ಗುಜರಾತ್ ರಾಜಕಾರಣ: ಕೇಜ್ರಿವಾಲ್ ಅನ್ನು ಊಟಕ್ಕೆ ಕರೆದಿದ್ದ ಆಟೋ ಚಾಲಕ ಈಗ ಮೋದಿ ಅಭಿಮಾನಿ!
ಅಹ್ಮದಾಬಾದ್, ಅಕ್ಟೋಬರ್ 18: ರಾಜಕಾರಣ ಅಂದ್ರೇನೇ ಹಾಗೆ. ಇಲ್ಲಿ ನಾಯಕರು ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗುವುದೆಲ್ಲ ಸರ್ವೇ ಸಾಮಾನ್ಯ. ಆದರೆ ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಹೇಗೆ ಪರಿವರ್ತನೆ ಆಗುತ್ತೆ ಎಂಬುದನ್ನು ಸಾಕ್ಷೀಕರಿಸುವ ಘಟನೆಯೊಂದು ವರದಿಯಾಗಿದೆ. ಗುಜರಾತಿನಲ್ಲಿ ನಿನ್ನೆಯವರೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆ ಮಾತನಾಡುತ್ತಿದ್ದ ಆಟೋ ಚಾಲಕನೊಬ್ಬ ಈಗ ತಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಮಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನ್ನು ಅಹಮದಾಬಾದ್‌ನಲ್ಲಿರುವ ತಮ್ಮ ಮನೆಗೆ ಔತಣಕೂಟಕ್ಕಾಗಿ ಆಹ್ವಾನಿಸಿದ ಆಟೋ ಚಾಲಕ ವಿಕ್ರಮ್ ದಾಂತಾನಿ ಯೂ-ಟರ್ನ್ ಹೊಡೆದಿದ್ದಾರೆ. ತಾವು ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದು, ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದಾರೆ. ಗುಜರಾತಿನಲ್ಲಿ ಶುರುವಾದ ಯೂ-ಟರ್ನ್ ರಾಜಕೀಯ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಆಪ್ ಪಾರ್ಟಿಗೆ ಆಪ್ ಇಟ್ಟ ಆಟೋ ಚಾಲಕ ದಾಂತಾನಿ!
ಕಳೆದ ಶುಕ್ರವಾರ ಥಾಲ್ತೇಜ್ ಪ್ರದೇಶದಲ್ಲಿ ಪ್ರಧಾನಿ ಮೋದಿಯವರ ಸಾರ್ವಜನಿಕ ಮೆರವಣಿಗೆಯಲ್ಲಿ ಆಟೋ ಚಾಲಕ ವಿಕ್ರಮ್ ದಾಂತಾನಿ ಕಾಣಿಸಿಕೊಂಡರು. ಬಿಜೆಪಿಯ ಟ್ರೇಡ್‌ಮಾರ್ಕ್ ಆಗಿರುವ ಕೇಸರಿ ಸ್ಕಾರ್ಫ್ ಮತ್ತು ಕ್ಯಾಪ್ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಇದೇ ದಾಂತಾನಿ, ಕಳೆದ ಸೆಪ್ಟೆಂಬರ್ 13ರಂದು ಅಹಮದಾಬಾದ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಟೌನ್ ಹಾಲ್ ಸಭೆಯಲ್ಲಿ ಕೇಜ್ರಿವಾಲ್ ಅನ್ನು ತಮ್ಮ ಮನೆಗೆ ಔತಣಕೂಟಕ್ಕಾಗಿ ಆಹ್ವಾನಿಸಿದ್ದರು.

