ಭಾರತೀಯ ಸಂಸತ್ತನ್ನು ಸುಗಮಗೊಳಿಸಲು 5 ಸಲಹೆ
ಸರಕಾರವಿರುವುದೇ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ. ಆದರೆ, ಎಷ್ಟು ಜನರಿಗೆ ಸಂಸತ್ತಿನ ಬಗ್ಗೆ, ನಮ್ಮನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿಗಳನ್ನು ಸಂಪರ್ಕಿಸುವ, ರಾಜಕೀಯ ನೀತಿಯನ್ನು ತಿಳಿಯುವ ಅವಕಾಶವಿದೆ? ಸಂಸತ್ತಿನಲ್ಲಿ ನಡೆಯುವ ಎಷ್ಟೋ ಕಲಾಪಗಳು ಜನರ ಗಮನಕ್ಕೆ ಬರುವುದೇ ಇಲ್ಲ. ಶ್ರೀಸಾಮಾನ್ಯನಿಗಿರಲಿ, ಸಂಸತ್ತಿನ ಕೆಲ ಕಟ್ಟುಪಾಡುಗಳಿಂದಾಗಿ ಸಂಸದರು ಕೂಡ ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.
ಪರಿಸ್ಥಿತಿ ಹೀಗಿರುವಾಗ, ಸಂಸತ್ ಕಲಾಪಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲು, ಕಲಾಪಗಳು ಇನ್ನಷ್ಟು ಸುಗಮವಾಗಿ ಸಾಗಲು 5 ಅಂಶಗಳ ಸಲಹೆಗಳನ್ನು ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಮುಂದೆ ರಾಜಕೀಯ ಧುರೀಣ ರಾಜೀವ್ ಗೌಡ ಅವರು ಮುಂದಿಟ್ಟಿದ್ದಾರೆ. ಅವರು, ಮೀರಾ ಕುಮಾರ್ ಅವರಿಗೆ ಬರೆದ ಪತ್ರ ಕೆಳಗಿನಂತಿದೆ.
ಮೇಡಂ ಸ್ಪೀಕರ್,
ಒಬ್ಬ ಭಾರತೀಯನಾಗಿ, ಮುಂಗಾರು ಅಧಿವೇಶನದಲ್ಲಿ ಹಲವಾರು ಮಸೂದೆಗಳ ಮೇಲೆ ನಡೆದ ಚರ್ಚೆ ಮತ್ತು ಮಂಡನೆಯಿಂದ ನಾನು ನಿಜವಾಗಿಯೂ ರೋಮಾಂಚನಗೊಂಡೆ. ಕಂಪನಿ ಬಿಲ್, ಪೆನ್ಶನ್ ಫಂಡ್ ಬಿಲ್ ಸೇರಿದಂತೆ ಡಜನ್ ಗಟ್ಟಲೆ ಮಸೂದೆ ಕುರಿತು ಚರ್ಚೆಗಳಿಗೆ ನೀವು ಸಾಕ್ಷಿಯಾಗಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ಆಹಾರ ಸುರಕ್ಷೆ ಮತ್ತು ಭೂಕಬಳಿಕೆ ಮಸೂದೆಗೆ ಸಂಬಂಧಿಸಿದಂತೆ ವಿರೋಧಪಕ್ಷಗಳ ತೀವ್ರ ವಿರೋಧವಿದ್ದರೂ, ಸಂಸದರು ಒಗ್ಗಟ್ಟು ತೋರಿಸಿದರು. ಪ್ರಧಾನಿ ಆಕ್ರಮಣ ಧೋರಣೆ ತೋರಿದ್ದು ಮತ್ತು ಆಹಾರ ಮಸೂದೆ ಮಂಡನೆ ಸಮಯದಲ್ಲಿ ಸೋನಿಯಾ ಗಾಂಧಿ ಮಾಡಿ ಉತ್ತಮ ಭಾಷಣಕ್ಕೆ ಸಂಸತ್ತು ಸಾಕ್ಷಿಯಾಯಿತು.
ಸಂಸತ್ತಿನಲ್ಲಿ ಇಂಥ ಕಲಾಪ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲು ಸಾಧ್ಯವೆ? ಸಂಸತ್ತಿನಲ್ಲಿ ನಿಮ್ಮ ಕೆಲಸ ಇನ್ನೂ ಸುಗಮವಾಗಿಸಲು ಕೆಲವೊಂದು ಸಲಹೆಗಳನ್ನು ಅತ್ಯಂತ ವಿನಮ್ರವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

1) ಪಕ್ಷಾಂತರ ವಿರೋಧಿ ಕಾಯ್ದೆ ತಿದ್ದುಪಡಿ
ಪ್ರಸ್ತುತ, ಸಂಸದರು ದುರಾಸೆಯಿಂದಾಗಿ ಪಕ್ಷ ತೊರೆದು ತಾವು ಆಯ್ಕೆಯಾದ ಕ್ಷೇತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ, ಪಕ್ಷಾಂತರ ವಿರೋಧಿ ಕಾಯ್ದೆಗೆ ತಿದ್ದುಪಡಿ ತಂದು, ಸರಕಾರದ ಅಳಿವುಉಳಿವಿನ ಪ್ರಶ್ನೆ ಬಂದಾಗ ಮಾತ್ರ ಇದು ಅನ್ವಯವಾಗುವಂತೆ ನೋಡಿಕೊಳ್ಳಬೇಕು. ಇಂದು ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋಗಿದೆ. ಪಕ್ಷದ ಹಿರಿಯ ನಾಯಕರ ಅನಿಸಿಕೆಗೆ ವಿಭಿನ್ನವಾಗಿ ಹೇಳಿಕೆ ನೀಡಲು ಕಿರಿಯ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಸಂಸದರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮತ್ತು ಧೈರ್ಯವಾಗಿ ಮಂಡಿಸುವಂತೆ ಅವಕಾಶ ಮಾಡಿಕೊಡಬೇಕು.

2) ಖಾಸಗಿ ಸದಸ್ಯ ಕಾಯ್ದೆಗಳಿಗೆ ಅವಕಾಶ
ಖಾಸಗಿ ಸದಸ್ಯ ಮಸೂದೆಗಳಿಗೆ ಹೆಚ್ಚಿನ ಅವಕಾಶ ಮತ್ತು ಗೌರವ ನೀಡಬೇಕು. ಇದರಿಂದ ಹೊಸಹೊಸ ಯೋಚನೆಗಳು ಹೊರಹೊಮ್ಮುತ್ತವೆ. ಪ್ರಮುಖವಲ್ಲದ ವಿಷಯಗಳಿಗೂ ಇದರಿಂದ ಚರ್ಚೆಗೆ ಅವಕಾಶ ಸಿಗುತ್ತದೆ. ಸಂಸದರು ನಿಜವಾಗಿಯೂ ಕಾನೂನು ರಚನಕಾರರಾಗುತ್ತಾರೆ. ಹಲವಾರು ತೊಂದರೆಗಳಿಗೆ ಪರಿಹಾರ ದೊರಕಿಸಿಕೊಡುವ ವಿಷಯಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಹಲವು ವಿಷಯಗಳ ಮೇಲೆ ಪ್ರಭುತ್ವ ಸಾಧಿಸಲು ಇದರಿಂದ ಅನುಕೂಲವಾಗುತ್ತದೆ.

3) ಸಂಸದೀಯ ಮಂಡಳಿ ಸಭೆಗಳನ್ನು ಚಿತ್ರೀಕರಿಸಿ
ನಿಷ್ಪಕ್ಷಪಾತ ಮತ್ತು ಅಧ್ಯಯನದಿಂದ ಕೂಡಿದ ಚರ್ಚೆಗಳು ಸಂಸದೀಯ ಮಂಡಳಿಗೆ ಶೋಭೆ. ಆದರೆ, ಈ ಚರ್ಚೆಗಳು ಜನಸಾಮಾನ್ಯರ ಅವಗಾಹನೆಗೆ ಬರುವುದೇ ಇಲ್ಲ. ಸಮಿತಿ ಸಭೆಗಳಲ್ಲಿ ನಡೆಯುವ ಪ್ರಕ್ರಿಯೆ ಜನರಿಗೆ ತಿಳಿದರೆ ಸಂಸದರ ಬಗ್ಗೆ ಅವರಲ್ಲಿ ಗೌರವ ಭಾವನೆ ಬೆಳೆಯುತ್ತದೆ. ಅವರಿಗೆ ಎಂಥ ಸಮಸ್ಯೆಗೆ ಯಾರನ್ನು ಭೇಟಿಯಾಗಬೇಕು ಎಂಬುದು ತಿಳಿಯುತ್ತದೆ. ಆದರೆ ಇದಾಗಬೇಕಿದ್ದರೆ ಪ್ರತಿ ಸಂಸದನಿಗೂ ಸಾಕಷ್ಟು ಸಂಶೋಧನೆ ಮಾಡಿದ ಸಿಬ್ಬಂದಿಯನ್ನೂ ನೀಡಬೇಕಾಗುತ್ತದೆ.

