ಜನರು ತಮ್ಮಿಷ್ಟದ್ದನ್ನು ತಿನ್ನುವುದನ್ನು ತಡೆಯಲು ಹೇಗೆ ಸಾಧ್ಯ?: HC
ಅಹಮದಾಬಾದ್, ಡಿಸೆಂಬರ್ 10: ಆಹಾರ ಮಳಿಗೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವ ಬಗ್ಗೆ ಅಹಮದಾಬಾದ್ ನಗರ ಪಾಲಿಕೆ ತೆಗೆದುಕೊಂಡಿರುವ ಕಠಿಣ ಕ್ರಮಗಳ ಬಗ್ಗೆ ಗುಜರಾತ್ ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗೆ ಮಾಂಸಾಹಾರಗಳನ್ನು ಮಾರಾಟ ಮಾಡುತ್ತಿದ್ದ ಆಹಾರ ಮಳಿಗೆಗಳನ್ನು ಅಹಮದಾಬಾದ್ ನಗರ ಪಾಲಿಕೆ ಇತ್ತೀಚೆಗೆ ವಶಪಡಿಸಿಕೊಂಡಿತ್ತು.
ಗುಜರಾತ್ ಸರ್ಕಾರ ಹಾಗೂ ಪಾಲಿಕೆ ವಿರುದ್ಧ ದಿಲೀಪ್ ಗಟುಭಾಯಿ ರೋಟ್ ತಿರುಗಿಬಿದ್ದು, ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪಾಲಿಕೆ ಹಾಗೂ ಆಡಳಿತ ವರ್ಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಮಾಂಸಾಹಾರ ಮಾರುವ ತಳ್ಳುಗಾಡಿಗಳನ್ನು ವಶಪಡಿಸಿಕೊಂಡ ಪಾಲಿಕೆ ವಿರುದ್ಧ ವಿವಿಧ ಅರ್ಜಿದಾರರು ಸಲ್ಲಿಸಿದ್ದ ಮನವಿ ಸಲ್ಲಿಸಿದ್ದರು. ಮಾರಾಟಗಾರರಲ್ಲಿ ಮಾಂಸಾಹಾರ, ಮೊಟ್ಟೆ ಹಾಗೂ ಸಸ್ಯಾಹಾರ ಮಾರಾಟ ಮಾಡುವವರೂ ಸೇರಿದ್ದಾರೆ. ಎಲ್ಲಾ ಅರ್ಜಿಗಳನ್ನು ಸೇರಿಸಿ ಒಟ್ಟಿಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಪಾಲಿಕೆಗೆ ಆಹಾರ ಸಂಸ್ಕೃತಿ ಬಗ್ಗೆ ತಿಳಿ ಹೇಳಿದರು.
"ಯಾವುದು ಸಮಸ್ಯೆ? ನೀವು ಮಾಂಸಾಹಾರ ಇಷ್ಟಪಡದಿರುವುದು ನಿಮ್ಮ ದೃಷಿಕೋನ. ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?" ಎಂದು ನ್ಯಾಯಾಲಯ ಪಾಲಿಕೆಯನ್ನು ಕಟುವಾಗಿ ಪ್ರಶ್ನಿಸಿತು. "ಜನರು ತಮ್ಮಿಷ್ಟದ್ದನ್ನು ತಿನ್ನುವುದನ್ನು ನೀವು ತಡೆಯಲು ಹೇಗೆ ಸಾಧ್ಯ? ಅಧಿಕಾರದಲ್ಲಿರುವವರು ಇದನ್ನು ಮಾಡಬಯಸುತ್ತಾರೆ ಎಂದಾಕ್ಷಣಕ್ಕೆ ಹಾಗೆ ಮಾಡಬಹುದೇ?" ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.
ಭಾರತದ 10 ರಲ್ಲಿ 7 ಮಂದಿ ಮಾಂಸಾಹಾರ ಪ್ರಿಯರು: ಇಲ್ಲಿದೆ ದೇಶದ ನಾನ್ವೆಜ್ ಲೋಕ
ಮಾರಾಟಗಾರರ ಸರಕು ಮತ್ತು ಸಾಮಗ್ರಿಗಳನ್ನು ಅವರಿಗೆ ಮರಳಿಸಬೇಕೆಂಬ ಅರ್ಜಿದಾರರ ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಪಾಲಿಕೆಗೆ ನ್ಯಾಯಾಲಯ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು. ಇದೇ ವೇಳೆ, ಯಾರದೋ ಅಹಂಕಾರವನ್ನು ತಣಿಸಲು ಇಂತಹ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳು ಪಾಲಿಕೆಯನ್ನು ಈ ವೇಳೆ ಎಚ್ಚರಿಸಿದರು.
ವಡೋದರಾ ಪಾಲಿಕೆಯಲ್ಲೂ ಇದೇ ಕ್ರಮ
ವಿಶೇಷವಾಗಿ ಮೀನು, ಮಾಂಸ ಮತ್ತು ಮೊಟ್ಟೆಗಳಂತಹ ಮಾಂಸಾಹಾರಿ ಆಹಾರವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೊದಲಿಗೆ ವಡೋದರಾ ಪಾಲಿಕೆ ಆದೇಶ ನೀಡಿತ್ತು. ನಂತರ ಇತರೆ ಪಟ್ಟಣಗಳಲ್ಲೂ ಇದೇ ರೀತಿ ಕ್ರಮ ಅನುಸರಿಸಲಾಯಿತು.
