ವಿಶಾಖಪಟ್ಟಣಂನಲ್ಲಿ ಆರು ಮಾವೋವಾದಿಗಳ ಎನ್‌ಕೌಂಟರ್
ವಿಶಾಖಪಟ್ಟಣಂ, ಜೂನ್ 16: ವಿಶಾಖಪಟ್ಟಣಂನ ಅರಣ್ಯ ಪ್ರದೇಶದಲ್ಲಿ ಗ್ರೇಹೌಂಡ್ಸ್ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬುಧವಾರ ಬೆಳಿಗ್ಗೆ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಕೊಯ್ಯೂರು ಮಂಡಲ್ ಅರಣ್ಯಪ್ರದೇಶದ ಟೀಗಲಮೆಟ್ಟಾ ಎಂಬಲ್ಲಿ ಎನ್‌ಕೌಂಟರ್ ನಡೆದಿದೆ. ಕೊಯ್ಯೂರು ಮಂಡಲ್ ಕಾಡಿನಲ್ಲಿ ಮಾವೋವಾದಿಗಳ ಇರುವಿಕೆ ಕುರಿತು ನಿರ್ದಿಷ್ಟ ಮಾಹಿತಿ ಮೇರೆಗೆ ಗ್ರೇಹೌಂಡ್ಸ್ ಸಿಬ್ಬಂದಿ ಕೆಲವು ದಿನಗಳಿಂದ ಕೂಂಬಿಂಗ್ ನಡೆಸುತ್ತಿದ್ದರು. ಬುಧವಾರ ಬೆಳಿಗ್ಗೆ ಮಾಂಪಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೀಗಲಮೆಟ್ಟಾ ಬಳಿ ಗ್ರೇಹೌಂಡ್ಸ್ ಸಿಬ್ಬಂದಿಗೆ ಮಾವೋವಾದಿಗಳ ಗುಂಪು ಕಾಣಿಸಿದ್ದು, ಗುಂಡಿನ ವಿನಿಮಯ ನಡೆದಿದೆ.
ಈ ಗುಂಡಿನ ಚಕಮಕಿಯಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಿಂದ ಎಕೆ 47, ರಿವಾಲ್ವರ್, ಎಸ್‌ಎಲ್‌ಆರ್, ಕಾರ್ಬೈನ್, 303 ರೈಫಲ್‌ಗಳು ಹಾಗೂ ಬಂದೂಕು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ವಿಶಾಖಪಟ್ಟಣಂ ಜಿಲ್ಲಾ ಪೊಲೀಸರ ಅಧೀಕೃತ ಪ್ರಕಟಣೆ ತಿಳಿಸಿದೆ.

ಸಾವನ್ನಪ್ಪಿರುವ ಮಾವೋವಾದಿಗಳ ಮಾಹಿತಿ ಕಲೆಹಾಕುತ್ತಿರುವುದಾಗಿ ಕೊಯ್ಯೂರು ಪೊಲೀಸ್ ವೆಂಕಟರಮಣನ್ ತಿಳಿಸಿದ್ದಾರೆ. ಸಾವನ್ನಪ್ಪಿದ ಮಾವೋವಾದಿಗಳಲ್ಲಿ ಒಬ್ಬನನ್ನು ತೆಲಂಗಾಣ ಮೂಲದ ಡಿಸಿಎಂ ಕಮಾಂಡರ್ ಎಂದು ಗುರುತಿಸಲಾಗಿದೆ.












Click it and Unblock the Notifications