4) ಸಾರ್ವಜನಿಕ ಹಿತಾಸಕ್ತಿ ಮಸೂದೆ
ಜನರ ಅಳಲು, ಅಭಿಪ್ರಾಯಗಳನ್ನು ಸಂಸದರು ಕೇಳಿ, ಸೂಕ್ತ ಪ್ರತಿಕ್ರಿಯೆ ನೀಡುವಂಥ ವ್ಯವಸ್ಥೆ ರೂಪಿಸಬೇಕು. ಅರ್ಜಿಗಳನ್ನು ಆಲಿಸುವ ಸಮಿತಿ ಈಗ ಅಸ್ತಿತ್ವದಲ್ಲಿದ್ದರೂ ಅದಕ್ಕೆ ಜೀವಂತಿಕೆ ನೀಡುವ ಅಗತ್ಯವಿದೆ. ಸಂಸದರೇ ಸೂಕ್ತವಾದ ಪರಿಹಾರ ದೊರಕಿಸಿಕೊಡುವಂತಿದ್ದರೆ ಜನರು ನ್ಯಾಯಾಂಗದ ಕದವನ್ನು ತಟ್ಟುವ ಅವಶ್ಯಕತೆಯೇ ಇರುವುದಿಲ್ಲ. ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸುವ ಅವಕಾಶವಿರುವುದರಿಂದ ಸಂಸದರಿಗೆ ಈ ಹಕ್ಕು ಚಲಾಯಿಸುವ ಅವಕಾಶ ದೊರೆಯುತ್ತಿಲ್ಲ. ಆದರೆ, ರಾಜಕೀಯ ನೀತಿಗೆ ಸಂಬಂಧಿಸಿದಂತೆ ನ್ಯಾಯಾಂಗ ಹಸ್ತಕ್ಷೇಪ ಮಾಡುವುದು ಅಷ್ಟು ಸರಿಯಲ್ಲ.

5) ಪಾರದರ್ಶಕತೆ ತಗೊಂಡು ಬನ್ನಿ
ಯಾವುದೇ ಮಸೂದೆ ಮಂಡನೆಯಾಗುವ ಮುನ್ನ ಸಾರ್ವಜನಿಕರು ಮತ್ತು ಸಂಘಗಳು ಅಭಿಪ್ರಾಯ ನೀಡುತ್ತವೆ. ಭಾರತದಲ್ಲಿ ಇದು ತೆರೆಮರೆಯಲ್ಲಿ ನಡೆಯುತ್ತದೆ. ಇದು ಮುಕ್ತವಾಗಿ ನಡೆಯಬೇಕು. ಸೂರ್ಯನ ಬೆಳಕಿಗೆ ಬಂದಾಗ ತಾನೆ ಸೋಂಕು ನಿವಾರಣೆ ಸಾಧ್ಯ? ದಶಕಗಳ ಹಿಂದೆ ಅಲ್ಬರ್ಟ್ ಹಿರ್ಶಮನ್ ಎಂಬುವವರು ರಾಜಕೀಯ ವ್ಯವಸ್ಥೆಯ ಬಗ್ಗೆ ಪುಸ್ತಕ ಬರೆದಿದ್ದರು. ಅಭಿಪ್ರಾಯ ಮಂಡನೆಗೆ ಮುಕ್ತ ಅವಕಾಶವಿಲ್ಲದಾಗ ಸಾರ್ವಜನಿಕರು ಬೇರೆ ದಾರಿಯನ್ನು ಕಂಡುಕೊಳ್ಳುತ್ತಾರೆ. ಅವರು ಸಮಸ್ಯೆ ಪರಿಹಾರಕ್ಕಾಗಿ ನ್ಯಾಯಾಂಗ ಮತ್ತು ಸಮಾಜದ ಕದ ತಟ್ಟುತ್ತಾರೆ.
ಇಂತಿ ನಿಮ್ಮ,
ಎಂ.ವಿ. ರಾಜೀವ್ ಗೌಡ
(ರಾಜೀವ್ ಗೌಡ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ - ಬೆಂಗಳೂರುದಲ್ಲಿ ಪ್ರೊಫೆಸರ್ ಆಗಿದ್ದು, ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರರಲ್ಲೊಬ್ಬರಾಗಿದ್ದಾರೆ. ಇವು ಅವರ ಸ್ವಂತ ಅಭಿಪ್ರಾಯಗಳು.)












Click it and Unblock the Notifications