ಜಮಖಂಡಿಯಲ್ಲಿ ಬಿಜೆಪಿ ಸೋಲಲು ಐದು ಪ್ರಮುಖ ಕಾರಣಗಳು
ಜಮಖಂಡಿ, ನವೆಂಬರ್ 06: ಕಾಂಗ್ರೆಸ್-ಬಿಜೆಪಿ ನಡುವೆ ಸಮ ಬಲದ ಹೋರಾಟ ಇದೆ ಎಂದೇ ನಂಬಲಾಗಿದ್ದ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋತಿದೆ.
ವರ್ಷದ ಆರಂಭದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2795 ಮತಗಳ ಅಂತರದಿಂದ ಸೋತಿದ್ದ ಬಿಜೆಪಿ ಈ ಬಾರಿ ಬರೋಬ್ಬರಿ 39,484 ಮತಗಳ ಅಂತರದಿಂದ ಸೋತಿದೆ. ಇದು ಭಾರಿ ದೊಡ್ಡ ಅಂತರವೇ ಆಗಿದೆ.
ವಿಜಯಿ ಆನಂದ್ ನ್ಯಾಮಗೌಡ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಯೇ ಜಾಕ್‌ಪಾಟ್ ಹೊಡೆದಿದ್ದಾರೆ. ಕಳೆದ ಬಾರಿ ಬಂಡಾಯ ಅಭ್ಯರ್ಥಿ ಇದ್ದರೂ ಪೈಪೋಟಿ ನೀಡಿದ್ದ ಬಿಜೆಪಿ ಈ ಬಾರಿ ಆಂತರಿಕ ಬಂಡಾಯ ನಿವಾರಿಸಿಕೊಂಡರೂ ಭಾರಿ ಅಂತರದಲ್ಲಿ ಸೋಲು ಕಂಡಿದೆ.
ಹಾಗಿದ್ದರೆ ಬಿಜೆಪಿಯು ಜಮಖಂಡಿಯಲ್ಲಿ ಸೋಲಲು ಕಾರಣವೇನು? ಅಭ್ಯರ್ಥಿ ಆಯ್ಕೆಯೇ, ಪ್ರಚಾರದ ಕೊರತೆಯೇ, ಸಂಘಟನೆ ಕೊರತೆಯೇ? ಇಲ್ಲಿದೆ ವಿಶ್ಲೇಷಣೆ. ಬಿಜೆಪಿ ಸೋಲಿಗೆ ಕಾರಣವಾದ ಪ್ರಮುಖ ಐದು ಅಂಶಗಳು ಇಲ್ಲಿ ಪಟ್ಟಿ ಮಾಡಲಾಗಿದೆ.

ಸೋತ ಅಭ್ಯರ್ಥಿಯನ್ನೇ ನಿಲ್ಲಿಸಿದ್ದು ಏಕೆ?
ಕಳೆದ ಚುನಾವಣೆಯಲ್ಲಿ ಶ್ರೀಕಾಂತ್ ಕುಲಕರ್ಣಿ ಅವರನ್ನು ಜನರು ತಿರಸ್ಕರಿಸಿದ್ದರು. ಆದರೆ ಬಿಜೆಪಿ ಮತ್ತೆ ಅವರಿಗೆ ಟಿಕೆಟ್ ನೀಡಿತು ಇದರ ಹಿಂದನ ಕಾರಣ ಏನೆಂಬುದು ತಿಳಿದಿಲ್ಲ. ಒಂದು ಬಾರಿ ತಿರಸ್ಕರಿಸಿರುವ ಅಭ್ಯರ್ಥಿಗೆ ಮತ್ತೆ ಜನ ಏಕೆ ಮತ ಹಾಕುತ್ತಾರೆ ಎಂಬ ಯೋಚನೆ ಬಿಜೆಪಿಗೆ ಬರಬೇಕಿತ್ತು.

