ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ಬಿಜೆಪಿ ಭೀಷ್ಮ ಅಡ್ವಾಣಿಗೆ ಟಿಕೆಟ್ ಇಲ್ಲ
ಗಾಂಧಿನಗರ, ಮಾರ್ಚ್ 21: ಲೋಕಸಭಾ ಚುನಾವಣೆ 2019ಕ್ಕೆ ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಚ್ಚರಿ ಎಂಬಂತೆ ಬಿಜೆಪಿಯ ಕಟ್ಟಾಳು ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಮಾಜಿ ಬಿಜೆಪಿ ರಾಷ್ಟ್ರಾಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ಅವರು ಗುಜರಾತ್‌ನ ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದರು, ಆದರೆ ಈ ಬಾರಿ ಇದೇ ಕ್ಷೇತ್ರದಿಂದ ಈಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸುತ್ತಿದ್ದಾರೆ.
ಗಾಂಧಿ ನಗರ ಕ್ಷೇತ್ರದಿಂದ ಲಾಲ್ ಕೃಷ್ಣ ಅಡ್ವಾಣಿ ಅವರು ಈವರೆಗೆ ಆರು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿ ಸತತವಾಗಿ ಜಯ ಗಳಿಸಿದ್ದರು. ಕಳೆದ ಚುನಾವಣೆಯಲ್ಲಿಯೂ ಸಹ ಅವರು ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಆದರೆ ಈ ಬಾರಿ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸುತ್ತಿದ್ದಾರೆ. ಅಮಿತ್ ಶಾ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಮುಂಚೆ ಅವರು ಐದು ವಿಧಾನಸಭೆ ಚುನಾವಣೆಗಳನ್ನು ಎದುರಿಸಿ ಗೆದ್ದಿದ್ದರು. ನಾಲ್ಕು ಬಾರಿ ಸರ್ಕೇಜ್‌ನಿಂದ ಹಾಗೂ ಒಂದು ಬಾರಿ ನಾರನ್ ಪುರದಿಂದ ಅವರು ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಅಡ್ವಾಣಿ ಅವರನ್ನು ಬಿಜೆಪಿಯ ಮೋದಿ-ಶಾ ಜೋಡಿ ಮೂಲೆಗುಂಪು ಮಾಡಿದೆ ಎಂಬ ಆರೋಪ ಇದೆ. ಅದಕ್ಕೆ ಪೂರಕವೆಂಬಂತೆ ಈಗ ಅಡ್ವಾಣಿ ಅವರಿಗೆ ಅವರದ್ದೇ ಕ್ಷೇತ್ರದಿಂದ ಟಿಕೆಟ್ ನೀಡಲಾಗಿಲ್ಲ. ಅಡ್ವಾಣಿ ಅವರಿಗೆ 91 ವರ್ಷ ವಯಸ್ಸಾಗಿದ್ದು, ಅವರಿಗೆ ಟಿಕೆಟ್ ತಪ್ಪಲು ಅವರ ವಯಸ್ಸೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.












Click it and Unblock the Notifications