ಬಾಗಲಕೋಟೆ ಜಿಲ್ಲಾ ವೈದ್ಯಾಧಿಕಾರಿ ಖುರ್ಚಿಗಾಗಿ ಮತ್ತೆ ಕಾಳಗ, ಅಳಿಯನಿಗೆ ಗಿಫ್ಟ್ ಕೊಟ್ರಾ ಕೈ ಶಾಸಕ ಮೇಟಿ?
ಬಾಗಲಕೋಟೆ, ಆಗಸ್ಟ್, 22: ಜಿಲ್ಲಾ ವೈದ್ಯಾಧಿಕಾರಿ ಖುರ್ಚಿಗಾಗಿ ಕಿತ್ತಾಟ, ದೊಡ್ಡ ಹೈಡ್ರಾಮಮೇ ನಡೆದಿದೆ. ಈ ಪ್ರಹಸನದಲ್ಲಿ ಎಚ್.ವೈ.ಮೇಟಿ ತಮ್ಮ ಅಳಿಯನ ಮೇಲೆ ಪ್ರೀತಿ ತೋರಿದರಾ ಎಂಬ ಅನುಮಾನ ವ್ಯಕ್ತವಾಗಿದೆ. ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಬಾಗಲಕೋಟೆ ಕಾಂಗ್ರೆಸ್ ಶಾಸಕ ಎಚ್.ವೈ ಮೇಟಿ ಅಳಿಯ ಡಾ. ರಾಜಕುಮಾರ ಯರಗಲ್ ಹಾಗೂ ಡಾ.ಜಯಶ್ರಿ ಎಮ್ಮಿ ಮಧ್ಯೆ ನೇರಾನೇರ ಕಿತ್ತಾಟ ನಡೆದಿದೆ. ಡಾ. ರಾಜಕುಮಾರ ಯರಗಲ್ ಅವರು ಬಾಗಲಕೋಟೆ ಡಿಎಚ್‌ಒ ನೇಮಕ ಆದೇಶ ಹಿಡಿದು ಬಾಗಲಕೋಟೆ ಕಚೇರಿಗೆ ಬಂದಿದ್ದಾರೆ.
ಆದರೆ ಅದಕ್ಕೆ, ಈಗಾಗಲೇ ಇಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜಯಶ್ರಿ ಎಮ್ಮಿ ಕೆಎಟಿ ಯಿಂದ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕಚೇರಿಯಲ್ಲಿ ವಾಗ್ವಾದ ನಡೆಸಿದ್ದಾರೆ. ಹಾಜರಾತಿ ಹಾಕಲು ಮುಂದಾದ ಜಯಶ್ರೀ ಎಮ್ಮಿ ಅವರಿಗೆ ಅವಕಾಶ ನೀಡಿಲ್ಲ. ರಾಜಕುಮಾರ ಯರಗಲ್ ಹಾಜರಾತಿ ಪುಸ್ತಕವನ್ನು ಕಸಿದುಕೊಂಡಿದ್ದಾರೆ.

ಇದಕ್ಕೆ ಕಂಡು ಡಿಎಚ್‌ಒ ಕಚೇರಿಯಲ್ಲಿ ಜಯಶ್ರಿ ಎಮ್ಮಿ ಕಣ್ಣೀರು ಹಾಕಿದ್ದಾರೆ. ನಾನು ಸರ್ಕಾರದ ಆದೇಶದ ಪ್ರಕಾರ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ರಾಜಕುಮಾರ ಯರಗಲ್ ವಾದ ಮುಂದಿಟ್ಟಿದ್ದಾರೆ. ನಾನು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಜಯಶ್ರೀ ಎಮ್ಮಿ ಪ್ರತಿ ವಾದ ಮಾಡಿದ್ದಾರೆ.
