ಗುಜರಾತ್‌ನಲ್ಲಿ ಕೊಳವೆಬಾವಿಗೆ ಬಿದ್ದ ಮಗು ರಕ್ಷಿಸಿದ ಸೈನಿಕರು- ವಿಡಿಯೋ
ಅಹಮದಾಬಾದ್, ಜೂನ್ 8: ಸಮಯಕ್ಕೆ ಸರಿಯಾಗಿ ಚಾಣಾಕ್ಷತನ ಮೆರೆದಿರುವ ಭಾರತೀಯ ಸೇನೆ, ಕೊಳವೆ ಬಾವಿಗೆ ಬಿದ್ದಿದ್ದ ಒಂದೂವರೆ ವರ್ಷದ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದೆ. ಸೇನೆಯ ರಕ್ಷಣಾ ಕಾರ್ಯಾಚರಣೆ ವೀಡಿಯೋ ಈಗ ವೈರಲ್ ಆಗಿದೆ.
ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ ತಾಲೂಕಿನ ದೂಧಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಒಂದೂವರೆ ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿದೆ. ತಕ್ಷಣವೇ ಸ್ಥಳಕ್ಕಾಗಿಮಸಿದ ಧ್ರಂಗಾಧ್ರ ಸೇನಾ ಠಾಣೆಯ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ.
"ಮಂಗಳವಾರ ರಾತ್ರಿ 9.21ರ ಸುಮಾರಿಗೆ ಧ್ರಂಗಾಧ್ರ ಸೇನಾ ಠಾಣೆಗೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ವರ್ಮಾ ಕರೆ ಮಾಡಿದ್ದರು. ಸೇನಾ ಠಾಣೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ದೂದಾಪುರ ಗ್ರಾಮದ ಕಿರಿದಾದ ಬೋರ್‌ವೆಲ್‌ಗೆ ಶಿವಂ ಎಂಬ ಮಗು ಬಿದ್ದಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು" ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೆ ಬಂದ 10 ನಿಮಿಷಗಳಲ್ಲೇ ತಂಡ ಸಿದ್ಧವಾಗಿತ್ತು. ಮಗುವನ್ನು ರಕ್ಷಿಸಲು ಬೇಕಾದ ಮನಿಲಾ ಹಗ್ಗ, ಸರ್ಚ್ ಲೈಟ್, ಸುರಕ್ಷತಾ ಸರಂಜಾಮು ಮತ್ತು ಕ್ಯಾರಬೈನರ್‍ನಂತಹ ಅಗತ್ಯ ಸಾಧನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಮಗು ಬಿದ್ದ ಕೊಳವೆ ಬಾವಿ ಸುತ್ತಲೂ ಅದಾಗಲೇ ಗ್ರಾಮಸ್ಥರು ನೆರೆದಿದ್ದರು. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸೇನಾ ತಂಡ ಕಾರ್ಯಾಚರಣೆ ಆರಂಭಿಸಿದೆ.
"ಶಿವಂ ಸಿಲುಕಿಕೊಂಡಿದ್ದ ಕೊಳವೆ ಬಾವಿ ಸುಮಾರು 300 ಅಡಿ ಆಳದಷ್ಟಿತ್ತು. ಅದೃಷ್ಟವಶಾತ್ ಮಗು ನೆಲಮಟ್ಟದಿಂದ 20-25 ಅಡಿ ಕೆಳಗೆ ಸಿಲುಕಿಕೊಂಡಿತ್ತು. ಕೊಳವೆ ಬಾವಿಯಲ್ಲಿನ ನೀರಿನ ಮಟ್ಟ ಶಿವಂನ ಕುತ್ತಿಗೆವರೆಗೂ ತಲುಪಿದೆ. ಮಗು ಅಳುತ್ತಿರುವ ಶಬ್ದ ಮೇಲೆಕ್ಕೆ ಕೇಳಿಸುತ್ತಿತ್ತು," ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
In a complex & swift rescue operation last night #INDIANARMY extricated an 18 month old child from 300 ft borewell submerged in water at Dhrangadhra #Gujarat. Presence of mind & innovative methods led to saving of the precious life.#KonarkCorps#HarKaamDeshKeNaam pic.twitter.com/ApOunlVY0g
— Southern Command INDIAN ARMY (@IaSouthern) June 8, 2022
ಸೇನಾತಂಡ ಲೋಹದ ಕೊಕ್ಕೆಯನ್ನು ಮಾರ್ಪಡಿಸಿ ಅದನ್ನು ಹಗ್ಗಕ್ಕೆ ಕಟ್ಟಿ ಬೋರ್‍ವೆಲ್‌ಗೆ ಇಳಿಸಿದ್ದಾರೆ. ಚಾಕಚಕ್ಯತೆಯಿಂದ ಮಗುವಿನ ಟೀ ಶರ್ಟ್‌ಗೆ ಕೊಕ್ಕೆ ತಗುಲಿಹಾಕಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಎಚ್ಚರಿಕೆಯಿಂದ ಹಗ್ಗವನ್ನು ರಕ್ಷಣಾ ತಂಡ ಮೇಲೆಕ್ಕೆ ಎಳೆದಿದೆ, ಯಾವುದೇ ಅನಾಹುತಕ್ಕೂ ಆಸ್ಪದ ಕೊಡದೆ ಮಗು ಮೇಲಕ್ಕೆ ಬಂದಿದೆ" ರಕ್ಷಣಾ ತಂಡ ಸದಸ್ಯರೊಬ್ಬರು ಎಂದು ಹೇಳಿದರು.
ತಕ್ಷಣ ಮಗುವನ್ನು ಪ್ರಥಮ ಚಿಕಿತ್ಸೆಗಾಗಿ ಧ್ರಂಗಾಧ್ರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಗಂಭೀರ ಸಮಸ್ಯೆಯಾಗದ ಕಾರಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಗುವನ್ನು ಸುರೇಂದ್ರನಗರದ ಷಾ ಆಸ್ಪತ್ರೆಯ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications