Anekal Constituency : ಬಿ.ಶಿವಣ್ಣನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಬಿಜೆಪಿ, ಜೆಡಿಎಸ್ ಸಜ್ಜು
ಆನೇಕಲ್, ಮಾರ್ಚ್, 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿಧಾನಸಭೆ ಚುನಾವಣೆಯ ಕಾವು ಏರುತ್ತಲೇ ಇದೆ. ಈ ಕಾವು ಎಲ್ಲಾ ಕ್ಷೇತ್ರಗಳಿಗೂ ಕೂಡ ಹಬ್ಬಿದ್ದು, ಆಯಾ ಕ್ಷೇತ್ರದ ರಾಜಕಾರಣಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಾದರೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಸ್ಥಿತಿಗತಿ ಹೇಗಿದೆ ಎಂದು ತಿಳಿಯೋಣ ಬನ್ನಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಆನೇಕಲ್ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರು. ಆನೇಕಲ್ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಆನೇಕಲ್ ಕ್ಷೇತ್ರ ಪರಿಚಯ
ಇಲ್ಲಿ 2018 ರಲ್ಲಿ ಕಾಂಗ್ರೆಸ್ ಪಕ್ಷದ ಬಿ.ಶಿವಣ್ಣ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ 8,627 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಕ್ಷೇತ್ರವನ್ನು ಎರಡು ಬಾರಿಯೂ ಕಾಂಗ್ರೆಸ್ ಶಾಸಕ ಬಿ.ಶಿವಣ್ಣನವರು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಹಾಗೆಯೇ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಬಿ.ಶಿವಣ್ಣನವರ ಗೆಲುವಿನ ರೇಸ್‌ಗೆ ಕಡಿವಾಣ ಹಾಕಲು ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳು ತಂತ್ರಗಾರಿಕೆಯನ್ನು ಹೆಣೆದಿವೆ.
ಬಿಜೆಪಿಯ ಭದ್ರಕೋಟೆ ಆಗಿದ್ದ ಆನೇಕಲ್ ವಿಧಾನಸಭಾ ಕ್ಷೇತ್ರವನ್ನು 2013 ಮತ್ತು 2018ರಲ್ಲಿ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇವರ ಹ್ಯಾಟ್ರಿಕ್ ಗೆಲುವನ್ನು ತಡೆಯಲು ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾದ ಬಿಜೆಪಿ ಪಕ್ಷದ ಆಕಾಂಕ್ಷಿತ ಅಭ್ಯರ್ಥಿಗಳು ತೆರೆಮರೆಯಲ್ಲಿ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಬಿ.ಶಿವಣ್ಣಗೆ ಠಕ್ಕರ್ ಕೊಡಲು ಸಿದ್ಧತೆ
ಇದರ ನಡುವೆಯೇ ಜೆಡಿಎಸ್ ಮತ್ತು ಬಿಎಸ್‌ಪಿ ತಮ್ಮದೆಯಾದ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವ ಮೂಲಕ ಚುನಾವಣೆಗೆ ವೇದಿಕೆಯನ್ನು ತಯಾರಿ ಮಾಡಿಕೊಂಡಿವೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ನಾಲ್ಕು ಬಾರಿ ಆನೇಕಲ್ ಶಾಸಕರಾಗಿ ಆಯ್ಕೆ ಆಗಿದ್ದರು. ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆದಿತ್ತು. ಸದ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಬಿಜೆಪಿಯ ಕೆಲ ಆಕಾಂಕ್ಷಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನು ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು, ಟಿ.ವಿ.ಬಾಬು, ಜಿಲ್ಲಾ ಚಂಚಾಯತ್ ಮಾಜಿ ಸದಸ್ಯರಾದ ಹುಲ್ಲಹಳ್ಳಿ ಶ್ರೀನಿವಾಸ್, ಬಂಡಾಪುರ ರಾಮಚಂದ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಾ.ಸಂದೀಪ್, ಮುಖಂಡ ಪಟಾಪಟ್ ಶ್ರೀನಿವಾಸ್, ಮಂಜುನಾಥ್ ಮದ್ದೂರಪ್ಪ, ಬಿ.ವೈ.ರವೀಂದ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿಯಿಂದ ಭರ್ಜರಿ ಪ್ರಚಾರ
ಬಿಜೆಪಿಯ ಬಹುತೇಕ ಆಕಾಂಕ್ಷಿತ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರವನ್ನು ಚುರುಕುಗೊಳಿದ್ದಾರೆ. ತಾಲೂಕಿನ್ನೆಲೆಡೆ ಗೋಡೆ ಬರಹ, ಬ್ಯಾನರ್‌ಗಳು, ಕಟೌಟ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಅದೇ ರೀತಿ ಕ್ಷೇತ್ರದಲ್ಲಿ ತಮ್ಮದೆ ಆದ ನೆಲೆ ಹೊಂದಿರುವ ಜೆಡಿಎಸ್ ಈ ಬಾರಿ ಕೆ.ಪಿ.ರಾಜು ಅವರನ್ನು ಕಣಕ್ಕಿಳಿಸಿದೆ.
ಕೆ.ಪಿ.ರಾಜು ಅವರು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಮಾಡುತ್ತಿದ್ದು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ನೇತೃತ್ವದಲ್ಲಿ ರೇಸ್ ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ ಗ್ರಾಮೀಣ ಭಾಗಗಳಲ್ಲಿ ನೆಲೆಯನ್ನು ವಿಸ್ತರಿಸುತ್ತಿರುವ ಬಿಎಸ್‌ಪಿ ಪಕ್ಷವು ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇವರ ನೇತೃತ್ವದಲ್ಲಿ ವಿವಿಧ ವರ್ಗಗಳನ್ನು ಒಗ್ಗೂಡಿಸಿ ಚುನಾವಣೆ ತಂತ್ರವನ್ನು ಕೂಡ ರೂಪಿಸುತ್ತಿದ್ದಾರೆ. ಇನ್ನು ಎಎಪಿಯಿಂದ ಮುನೇಶ್ ಮತ್ತು ವಿಸಿಕೆಯಿಂದ ಎಂ.ಸಿ.ಹಳ್ಳಿ ವೇಣು ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಶಿವಣ್ಣ
ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಗಮನ ಸೆಳೆದಿರುವ ಬಿ.ಶಿವಣ್ಣನವರಿಗೆ ಈ ಬಾರಿ ಬಿಜೆಪಿ, ಜೆಡಿಎಸ್, ಬಿಎಸ್‌ಪಿ ನಾಯಕರು ಠಕ್ಕರ್ ಕೊಡಲು ಸಿದ್ಧತೆ ನಡೆಸಿದ್ದಾರೆ. ಹಲವೆಡೆ ಹಾಳಾಗಿರುವ ಮುಖ್ಯ ರಸ್ತೆಗಳು ಈ ಬಾರಿಯ ಚುನಾವಣೆಗೆ ಸವಾಲಾಗಿ ಪರಿಣಮಿಸಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎನ್ನುವ ನೆಪವೊಡ್ಡಿ ಜನರನ್ನು ಸಮಾಧಾನಪಡಿಸುವ ತಂತ್ರಗಾರಿಕೆಯನ್ನು ಮುಂದುವರೆಸಿದೆ.
| ವರ್ಷ | ವಿಜೇತರು | ಮತಗಳು | ಸೋತವರು | ಮತಗಳು |
| 2018 | ಬಿ. ಶಿವಣ್ಣ (ಕಾಂಗ್ರೆಸ್) | 62,455 | ಎ. ನಾರಾಯಣ ಸ್ವಾಮಿ (ಬಿಜೆಪಿ) | 105,267 |
| 2013 | ಬಿ. ಶಿವಣ್ಣ (ಕಾಂಗ್ರೆಸ್) | 105,464 | ಎ. ನಾರಾಯಣ ಸ್ವಾಮಿ (ಬಿಜೆಪಿ) | 65,282 |
| 2008 | ಎ. ನಾರಾಯಣ ಸ್ವಾಮಿ (ಬಿಜೆಪಿ) | 113,894 | ಬಿ. ಗೋಪಾಲ್ (ಕಾಂಗ್ರೆಸ್) | 52,593 |
ಒಟ್ಟಿನಲ್ಲಿ ಬಿಜೆಪಿಯಲ್ಲಿ 8ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮದೇ ಆದ ಪ್ರಭಾವವನ್ನು ಬಳಸಿ ಟಿಕೆಟ್ ಪಡೆಯಬೇಕೆನ್ನುವ ಪಣ ತೊಟ್ಟಿದ್ದಾರೆ. ಈ ನಡುವೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರು ಅಖಾಡಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿವೆ. ಆದರೆ ಬಿಜೆಪಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಯಾರನ್ನು ಅಖಾಡಕ್ಕೆ ಇಳಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications