ಜನಾರ್ಧನ ಪೂಜಾರಿಗೆ ಕೈಕೊಟ್ಟ ಕೇಂದ್ರದ ನಾಯಕರಾರು?
ಬೆಂಗಳೂರು, ಸೆ 6: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಪಕ್ಷದ ಶಿಸ್ತಿನ ಸಿಪಾಯಿ ಜನಾರ್ಧನ ಪೂಜಾರಿ ಅವರನ್ನು ಉದ್ದೇಶ ಪೂರ್ವಕವಾಗಿಯೇ ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿಯಿಂದ ಕೈಬಿಡಲಾಗಿದೆ ಎನ್ನುವ ಗುಸುಗುಸು ಸುದ್ದಿ ಕಾಂಗ್ರೆಸ್ ಆಪ್ತವಲಯದಲ್ಲಿ ಹೊಸ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕೆಪಿಸಿಸಿ ವಹಿಸಿಕೊಂಡಿತ್ತು. ಅದರಲ್ಲಿ ಪೂಜಾರಿ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಇದರ ಜೊತೆಗೆ ಪೂಜಾರಿ ಕೇಂದ್ರ ರಕ್ಷಣಾ ಸಚಿವ ಎ ಕೆ ಆಂಟನಿ ಅವರ ಪರಮಾಪ್ತರು ಕೂಡಾ. ಆದಾಗ್ಯೂ, ಪೂಜಾರಿಗೆ ಸಮಿತಿಯಿಂದ ಕೊಕ್ ನೀಡಲಾಗಿದೆ.
ಪೂಜಾರಿ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾದ ತಕ್ಷಣ ಕೇಂದ್ರ ಮಟ್ಟದ ನಾಯಕರು ತೀವ್ರ ಅಸಮಾಧನ ವ್ಯಕ್ತ ಪಡಿಸಿದ್ದರು ಎನ್ನಲಾಗುತ್ತಿದೆ. ಸರಕಾರದ ಕೆಲಸ ವೈಖರಿಯನ್ನು ಪೂಜಾರಿ ಪ್ರಶ್ನಿಸಬಹುದು.
ಇದರಿಂದ ಪಕ್ಷ ಮುಜುಗರಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೂಜಾರಿ ಹೆಸರು ಕೈಬಿಡುವುದೇ ಲೇಸು ಎಂದು ನಾಯಕರು ಹೈಕಮಾಂಡ್ ಕಿವಿ ಊದಿದ್ದಾರೆ ಎನ್ನುವ ಸುದ್ದಿ ಕೂಡಾ ಕಾಂಗ್ರೆಸ್ ವಲಯದಲ್ಲಿ ಚಾಲ್ತಿಯಲ್ಲಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಪೂಜಾರಿ ಪ್ರಣಾಳಿಕೆ ಅನುಷ್ಠಾನ ಸಮಿತಿಗೆ ಆಯ್ಕೆಯಾದ ಆದೇಶದ ಪ್ರತಿಯನ್ನು ಅವರಿಗೆ ತಲುಪದಂತೆ ಸಂಚು ರೂಪಿಸಲಾಗಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರನ್ನು ಪ್ರಶ್ನಿಸಲು ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಜನಾರ್ಧನ ಪೂಜಾರಿಗೆ ಸ್ಥಾನ ತಪ್ಪಿಸಿದ ಕೇಂದ್ರ ಮತ್ತು ರಾಜ್ಯ ನಾಯಕರಾರು? ಸ್ಲೈಡಿನಲ್ಲಿ

ಜನಾರ್ಧನ ಪೂಜಾರಿ
ನೇರ ನುಡಿಯ ಪೂಜಾರಿ, ಸಿದ್ದರಾಮಯ್ಯ ಸರಕಾರದ ಆಡಳಿತ ಶೈಲಿಯನ್ನೂ ಈ ಹಿಂದೆ ಕೂಡಾ ತರಾಟೆಗೆ ತೆಗೆದು ಕೊಂಡಿದ್ದರು. ಉಡುಪಿ ಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವ ವಿಚಾರದಲ್ಲಿ ಕೂಡಾ ಸಿದ್ದು ವಿರುದ್ದ ಪೂಜಾರಿ ಕಿಡಿಕಾರಿದ್ದರು. ಅನ್ನಭಾಗ್ಯ ಸೇರಿದಂತೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಹೆಸರನ್ನು ಬದಲಾಯಿಸುವಂತೆ ಸೂಚಿಸಿದ್ದರು.

