ಗುಜರಾತ್ ಅಖಾಡದಲ್ಲಿ ಆಪ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದ ನಡ್ಡಾ!
ಅಹ್ಮದಾಬಾದ್, ಸೆಪ್ಟೆಂಬರ್ 20: ಗುಜರಾತ್ ಚುನಾವಣಾ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಕಾದಾಟ ನಡೆಯಲಿದ್ದು, ಆಮ್ ಆದ್ಮಿ ಪಕ್ಷವು ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಹೇಳಿದ್ದಾರೆ.
ಎರಡು ದಿನಗಳ ಗುಜರಾತ್ ಭೇಟಿಗೂ ಮೊದಲು ಮಾತನಾಡಿದ ಅವರು, ರಾಜಕೀಯ ಲೆಕ್ಕಾಚಾರಗಳನ್ನು ತೆರೆದಿಟ್ಟಿದ್ದಾರೆ. ಮಂಗಳವಾರದಿಂದ ಗುಜರಾತ್‌ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಸೋಮವಾರ ತಿಳಿಸಿದ್ದಾರೆ.
"ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ನಡೆಯಲಿದೆ. ಈ ಹಿಂದೆ ಹಲವು ಪಕ್ಷಗಳು ಗುಜರಾತ್‌ನಲ್ಲಿ ಚುನಾವಣೆ ಎದುರಿಸಲು ಬಂದಿದ್ದವು, ಆದರೆ ಉಳಿದುಕೊಂಡಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೋರಾಟವಿದೆ. ಈ ಬಾರಿಯೂ ಸಹ ಕಾಂಗ್ರೆಸ್ ಜೊತೆಗಿನ ಪೈಪೋಟಿ ಇರುತ್ತದೆ. ಹಿಂದೆ, ಬಿಜೆಪಿ ಭಾರಿ ಅಂತರದಿಂದ ಗೆಲ್ಲುತ್ತದೆ. ಈ ಚುನಾವಣೆಯಲ್ಲಿ ನಾವು ಅತ್ಯಧಿಕ ಸ್ಥಾನಗಳನ್ನು ಪಡೆಯುತ್ತೇವೆ ಎಂದು ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ವಘೇಲಾ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಸಾಲು ಸಾಲು ಕಾರ್ಯಕ್ರಮ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ ರಾತ್ರಿಯೇ ಗುಜರಾತ್‌ಗೆ ತಲುಪಲಿದ್ದು, ಇಂದಿನಿಂದ ಹಲವಾರು ಕಾರ್ಯಕ್ರಮಗಳು ನಡೆಯಲಿದ್ದು, ಜೆಪಿ ನಡ್ಡಾ ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರದೀಪ್ ಸಿಂಗ್ ವಘೇಲಾ ಹೇಳಿದರು. ನಮೋ ಕಿಸಾನ್ ಪಂಚಾಯತ್, ಮೇಯರ್ ಶೃಂಗಸಭೆ, ರಾಜ್‌ಕೋಟ್‌ನಲ್ಲಿ ಜನಪ್ರತಿನಿಧಿ ಸಮ್ಮೇಳನ, ಮೋರ್ಬಿಯಲ್ಲಿ ಬೃಹತ್ ರೋಡ್‌ಶೋ ಮತ್ತು ಗಾಂಧಿನಗರದಲ್ಲಿ ವೀರಾಂಜಲಿ ಕಾರ್ಯಕ್ರಮದ ಭಾಗವಾಗಿ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ.
ಜೆಪಿ ನಡ್ಡಾ ಭಾಗವಹಿಸುವ ಮೇಯರ್ ಶೃಂಗಸಭೆಯಲ್ಲಿ 18 ರಾಜ್ಯಗಳ 121 ಮೇಯರ್‌ಗಳು ಮತ್ತು ಉಪ ಮೇಯರ್‌ಗಳು ಭಾಗವಹಿಸಲಿದ್ದಾರೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 20ರ ಮಂಗಳವಾರ ಬಿಜೆಪಿ ಅಧ್ಯಕ್ಷರು ಗಾಂಧಿನಗರದ ಬಳಿ ಬಿಜೆಪಿಯ ಕಿಸಾನ್ ಮೋರ್ಚಾ ಕಾರ್ಯಕ್ರಮದಲ್ಲಿ ಇ-ಬೈಕ್‌ಗಳಿಗೆ ಚಾಲನೆ ನೀಡಲಿದ್ದಾರೆ.












Click it and Unblock the Notifications