ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ

ಬೆಂಗಳೂರು, ಆ.27 : ಸಿಎಂ ತವರು ಕ್ಷೇತ್ರವಾದ ಮೈಸೂರು ಮಹಾನಗರ ಪಾಲಿಕೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಪಾಲಿಕೆಯ ಸುಮಾರು ಎರಡು ಸಾವಿರ ಸಿಬ್ಬಂದಿ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಸುಮಾರು 5 ಕೋಟಿ ವೇತನ ನೀಡಲು ಪಾಲಿಕೆ ಬಳಿ ಹಣವಿಲ್ಲದಂತಾಗಿದೆ.

ಪ್ರತಿತಿಂಗಳ 3ರಂದು ಪಾಲಿಕೆಯ ಸಿಬ್ಬಂದಿ ವೇತನ ಪಡೆಯುತ್ತಿದ್ದರು. ಆದರೆ, ಈ ಬಾರಿ ದಿನಾಂಕ 11 ಆದರೂ ಪಾಲಿಕೆ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಪಾಲಿಕೆ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ ಎಂದು ವೇತನ ತಡೆ ಹಿಡಿಯಲಾಗಿದೆ.

ಪಾಲಿಕೆಯ ಲೆಕ್ಕಾಧಿಕಾರಿಯಾಗಿದ್ದ ಇಂದಿರಮ್ಮ ತಾವು ವರ್ಗಾವಣೆ ಆಗುವಾಗ ಗುತ್ತಿಗೆದಾರರಿಗೆ 38 ಕೋಟಿ ರೂ. ಬಿಲ್ ಗೆ ಚೆಕ್ ನೀಡಿ ಹೋಗಿದ್ದಾರೆ. ಇದರಿಂದ ಪಾಲಿಕೆ ಬರಿದಾಗಿದ್ದು, ನೌಕರರು ವೇತನವಿಲ್ಲದೆ ಗೌರಿ-ಗಣೇಶ ಹಬ್ಬವನ್ನು ಆಚರಿಸಿದ್ದಾರೆ.

ಪಾಲಿಕೆ ನೂತನ ಆಯುಕ್ತರಾಗಿ ರವಿ ಅವರು ಅಧಿಕಾರವಹಿಸಿಕೊಂಡಿದ್ದು, ಆದಾಯದ ಮೂಲಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಮೈಸೂರು ದಸರಾವೂ ಹತ್ತಿರವಾಗುತ್ತಿರುವ ಸಮಯದಲ್ಲಿ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ, ಅದರ ಪರಿಣಾಮ ದಸರಾ ಉತ್ಸವದ ಮೇಲೂ ಉಂಟಾಗುತ್ತದೆ. ಸಿಎಂ ಸಿದ್ದರಾಮಯ್ಯ ಪಾಲಿಕೆಗೆ ಆರ್ಥಿಕ ಚೈತನ್ಯ ತುಂಬುವರೇ? (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಕೆರೆ ಬಿರುಕು ಗ್ರಾಮಸ್ಥರಲ್ಲಿ ಆತಂಕ

ಕೆರೆ ಬಿರುಕು ಗ್ರಾಮಸ್ಥರಲ್ಲಿ ಆತಂಕ

ಕಳೆದ ಮೂರು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಕೆರೆ ಬಿರುಕು ಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಕೆರೆ ಒಡೆದುಹೋಗುವ ಭೀತಿ ಎದುರಿಸುತ್ತಿದ್ದಾರೆ. ಐದು ವರ್ಷದ ಬಳಿಕ ಕೆರೆ ಭರ್ತಿಯಾಗಿತ್ತು. ಗ್ರಾಮಸ್ಥರು ಇದರಿಂದ ಸಂತಸಗೊಳ್ಳುವ ಬದಲು ಆತಂಕಗೊಳ್ಳುವಂತಾಗಿದೆ. ತಾಲೂಕು ಪಂಚಾಯಿತಿಗೆ ಗ್ರಾಮಸ್ಥರು ಈ ಕುರಿತು ಮಾಹಿತಿ ನೀಡಿದ್ದರೂ, ಯಾವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ.

ಗಣೇಶನಿಗೆ ನಾನ್ ವೆಜ್ ನೈವೇದ್ಯ

ಗಣೇಶನಿಗೆ ನಾನ್ ವೆಜ್ ನೈವೇದ್ಯ

ಬಾಗಲಕೋಟೆಯಲ್ಲಿ ಗಣಪತಿಗೆ ಕಡಬು, ಮೋದಕಗಳ ಬದಲು, ಚಿಕನ್,ಮಟನ್, ಫಿಶ್ ಫ್ರೈ ಹೀಗೆ ಬಗೆ ಬಗೆಯ ಖಾದ್ಯಗಳನ್ನ ತಯಾರಿಸಿ ನೈವೇದ್ಯಕ್ಕೆ ಇಡಲಾಗುತ್ತೆ. ಸುಮಾರು 60 ವರ್ಷಗಳಿಂದ ಸೋಮವಂಶೀಯ ಕ್ಷತ್ರಿಯ ಸಮಾಜ ಪ್ರತಿವರ್ಷ ಗಣೇಶನಿಗೆ ನಾನ್ ವೆಜ್ ನೈವೇದ್ಯ ನೀಡುತ್ತಾರೆ. ಮೊದಲ ದಿನ ಕಡುಬು ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿ ನೈವೇದ್ಯ ನೀಡ್ತಾರೆ. ಮರುದಿನವನ್ನ ಇಲಿವಾರ ಎಂದು ಆಚರಣೆ ಮಾಡಿ ನಾನ್ ವೆಜ್ ನೈವೇದ್ಯ ನೀಡಿ ಗಣೇಶನಿಗೆ ನಮಿಸುತ್ತಾರೆ.

ಕುಣಿಗಲ್ ನಲ್ಲಿ ಹುಚ್ಚುನಾಯಿ ದಾಳಿ

ಕುಣಿಗಲ್ ನಲ್ಲಿ ಹುಚ್ಚುನಾಯಿ ದಾಳಿ

ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ಹುಚ್ಚುನಾಯಿ 20ಕ್ಕೂ ಅಧಿಕ ಮಂದಿ ಮೇಲೆ ದಾಳಿ ನಡೆಸಿದೆ. ಹೌಸಿಂಗ್ ಬೋರ್ಡ್ ಹಾಗೂ ಕೋಟೆ ಪ್ರದೇಶಗಳಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ಹಾಗೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುರಸಭೆ ಅಧಿಕಾರಿಗಳು ಬೀದಿನಾಯಿ ಹಾವಳಿ ತಡೆಯಲು ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

 1 ಕೋಟಿ ಮೌಲ್ಯದ ಹೆರಾಯಿನ್ ವಶ

1 ಕೋಟಿ ಮೌಲ್ಯದ ಹೆರಾಯಿನ್ ವಶ

ದಾವಣಗೆರೆ ನಗರದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿರುವ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ದಾವುದ್ ಮೊಯಿನೋ ಉದ್ದಿನ್ ಬೇಗ್, ಸಮೀರ್ ಇಕ್ಬಾಲ್ ಬೇಗ್ ಹಾಗೂ ಬೆಳಗಾವಿ ಮೂಲದ ಸುನೀಲ್, ಅಶೋಕ್ ಮುಂತಾದವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಿಂದ 25 ಸಾವಿರ ನಗದು ಮತ್ತು 1 ಇಂಡಿಕಾ ಕಾರು ವಶಪಡಿಸಿಕೊಳ್ಳಲಾಗಿದೆ.

ಅಳಿಯನಿಂದ ಮಾವನ ಕೊಲೆ

ಅಳಿಯನಿಂದ ಮಾವನ ಕೊಲೆ

ಬೆಂಗಳೂರಿನ ಜಾಲಹಳ್ಳಿ ಸಮೀಪದ ಬಾಹುಬಲಿನಗರದಲ್ಲಿ ಅಳಿಯನೊಬ್ಬ ಮಾವನನ್ನು ಕೊಲೆಮಾಡಿ ಪರಾರಿಯಾಗಿದ್ದಾನೆ. ಕೊಲೆಯಾದವರನ್ನು ದಾಮೋದರ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವೀನ್ ಬುಧವಾರ ಬೆಳಗ್ಗೆ ದಾಮೋದರ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವೀನ್ ಗಾಗಿ ಹುಡುಕಾಟ ಪ್ರಾರಂಭವಾಗಿದೆ.

