ಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡು
ಅಮರಾವತಿ, ಮಾರ್ಚ್ 09 : ಸಾಮಾನ್ಯವಾಗಿ ದಾವೂದ್ ಇಬ್ರಾಹಿಂ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೂ ಆತನ ಬಗ್ಗೆ ಎಲ್ಲರಿಗೂ ಭಯವಿರುತ್ತದೆ. ಜಗನ್ ಮೋಹನ್ ರೆಡ್ಡಿಯದೂ ಅದೇ ಕಥೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ರನ್ನು ದಾವೂದ್ ಗೆ ಹೋಲಿಸಿದ್ದಾರೆ.
ತೆಲುಗು ದೇಶಂ ಪಕ್ಷಕ್ಕಾಗಿ ಸೇವಾಮಿತ್ರ ಆಪ್ ಅಭಿವೃದ್ಧಿಪಡಿಸಿದ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ನಂತರ, ತಮ್ಮ ವಿರೋಧಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಅವರು, ಇದರ ಹಿಂದೆ ವೈಎಸ್ಆರ್‌ಸಿಪಿ-ಟಿಆರ್‌ಎಸ್ ಪಕ್ಷಗಳ ಕೈವಾಡವಿದೆ. ಬಿಜೆಪಿ ಕೂಡ ಈ ಷಡ್ಯಂತ್ರದಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ.
ಡೇಟಾ ಕಳ್ಳತನ ಮಾಡಿದೆ ಎಂಬ ಆರೋಪದ ಮೇಲೆ ಸೇವಾಮಿತ್ರ ಆಪ್ ಅಭಿವೃದ್ಧಿಪಡಿಸಿದ ಐಟಿ ಗ್ರಿಡ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಆದರೆ, ಇಷ್ಟು ಸಣ್ಣ ಸಂಸ್ಥೆಯ ಮೇಲೆ ಐಟಿ ದಾಳಿಯಾದರೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯೇಕೆ ಅಷ್ಟು ತಲೆ ಕೆಡಿಸಿಕೊಳ್ಳಬೇಕು ಎಂದು ಜಗನ್ ಮೋಹನ್ ರೆಡ್ಡಿ ಅವರು ಚಂದ್ರಬಾಬು ನಾಯ್ಡು ಅವರ ಕಾಲೆಳೆದಿದ್ದಾರೆ.

ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ವಿಜಯಸಾಯಿ ರೆಡ್ಡಿಗಳೇ ಪ್ರಮುಖ ಸಂಚುಗಾರರು. ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಬೆಂಬಲವಾಗಿ ನಿಂತಿದ್ದಾರೆ. ಇದೆಲ್ಲದರ ಹಿಂದೆ ಬಿಜೆಪಿ ಕೂಡ ಇದೆ. ತಮ್ಮ ಬಳಿಯಿರುವ ಎಲ್ಲ ಪವರ್ ಅನ್ನು ದುರ್ಬಳಸಿಕೊಂಡಿದ್ದಾರೆ ಎಂದು ಚಂದ್ರಬಾಬು ನಾಯ್ಡು ಅವರು ಹರಿಹಾಯ್ದಿದ್ದಾರೆ.
ಇದು ಬಾಹುಬಲಿ ಚಿತ್ರದಲ್ಲಿದ್ದಕ್ಕಿಂತ ದೊಡ್ಡ ಸಂಚು. ಟಿಆರ್‌ಎಸ್ ನನಗೆ ಮಾನಸಿಕ ಹಿಂಸೆ ನೀಡುತ್ತಿದೆ. ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ. ವೈಎಸ್ಆರ್‌ಸಿಪಿ-ಟಿಆರ್ಎಸ್ ಷಡ್ಯಂತ್ರವೆಲ್ಲ ಬಯಲಾಗಿದೆ. ವೈಎಸ್ಆರ್‌ಸಿಪಿ ಮುಖಂಡ ವಿಜಯಸಾಯಿ ರೆಡ್ಡಿ ಹೇಳಿದಂತೆಯೇ ತೆಲಂಗಾಣ ಪೊಲೀಸ್ ನಾಟಕ ಮುಂದುವರಿದಿದೆ. ಫೆಬ್ರವರಿ 19ರಂದು ವಿಜಯಸಾಯಿ ರೆಡ್ಡಿ ಮಾಡಿದ ಆದೇಶದಂತೆ ದಾಳಿ ಮಾಡುವ ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.
ಜಗನ್ ಮೋಹನ್ ರೆಡ್ಡಿ ಅವರನ್ನು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂಗೆ ಹೋಲಿಸಿದ್ದಕ್ಕೆ ತಿರುಗೇಟು ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಶನಿ ಕೂಡ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ, ಆದರೆ ಆತನಿಗೆ ಎಲ್ಲರೂ ಹೆದರುತ್ತಾರೆ. ಅದೇ ಕಥೆ ಚಂದ್ರಬಾಬು ನಾಯ್ಡು ಅವರದ್ದೂ ಆಗಿದೆ. ಈ ಶನಿ ರಾಕ್ಷಸನ ಬಗ್ಗೆ ಮಹಿಳೆಯರು ಏನು ಹೇಳುತ್ತಿದ್ದಾರೆ ಎಲ್ಲರೂ ಕೇಳಬೇಕು ಎಂದು ಮಾತಿನ ಚಾಟಿ ಬೀಸಿದೆ.












Click it and Unblock the Notifications