭಿ ಬೆಳೆಗಳಿಗೆ ಮಾತ್ರವಲ್ಲದೇ, ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಪೇರಲ, ಪಪ್ಪಾಯಿ, ಲಿಂಬೆ ಸೇರಿದಂತೆ ಇನ್ನಿತರ ಬೆಳೆಯುವಲ್ಲಿ ಹೆಸರು ಮಾಡಿದೆ. ಇಲ್ಲಿ ನೀರಾವರಿ ಹಾಗೂ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ರೈತರೆಲ್ಲರು ಬಿಸಿಲಿಗೆ ತತ್ತರಿಸಿದ್ದಾರೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದರೆ, ಮುಂಗಾರು ಬಿತ್ತನೆಗೆ ಹೊಲ ಹದ ಮಾಡಿಕೊಳ್ಳಲು ಕಾಯುತ್ತಿದ್ದಾರೆ.
ಬಾಗಲಕೊಟೆ ಅಕ್ಕಪಕ್ಕದ ಜಿಲ್ಲೆಗಳ ತಾಪಮಾನ
ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳ ಪರಿಸ್ಥಿತಿಯು ಇದೇ ರೀತಿ ಇದೆ. ವಿಜಯಪುರದಲ್ಲಿ 36 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 34.6 ಡಿಗ್ರಿ ಸೆಲ್ಸಿಯಸ್, ಗದಗ 37, ಧಾರವಾಡ 36.2, ಬೆಳಗಾವಿ ನಗರ 35, ಧಾರವಾಡ 36.2 ಮತ್ತು ಹಾವೇರಿ 35.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಜಿಲ್ಲೆಗಳಲ್ಲಿ ತಾಪಮಾನ ಇನ್ನಷ್ಟು ದಾಖಲಾಗುವ ಸಾಧ್ಯತೆಯು ಇದೆ. ಸದ್ಯಕ್ಕೆ ಉತ್ತರ ಒಳನಾಡಿನಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ ಎನ್ನಲಾಗಿದೆ.

ಕರ್ನಾಟಕದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ವ ಮುಂಗಾರು ಇಲ್ಲಿ ಸಕ್ರಿಯವಾಗಬಹುದು ಎಂದು ಇಲ್ಲಿನ ನಿವಾಸಿಗಳು ಕಾಯುತ್ತಿದ್ದಾರೆ.












Click it and Unblock the Notifications