ವಡೋದರಾ ಮುನ್ಸಿಪಲ್ ಕಾರ್ಪೊರೇಶನ್ (ವಿಎಂಸಿ) ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಅವರು ಮಾತನಾಡಿ, "ಮೀನು, ಮಾಂಸ, ಕೋಳಿ, ಮೊಟ್ಟೆ ಸೇರಿದಂತೆ ಮಾಂಸಾಹಾರ ಮಾರಾಟ ಮಾಡುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾಂಸಾಹಾರ ಹೊಂದಿರುವ ಯಾವುದೇ ರೆಸ್ಟೋರೆಂಟ್‌ಗಳಿಗೆ ಸಾರ್ವಜನಿಕ ಪ್ರದರ್ಶನದಿಂದ ಆಹಾರಗಳನ್ನು ಇಡದಂತೆ ಸೂಚಿಸಲಾಗಿದೆ,'' ಎಂದಿದ್ದರು.
"ಎಲ್ಲಾ ಆಹಾರ ಮಳಿಗೆಗಳು, ವಿಶೇಷವಾಗಿ ಮೀನು, ಮಾಂಸ ಮತ್ತು ಮೊಟ್ಟೆಗಳಂತಹ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವವರು, ನೈರ್ಮಲ್ಯದ ಕಾರಣಗಳಿಗಾಗಿ ಆಹಾರವನ್ನು ಚೆನ್ನಾಗಿ ಮುಚ್ಚಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಬಹಿರಂಗವಾಗಿಟ್ಟು ಮಾರಾಟ ಮಾಡುವ ಮಳಿಗೆಗಳನ್ನು ತೆಗೆದುಹಾಕಬೇಕು ಎಂದು ನಾನು ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದರು.

"ಯಾವುದೇ ಮಾಂಸಾಹಾರಿ ಆಹಾರವು ಮಳಿಗೆಯಿಂದ ಹಾದುಹೋಗುವ ಯಾರಿಗೂ ಗೋಚರಿಸುವಂತಿಲ್ಲ. ಯಾಕೆಂದರೆ ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದೆ. ಮಾಂಸಾಹಾರಿ ಆಹಾರವನ್ನು ಪೂರ್ಣ ಪ್ರದರ್ಶನದಲ್ಲಿ ಮಾರಾಟ ಮಾಡುವ ಅಭ್ಯಾಸವು ವರ್ಷಗಳಿಂದಲೂ ಇದೆ. ಆದರೆ ಅದನ್ನು ಸರಿಪಡಿಸುವ ಸಮಯ ಬಂದಿದೆ. ಮಾಂಸಾಹಾರವನ್ನು ನೋಡಬಾರದು. ಈ ಸೂಚನೆಯು ಹಸಿ ಮಾಂಸ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಅನ್ವಯಿಸುತ್ತದೆ" ಎಂದಿದ್ದರು.
ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್
ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್ (RMC) ಮೊಟ್ಟೆ ಮತ್ತು ಇತರ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಕೈಗಾಡಿಗಳು ಮತ್ತು ಕ್ಯಾಬಿನ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು. ಇದರ ಭಾಗವಾಗಿ ನಾಗರಿಕ ಅಧಿಕಾರಿಗಳು ಫುಲ್‌ಚಾಬ್ ಚೌಕ್, ಲಿಂಬ್ಡಾ ಚೌಕ್ ಮತ್ತು ಶಾಸ್ತ್ರಿ ಮೈದಾನದಲ್ಲಿನ ಮಳಿಗೆಗಳನ್ನು ತೆಗೆದುಹಾಕಿದರು.
ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಅಂಗಡಿಗಳು ಹಿಂದೂ ಧರ್ಮವನ್ನು ಅನುಸರಿಸುವವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ. ಅವರು ತಮ್ಮ ವ್ಯವಹಾರವನ್ನು ಸರಿಯಾದ ಸ್ಥಳದಲ್ಲಿ ಸಾರ್ವಜನಿಕ ಪ್ರದರ್ಶನವಿಲ್ಲದೇ ಮಾಡಬಹುದು. ಇದು ಮುಖ್ಯ ರಸ್ತೆಗಳಲ್ಲಿನ ವಸತಿ ಪ್ರದೇಶಗಳಲ್ಲಿ ಇರುವಂತಿಲ್ಲ. ನಗರದ ರಸ್ತೆಗಳಿಂದ ಇಂತಹ ಎಲ್ಲ ಜಾಯಿಂಟ್‌ಗಳನ್ನು ತೆಗೆಯುವವರೆಗೆ ಈ ಅಭಿಯಾನ ಮುಂದುವರಿಯಲಿದೆ" ಎಂದು ರಾಜ್‌ಕೋಟ್ ಮೇಯರ್ ಪ್ರದೀಪ್ ದಾವ್ ತಿಳಿಸಿದರು.