ಅಮೃತಸರ ದಾಳಿ ಹಿಂದೆ ಪಾಕ್ ಮೂಲದ ಖಲಿಸ್ತಾನ ಉಗ್ರರ ಕೈವಾಡ?
ಅಮೃತಸರ, ನವೆಂಬರ್ 19: ಪಂಜಾಬಿನ ಅಮೃತಸರದ ರಾಜಸ್ಸಾನಿಯ ನಿರಂಕಾರಿ ಭವನ ಪ್ರಾರ್ಥನಾ ಮಂದಿರದಲ್ಲಿ ಮೂವರನ್ನು ಬಲಿ ತೆಗೆದುಕೊಂಡ ಬಾಂಬ್ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಖಲಿಸ್ತಾನ ಉಗ್ರರ ಕೈವಾಡ ಇದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ನೆಲೆಯೂರಿರುವ ಖಲಿಸ್ತಾನ ಉಗ್ರರ ಸಂಘಟನೆಯ ಇಬ್ಬರು ಪ್ರಮುಖ ನಾಯಕರು ಈ ದಾಳಿಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ.
ಆದರೆ, ಉಗ್ರ ಜಕೀರ್ ಮೂಸಾನ ನೇತೃತ್ವದ ಸಂಘಟನೆಯು ಈ ದಾಳಿಯ ಹಿಂದೆ ಇರುವುದರ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

'ರಿಪಬ್ಲಿಕ್ ಟಿವಿ'ಯ ವರದಿ ಪ್ರಕಾರ ಹ್ಯಾಪಿ ಪಿಎಚ್‌ಡಿ ಮತ್ತು ಲಖ್ಬೀರ್ ಸಿಂಗ್ ರೋಡ್ ಎಂಬ ಇಬ್ಬರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರ ಚಿತ್ರಗಳನ್ನು ಸ್ಥಳೀಯ ಪೊಲೀಸರು ಪ್ರಕಟಿಸುತ್ತಿದ್ದಾರೆ. ಭಯೋತ್ಪಾದಕರ ಗುಂಪಿನೊಳಗೆ 'ಬ್ಯಾಂಕ್ ಆಫ್ ಪಂಜಾಬ್' ಎಂಬ ಹೆಸರು ಪಡೆದಿರುವ ಲಖ್ಬೀರ್ ಸಿಂಗ್, ಭಾರಿ ಪ್ರಮಾಣದ ಹಣ ಮತ್ತು ಸಂಪತ್ತನ್ನು ಹೊಂದಿದ್ದಾನೆ.
ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಬೆಂಬಲದೊಂದಿಗೆ ಖಲಿಸ್ತಾನ ಉಗ್ರರು ಈ ದಾಳಿ ನಡೆಸಿದ್ದಾರೆ ಎಂಬುದನ್ನು ಗುಪ್ತಚರ ಮೂಲಗಳು ಖಚಿತಪಡಿಸಿವೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಬಂಧಿಸಿರುವ ಖಲಿಸ್ತಾನದ ಉಗ್ರರರನ್ನು ಈ ಸಂಬಂಧ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ನಿರಂಕಾರಿ ಸತ್ಸಂಗವು ಪ್ರತಿ ಹಳ್ಳಿಯಲ್ಲಿಯೂ ನಡೆಯುತ್ತದೆ. ಆದರೆ, ಅವರನ್ನು ಎಲ್ಲಿಯೂ ಗುರಿಯನ್ನಾಗಿರಿಸಿಕೊಂಡು ದಾಳಿ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರನ್ನು ಗುರಿಯನ್ನಾಗಿರಿಸಿಕೊಳ್ಳಲಾಗಿದೆ. ಅವರಿಗೆ ಯಾವುದೇ ಭದ್ರತೆ ಇಲ್ಲದಿರುವುದನ್ನು ತಿಳಿದೇ ಈ ದಾಳಿ ನಡೆಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಉಗ್ರರ ಕೈವಾಡ ಈ ದಾಳಿಯಲ್ಲಿ ಇರುವುದನ್ನು ಮುಖ್ಯಮಂತ್ರಿ ಖಚಿತಪಡಿಸಿದ್ದರೂ, ಉಗ್ರ ಜಕೀರ್ ಮೂಸಾನ ಸಂಚು ಇರುವುದನ್ನು ಐಜಿ ಸುರಿಂದರ್ ಪಾಲ್ ಸಿಂಗ್ ತಳ್ಳಿಹಾಕಿದ್ದಾರೆ.
ಮೂಲಗಳ ಪ್ರಕಾರ ಸುಮಾರು 250 ಮಂದಿ ಆಶ್ರಮದ ಒಳಗೆ ಸತ್ಸಂಗದಲ್ಲಿ ಭಾಗಿಯಾಗಿದ್ದರು. ಆಗ ಈ ದಾಳಿ ನಡೆಸಲಾಗಿದೆ. ಈ ದುರಂತಮಯ ಘಟನೆ ಬಳಿಕ ಪಂಜಾಬ್, ದೆಹಲಿ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಉತ್ತರ ಭಾರತದ ಹಲವೆಡೆ ಕಟ್ಟೆಚ್ಚರ ಘೋಷಿಸಲಾಗಿದೆ.












Click it and Unblock the Notifications