ಮೋದಿಜಿ, ಹೆಚ್ಚು ಕಾಲ ಸತ್ಯ ಬಚ್ಚಿಡಲು ಸಾಧ್ಯವಿಲ್ಲ: ಚಂದ್ರಬಾಬು ನಾಯ್ಡು
ಅಮರಾವತಿ, ಫೆಬ್ರವರಿ 9: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ರಫೇಲ್ ಒಪ್ಪಂದ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮೋದಿ ವಿರುದ್ಧ ಹರಿಹಾಯ್ದಿರುವ ನಾಯ್ಡು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. '59,000 ಕೋಟಿ ರೂಪಾಯಿ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿ ಅವರ ಮೌನ ಮತ್ತು ಪ್ರಧಾನಿ ಕಚೇರಿ ಒಳಗೊಂಡಿರುವ ದೇಶದ ಅತಿ ದೊಡ್ಡ ರಕ್ಷಣಾ ಹಗರಣದ ಕುರಿತಾದ ವರದಿಗಳು, ಬಿಜೆಪಿ ಸರ್ಕಾರದ ವಿನಾಶಕಾರಿ ನಿರ್ಧಾರಗಳನ್ನು ತೋರಿಸುತ್ತವೆ. ಮೋದಿಜಿ ನೀವು ದೇಶಕ್ಕೆ ಮೋಸ ಮಾಡಿದಾಗ ಸತ್ಯವನ್ನು ಹೆಚ್ಚು ಸಮಯ ಬಚ್ಚಿಡಲು ಆಗುವುದಿಲ್ಲ' ಎಂದು ನಾಯ್ಡು ಹೇಳಿದ್ದಾರೆ.

ಒಪ್ಪಂದದಲ್ಲಿನ ರಕ್ಷಣಾ ಸಚಿವಾಲಯದ ಒಕ್ಕಣೆ ಉಲ್ಲೇಖಿಸಿದ ಅವರು, ರಫೇಲ್ ಒಪ್ಪಂದ ಅಂತಿಮಗೊಳಿಸುವುದರಲ್ಲಿ ರಕ್ಷಣಾ ಸಚಿವಾಲಯವನ್ನು ಬದಿಗೊತ್ತಿ ಪ್ರಧಾನಿ ಹಸ್ತಕ್ಷೇಪ ನಡೆಸಿರುವ ಮಾಹಿತಿಗಳು ಆಘಾತಕಾರಿ. ಬಿಜೆಪಿ ಸರ್ಕಾರದೊಳಗೆ ಸಮಗ್ರತೆ ಮತ್ತು ಹೊಂದಾಣಿಕೆಯಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂಬುದಾಗಿ ಆರೋಪಿಸಿದ್ದಾರೆ.
ರಫೇಲ್ ಹಗರಣದ ಕುರಿತ ಇತ್ತೀಚಿನ ಎಲ್ಲ ಬೆಳವಣಿಗೆಗಳು ಒಪ್ಪಂದದ ಬಗೆಗಿನ ಅನುಮಾನವನ್ನು ಬಲಗೊಳಿಸಿವೆ. ಸತ್ಯ ಹೊರಬರಲು ಸ್ವತಂತ್ರವಾದ ತನಿಖೆಯ ಅಗತ್ಯವಿದೆ. ತಮ್ಮ ಲಾಭಕ್ಕಾಗಿ ನಡೆಸಿದ ವ್ಯವಹಾರಗಳ ಕುರಿತಾದ ವಾಸ್ತವ ಮಾಹಿತಿಗಳನ್ನು ತಿರುಚುವ ಮೂಲಕ ಈ ಬಾರಿ ಬಿಜೆಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications