ವಡೋದರಾದಲ್ಲಿ ಗಣೇಶ ಮೆರವಣಿಗೆ ವೇಳೆ ಘರ್ಷಣೆ, 13 ಮಂದಿ ಬಂಧನ
ಅಹಮದಾಬಾದ್, ಆಗಸ್ಟ್ 30: ಗುಜರಾತ್‌ನ ವಡೋದರಾದಲ್ಲಿ ಸೋಮವಾರ ರಾತ್ರಿ ಗಣೇಶ ಚತುರ್ಥಿ ಮೆರವಣಿಗೆ ವೇಳೆ ಘರ್ಷಣೆ ನಡೆದಿದ್ದು ಪೊಲೀಸರು 13 ಜನರನ್ನು ಬಂಧಿಸಿದ್ದಾರೆ. ವಡೋದರಾ ನಗರದ ಸೂಕ್ಷ್ಮ ಪ್ರದೇಶದ ಮೂಲಕ ಗಣೇಶ ಮೂರ್ತಿಯನ್ನು ಹೊತ್ತ ಮೆರವಣಿಗೆ ಸಾಗುವಾಗ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಕಲ್ಲು ತೂರಾಟ ನಡೆದಿದೆ. ಆದರೆ ಯಾರಿಗೂ ಗಾಯವಾಗಿಲ್ಲ. ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪದ ಮೇಲೆ ಎರಡು ಸಮುದಾಯದವರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆಯು ಮಾಂಡವಿ ಪ್ರದೇಶದ ಪಾಣಿಗೇಟ್ ದರ್ವಾಜಾ ಮೂಲಕ ರಾತ್ರಿ 11.15 ರ ಸುಮಾರಿಗೆ ಹಾದು ಹೋಗುತ್ತಿತ್ತು. ಈ ಸಮಯದಲ್ಲಿ ಎರಡೂ ಸಮುದಾಯದ ಜನರು ಪರಸ್ಪರ ಜಗಳವಾಡಲು ಪ್ರಾರಂಭಿಸಿದರು. ಈ ಗಲಾಟೆಯಲ್ಲಿ ಮಸೀದಿಯ ಮುಖ್ಯ ಗೇಟ್‌ನ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಫ್‌ಐಆರ್ ಅನ್ನು 143 (ಕಾನೂನುಬಾಹಿರ ಸಭೆ), 147 (ಗಲಭೆ), 336 (ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಕೃತ್ಯ), 295 (ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.
ಹೀಗಾಗಿ ಈ ಪ್ರದೇಶದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಅನ್ನು ಹೆಚ್ಚಿಸಲಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಸ್ತು ನಡೆಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶಾಂತಿಯುತವಾಗಿದೆ ಮತ್ತು ಘಟನೆಯ ಬಗ್ಗೆ ಅಪರಾಧ ವಿಭಾಗದ ತನಿಖೆ ನಡೆಸುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಚಿರಾಗ್ ಕೊರಾಡಿಯಾ ತಿಳಿಸಿದ್ದಾರೆ.
ಪರಿಸ್ಥಿತಿ ಶಾಂತಿಯುತವಾಗಿದ್ದು, ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾವು ಜನರಿಗೆ ಮನವಿ ಮಾಡುತ್ತೇವೆ ಎಂದು ಅವರು ಕರೆ ನೀಡಿದ್ದಾರೆ.












Click it and Unblock the Notifications