ಬಂಡಾಯ ಶಮನ ಸರಿಯಾಗಿ ಆಗಿಲ್ಲ
ಜಮಖಂಡಿಯಲ್ಲಿ ಬಿಜೆಪಿ ಕಳೆದ ಚುನಾವಣೆ ಸೋಲಲು ಆಂತರಿಕ ಬಂಡಾಯವೇ ಕಾರಣ. ಕಳೆದ ಬಾರಿ ಸಂಗಮೇಶ ನಿರಾಣಿ ಪಕ್ಷೇತರವಾಗಿ ಸ್ಪರ್ಧಿಸಿ 24,461 ಮತ ಗಳಿಸಿ ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದರು. ಆ ನಂತರ ಯಡಿಯೂರಪ್ಪ ಅವರು ಸಂಧಾನ ಮಾಡಿ ಅವರನ್ನು ಸಮಾಧಾನ ಪಡಿಸಿದರು. ಆದರೆ ಸಂಧಾನ ಸರಿಯಾಗಿ ಆಗದ ಕಾರಣ ಸಂಗಮೇಶ ನಿರಾಣಿ ಬಿಜೆಪಿ ಪರ ಸಕ್ರಿಯವಾಗಿ ಕೆಲಸ ಮಾಡಲಿಲ್ಲ ಎನ್ನಲಾಗಿದೆ, ಇದು ಕೂಡ ಬಿಜೆಪಿ ಸೋಲಲು ಮುಖ್ಯ ಕಾರಣ.

ಕೈಕೊಟ್ಟ ಪ್ರಮುಖ ನಾಯಕರು
ಯಡಿಯೂರಪ್ಪ ಸೇರಿ ಪಕ್ಷದ ಪ್ರಮುಖ ನಾಯಕರು ಜಮಖಂಡಿಗೆ ಸರಿಯಾಗಿ ಪ್ರಚಾರಕ್ಕೆ ಬರಲಿಲ್ಲ. ಬಳ್ಳಾರಿಯಲ್ಲಿ ರಾಮುಲು ಒಬ್ಬಂಟಿ ಆದಂತೆ ಜಮಖಂಡಿಯಲ್ಲಿ ಶ್ರೀಕಾಂತ್ ಕುಲಕರ್ಣಿ ಒಬ್ಬಂಟಿ ಆದರು ಇದು ಬಿಜೆಪಿಗೆ ಭಾರಿ ಹಿನ್ನಡೆ ಆಯಿತು. ಸ್ವತಃ ಯಡಿಯೂರಪ್ಪ ಅವರು ಕೇವಲ ಒಂದು ಬಾರಿ ಮಾತ್ರ ಪ್ರಚಾರದಲ್ಲಿ ಭಾಗವಹಿಸಿದ್ದರು.

ಸಂಪನ್ಮೂಲ ಕೊರತೆ
ಐದು ತಿಂಗಳ ಹಿಂದೆಯಷ್ಟೆ ವಿಧಾನಸಭೆ ಚುನಾವಣೆ ಎದುರಿ ಸೋತಿದ್ದ ಶ್ರೀಕಾಂತ್ ಕುಲಕರ್ಣಿ ಅವರಿಗೆ ಈ ಬಾರಿಯ ಚುನಾವಣೆಗೆ ಭಾರಿ ಸಂಪನ್ಮೂಲ ಕೊರತೆ ಎದುರಾಯಿತು ಎನ್ನಲಾಗಿದೆ. ಮತದಾನ ಹತ್ತಿರ ಬಂದಾಗ ಕಾರ್ಯಕರ್ತರಿಗೂ ಕೊಡಲು ಹಣದ ಕೊರತೆ ಎದುರಾಯಿತು ಎನ್ನಲಾಗಿದೆ.

ಕೆಲಸ ಮಾಡದ ಅನುಕಂಪದ ಅಲೆ
ಎದುರಾಳಿಗೆ ಭಾರಿ ಅನುಕಂಪದ ಅಲೆ ಇದ್ದ ಕಾರಣ ಶ್ರೀಕಾಂತ್ ಕುಲಕರ್ಣಿ ಅವರೂ ಸಹ ಅನುಕಂಪದ ಕಾರ್ಡ್ ಮುಂದು ಮಾಡಲು ನೋಡಿದರು. ಇದು ತಮ್ಮ ಕೊನೆಯ ಚುನಾವಣೆ ಎಂದು, ಕಳೆದ ಬಾರಿ ಸೋತು ನಷ್ಟ ಅನುಭವಿಸಿದ್ದೇನೆ ಎಂದು ಪ್ರಚಾರಗಳಲ್ಲಿ ಹೇಳಿದ್ದರು ಆದರೆ ಜನರು ಆನಂದ್ ನ್ಯಾಮಗೌಡಗೇ ಕರುಣೆ ತೋರಿದರು.












Click it and Unblock the Notifications