 ಹಸುಗಳ ಸಾವಿನಿಂದ ರೈತರು ಕಂಗಾಲು

ಹಸುಗಳ ಸಾವಿನಿಂದ ರೈತರು ಕಂಗಾಲು

ಕೋಲಾರ ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ, ಗಂಟಲು ಬೇನೆ ಕಾಣಿಸಿಕೊಂಡಿದೆ. ಇದುವರೆಗೂ ಸುಮಾರು 20 ಹಸುಗಳು ಸಾವನ್ನಪ್ಪಿವೆ. ಇದರಿಂದ ಹೈನುಗಾರಿಕೆ ನಡೆಸುತ್ತಿದ್ದ ಜನರು ಕಂಗೆಟ್ಟಿದ್ದಾರೆ. ರೋಗ ಜಿಲ್ಲೆಯಲ್ಲಿ ಹರಡುತ್ತಿದ್ದು, ಮಂಗಳವಾರ 1.35 ಲಕ್ಷ ಹಸುಗಳಿಗೆ ಪಶುಸಂಗೋಪನಾ ಇಲಾಖೆಯಿಂದ ಲಸಿಕೆ ಹಾಕಲಾಗಿದೆ. ಹಸುಗಳು ಕಾಯಿಲೆಗೆ ತುತ್ತಾಗಿದ್ದರಿಂದ ಹಾಲಿನ ಉತ್ಪಾದನೆಯೂ ಕುಂಠಿತಗೊಂಡಿದೆ.

ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್

ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್

ಹಾಸನ ಜಿಲ್ಲೆಯ ಆಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ಬೆಳಗ್ಗೆ ಗ್ಯಾಸ್ ಟ್ಯಾಂಕಟ್ ವೊಂದು ಅಪಘಾತಕ್ಕೀಡಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಆಗಮಿಸಿ ಗ್ಯಾಸ್ ಸೋರಿಕೆಯಾಗದಂತೆ ತಡೆದರು. ಬೇರೆ ಟ್ಯಾಂಕರ್ ಗೆ ಅನಿಲ ತುಂಬಿಸುವ ಕಾರ್ಯ ಕೈಗೊಂಡಿದ್ದಾರೆ. ಘಟನೆಯಿಂದಾಗಿ ಬೆಂಗಳೂರು-ಸಕಲೇಶಪುರ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

ಒಂಟಿ ಸಲಗದ ದಾಳಿಗೆ ಒಬ್ಬ ಬಲಿ

ಒಂಟಿ ಸಲಗದ ದಾಳಿಗೆ ಒಬ್ಬ ಬಲಿ

ರಾಮನಗರದ ಜಂಗಮಪಾಳ್ಯದಲ್ಲಿ ಬುಧವಾರ ಬೆಳಗ್ಗೆ ಕಾಡಾನೆದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವೆಂಕಟರಾಮ (50) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬುಧವಾರ ಜಮೀನಿಗೆ ತೆರಳಿದ್ದ ವೆಂಕಟರಾಮನ ಮೇಲೆ ಒಂಟಿ ಸಲಗ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಅವರನ್ನು ರಾಮನಗರ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಚಿಂತಾಮಣಿಯಲ್ಲಿ ಕ್ರಿಕೆಟ್ಟಿಗೆ ಒಬ್ಬ ಬಲಿ

ಚಿಂತಾಮಣಿಯಲ್ಲಿ ಕ್ರಿಕೆಟ್ಟಿಗೆ ಒಬ್ಬ ಬಲಿ

ಕೋಲಾರ ಜಿಲ್ಲೆ ಚಿಂತಾಮಣಿಯ ವೆಂಕಟಗಿರಿ ಬಳಿ ಕ್ರಿಕೆಟ್ ಆಡುತ್ತಿದ್ದಾಗ ನಡೆದ ಜಗಳ ಕೊಲೆಯಲ್ಲಿ ಪರ್ಯವಸಾನವಾಗಿದೆ. ಪ್ರಕಾಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಈತನನ್ನು ಕೊಲೆ ಮಾಡಿದ ಆರೋಪಿ ಮೆಹಬೂಬನನ್ನು ಪೊಲೀಸರು ಬಂಧಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+