ಜಯಶ್ರಿ ಎಮ್ಮಿ ಇದುವರೆಗೂ ಬಾಗಲಕೋಟೆ ಡಿಹೆಚ್‌ಒ ಆಗಿದ್ದವರು. ರಾಜಕುಮಾರ ಯರಗಲ್ ವಿಜಯಪುರ ಡಿಹೆಚ್‌ಒ ಹುದ್ದೆಯಿಂದ ಬಾಗಲಕೋಟೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ. ಆದರೆ ವಿಜಯಪುರ ಡಿಹೆಚ್‌ಒ ಹುದ್ದೆಯಿಂದ ರಿಲೀವ್ ಲೆಟರ್ ಪಡೆಯದೆ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಒ ಅವರಿಂದ ಮೊಮೆಂಟ್ ಆರ್ಡರ್ ಪಡೆಯದೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನೀವು (ರಾಜಕುಮಾರ ಯರಗಲ್) ರಿಲೀವ್ ಲೆಟರ್ ಕೊಡದೆ ನಿಯಮಾನುಸಾರ ಅಧಿಕಾರವಹಿಸಿಕೊಂಡಿಲ್ಲ ಎಂದು ಜಯಶ್ರೀ ಎಮ್ಮಿ ವಾದಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ ನಾನು ಸರ್ಕಾರಕ್ಕೆ ಎಲ್ಲ ರಿಲೀವ್ ಲೆಟರ್ ಕಳಿಸಿದ್ದೇನೆ. ಪ್ರಿನ್ಸಿಪಾಲ್ ಸೆಕ್ರೆಟರಿಗೆ ಎಲ್ಲ ಕಳಿಸಿದ್ದೇನೆ ಎಂದು ಯರಗಲ್ ವಾದ ಮಾಡುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಆದೇಶ ಪಡೆದುಕೊಂಡು ಬನ್ನಿ ಎಂದು ಯರಗಲ್ ಜಯಶ್ರೀಗೆ ತಿರುಗೇಟು ನಿಡಿದ್ದಾರೆ.
ಈ ಮಧ್ಯೆ, ಸದ್ಯದ ಬೆಳವಣಿಗೆ ಮತ್ತು ಈ ಹಿಂದಿನ ವಿದ್ಯಮಾನಗಳನ್ನು ಗಮನಿಸಿದ ಹೆಚ್.ವೈ. ಮೇಟಿ ಮತ್ತೊಮ್ಮೆ ಅಳಿಯನ ಮೇಲೆ ಪ್ರೀತಿ ತೋರಿದರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆರು ವರ್ಷದ ಹಿಂದೆ ಮೇಟಿ ಶಾಸಕರಾಗಿದ್ದಾಗ ಯರಗಲ್ ಇದೇ ಬಾಗಲಕೋಟೆ ಡಿಹೆಚ್ಓ ಆಗಿ ಕಾರ್ಯನಿರ್ವಹಿಸಿದ್ದರು. ಆಗಲೂ ತಮ್ಮ ವರ್ಗಾವಣೆಯಾದಾಗ ತಡೆಯಾಜ್ಞಾ ತಂದಿದ್ದರು.
ಆಗ ಡಿಹೆಚ್‌ಒ ಆಗಿ ಬಂದಿದ್ದ ಜಗದೀಶ್ ನುಚ್ಚಿನ ವಿರುದ್ದ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರು ಇದೇ ಡಾ. ಯರಗಲ್. ಆ ವೇಳೆ ಜಗದೀಶ್ ನುಚ್ಚಿನಗೆ ಖುರ್ಚಿ ಬಿಡದೆ ಸತಾಯಿಸಿದ್ದರು. ಆಗಲೂ ಯರಗಲ್ ಹಾಗೂ ಜಗದೀಶ್ ನುಚ್ಚಿನ ಮಧ್ಯೆ ಖುರ್ಚಿ ಕಿತ್ತಾಟ ನಡೆದಿತ್ತು. ಅದಕ್ಕೂ ಹಿಂದೆ ಡಾ. ಯರಗಲ್ ಬಾಗಲಕೋಟೆ ಡಿಹೆಚ್‌ಒ ಆದಾಗ ಸಿಬ್ಬಂದಿ ನೇಮಕಾತಿ ಆಕ್ರಮದಲ್ಲಿ ನಡೆದಿತ್ತು. ಹಣದ ಡೀಲಿಂಗ್‌ನಲ್ಲಿ ರಾಜಕುಮಾರ ಯರಗಲ್ ಅತ್ಯಾಪ್ತರ ಮೂಲಕ ಸಿಬ್ಬಂದಿ ನೇಮಕಾತಿಗಾಗಿ ಹಣ ಪಡೆಯುವ ಬಣ್ಣ ಬಯಲಾಗಿತ್ತು.
ನಂತರ ರಾಜಕುಮಾರ ಯರಗಲ್ ಬಾಗಲಕೋಟೆಯಿಂದ ವರ್ಗಾವಣೆಯಾಗಿದ್ದರು. ಅಲ್ಲದೆ ಬಳಿಕ ಕೊಪ್ಪಳ, ವಿಜಯಪುರದಲ್ಲಿ ಡಿಹೆಚ್‌ಒ ಆಗಿ ಕೆಲಸ ಮಾಡಿದ್ದಾರೆ. ಇದೀಗ ಮಾವ ಮೇಟಿ ಶಾಸಕರಾಗುತ್ತಿದ್ದಂತೆ ಮತ್ತೆ ಬಾಗಲಕೋಟೆ ಡಿಹೆಚ್‌ಒ ಆಗಿ ಬಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.












Click it and Unblock the Notifications