ಕೇಜ್ರಿವಾಲ್ ಅನ್ನು ಊಟಕ್ಕೆ ಕರೆದಿದ್ದೇಕೆ ಆಟೋ ಚಾಲಕ?
ಎಎಪಿ ಸಂಚಾಲಕ ಮತ್ತು ದೆಹಲಿ ಸಿಎಂ ಕೇಜ್ರಿವಾಲ್ ಸಭೆಯಲ್ಲಿ ಔತಣಕೂಟದ ಆಹ್ವಾನವನ್ನು ಸ್ವೀಕರಿಸಿದ್ದರು. ನಂತರ ದಾಂತಾನಿ ಆಟೋರಿಕ್ಷಾದಲ್ಲೇ ಕೇಜ್ರಿವಾಲ್, ಅವರ ಮನೆಗೆ ತೆರಳಿದ ಸಂದರ್ಭದಲ್ಲಿ ದಾಂತಾನಿ ಸಖತ್ ಸುದ್ದಿ ಮಾಡಿದ್ದರು. ಅಂದಿನ ಘಟನೆ ಬಗ್ಗೆ ಇಂದು ವಿಕ್ರಮ್ ದಾಂತಾನಿ ಸ್ಪಷ್ಟನೆ ಕೊಟ್ಟಿದ್ದಾರೆ.
"ನಮ್ಮ ಯೂನಿಯನ್ ನಾಯಕರು ನನ್ನನ್ನು ಕೇಳಿದ್ದರಿಂದ ನಾನು ಕೇಜ್ರಿವಾಲ್ ಅನ್ನು ಊಟಕ್ಕೆ ಆಹ್ವಾನಿಸಿದೆ. ನಾನು ಅವರಿಗೆ ನನ್ನ ಮನೆಯಲ್ಲಿ ಊಟಕ್ಕೆ ಆತಿಥ್ಯ ನೀಡಲು ಮುಂದಾದ ತಕ್ಷಣ, ಕೇಜ್ರಿವಾಲ್ ಅದನ್ನು ಒಪ್ಪಿಕೊಂಡರು. ಅದು ಇಷ್ಟು ದೊಡ್ಡ ಸಮಸ್ಯೆಯಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಆಪ್ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ, ಆ ಘಟನೆ ನಂತರ ನಾನು ಎಎಪಿಗೆ ಸಂಬಂಧಿಸಿದ ಯಾವುದೇ ನಾಯಕರೊಂದಿಗೆ ಸಂಪರ್ಕದಲ್ಲಿಲ್ಲ," ಎಂದು ಆಟೋ ಚಾಲಕ ವಿಕ್ರಮ್ ದಾಂತಾನಿ ಹೇಳಿದರು.

ವಿಕ್ರಮ್ ದಾಂತಾನಿ ಬಾಯಲ್ಲಿ ಮೋದಿ ನಾಮಸ್ಮರಣೆ!
ಕಳೆದ ತಿಂಗಳು ಆಪ್ ಆಪ್ ಅನ್ನುತ್ತಿದ್ದ ಆಟೋರಿಕ್ಷಾ ಚಾಲಕನ ಬಾಯಲ್ಲಿ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಸ್ಮರಣೆ ಶುರುವಾಗಿದೆ. ತಾನು ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ, ತಾನು ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದೇನೆ," ಎಂದು ವಿಕ್ರಮ್ ಹೇಳುತ್ತಿದ್ದಾರೆ. "ನಾನು ಮೋದಿಜಿಯವರ ದೊಡ್ಡ ಅಭಿಮಾನಿ ಆಗಿರುವುದರಿಂದ ಈ ಮೆರವಣಿಗೆಗೆ ಬಂದಿದ್ದೇನೆ. ನಾನು ಮೊದಲಿನಿಂದಲೂ ಬಿಜೆಪಿಯೊಂದಿಗೆ ಇದ್ದೇನೆ. ಈ ಹಿಂದೆ ಯಾವಾಗಲೂ ಬಿಜೆಪಿಗೆ ನನ್ನ ಮತವನ್ನು ನೀಡಿದ್ದೇನೆ. ನಾನು ಯಾವುದೇ ಒತ್ತಡದಿಂದ ಇದನ್ನು ಹೇಳುತ್ತಿಲ್ಲ," ಎಂದು ಹೇಳಿದ್ದಾರೆ.

ದಾಂತಾನಿ ಮನೆಗೆ ಹೋಗಿ ಭೋಜನ ಮಾಡಿದ್ದ ಕೇಜ್ರಿವಾಲ್!
ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ ಸೆಪ್ಟೆಂಬರ್ 13ರಂದು ಆಟೋ ಚಾಲಕರೊಂದಿಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಂವಾದ ನಡೆಸಿದರು. ಅಂದು ನೀಡಿದ ಆಹ್ವಾನದ ಮೇರೆಗೆ ಆಟೋ ಚಾಲಕ ವಿಕ್ರಮ್ ದಾಂತಾನಿ ನಿವಾಸಕ್ಕೆ ತೆರಳಿದ್ದ ಕೇಜ್ರಿವಾಲ್, ಅಲ್ಲಿಯೇ ಭೋಜನ ಸವಿದಿದ್ದರು. ಆಟೋ ಚಾಲಕನ ಮನೆಗೆ ಊಟಕ್ಕೆ ಹೋಗಿದ್ದ ಕೇಜ್ರಿವಾಲ್ ಆತಿಥ್ಯ ಸ್ವೀಕರಿಸಿದರು. ಈ ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಆಟೋ ಚಾಲಕನ ಪತ್ನಿ ದೆಹಲಿಯಿಂದ ಬಂದವರು ಎಂದು ತಿಳಿದರು. ತಕ್ಷಣವೇ ಆತಿಥೇಯರ ಕುಟುಂಬವನ್ನು ದೆಹಲಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದರು.












Click it and Unblock the Notifications