ಸಿದ್ದರಾಮಯ್ಯ
ಪೂಜಾರಿ ಅವರ ಕೆಲವೊಂದು ಹೇಳಿಕೆಗಳು ಸಿಎಂ ಸಿದ್ದರಾಮಯ್ಯ ಅವರಿಗೂ ಬೇಸರ ತರಿಸಿತ್ತು ಎನ್ನಲಾಗುತ್ತಿದೆ. ಆದರೆ ಪೂಜಾರಿ ಹಿರಿಯವರಾಗಿರುವುದರಿಂದ ಕಾಟಾಚಾರಕ್ಕೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದರು. ಹಾಗಾಗಿ ಪೂಜಾರಿಗೆ ಈ ಸ್ಥಾನ ತಪ್ಪಿಸಿದವರಲ್ಲಿ ಸಿಎಂ ಹೆಸರೂ ಕೇಳಿಬರುತ್ತಿದೆ. ಆದರು, ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸಚಿವರೊಬ್ಬರು ಎನ್ನುವುದು ಕಾಂಗ್ರೆಸ್ ವಲಯದ ಮಾತು.

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ, ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ಮತ್ತು ಪೂಜಾರಿ ನಡುವಿನ ಸಂಬಂಧ ಬಹಳ ಹಿಂದೆಯೇ ಹಳಸಿ ಹೋಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಪೂಜಾರಿ ಮಂಗಳೂರು ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ದ ಪರಾಭವಗೊಂಡಿದ್ದರು. ಅದಕ್ಕೆ ನಮ್ಮ ಪಕ್ಷದ ನಾಯಕರೇ ಕಾರಣ ಎಂದು ಪೂಜಾರಿ ಪರೋಕ್ಷವಾಗಿ ಮೊಯ್ಲಿ ವಿರುದ್ದ ಬೊಟ್ಟು ಮಾಡಿದ್ದರು.

ವೀರಪ್ಪ ಮೊಯ್ಲಿ
ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಮುಸುಕಿನ ಗುದ್ದಾಟ ಹೊಸದೇನಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ್ ಸೇಫ್ ಕ್ಷೇತ್ರದಲ್ಲಿ ಮಂಗಳೂರು ಕೂಡಾ ಒಂದು. ಅಲ್ಲಿಂದ ಮತ್ತೆ ಪೂಜಾರಿ ಕಣಕ್ಕಿಳಿಯಲು ಬಯಸಿದ್ದಾರೆ. ಅದರ ಜೊತೆಗೆ ಆ ಕ್ಷೇತ್ರದ ಮೇಲೆ ವೀರಪ್ಪ ಮೊಯ್ಲಿಗೂ ಕಣ್ಣಿದೆ. ಹೀಗಾಗಿ ವೀರಪ್ಪ ಮೊಯ್ಲಿ ಅವರೇ ಪೂಜಾರಿಗೆ ಸ್ಥಾನ ತಪ್ಪಲು ನೇರ ಕಾರಣ ಎನ್ನಲಾಗುತ್ತಿದೆ.

ಡಾ. ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷರು ಸದ್ಯ ಮಲೇಷ್ಯಾ ಪ್ರವಾಸದಲ್ಲಿದ್ದಾರೆ. ಅವರೇ ಪೂಜಾರಿ ಮತ್ತು ಎಚ್ ಕೆ ಪಾಟೀಲ್ ಹೆಸರನ್ನು ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿಗೆ ಸೂಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಸಮಿತಿಯಿಂದ ಪೂಜಾರಿ ಮತ್ತು ಪಾಟೀಲ್ ಹೆಸರು ಪಟ್ಟಿಯಿಂದ ಹೊರ ಬಿದ್ದ ಸಂದರ್ಭದಲ್ಲಿ ಪರಮೇಶ್ವರ್ ಸ್ವದೇಶಕ್ಕೆ ವಾಪಾಸ್ ಬಂದ ಮೇಲೆ ಅವರ ಮುಂದಿನ ಹೆಜ್ಜೆ ಏನು ಎನ್ನುವುದು ಕುತೂಹಲಕ್ಕೆ ಎಡೆಮಾಡಿದೆ.












Click it and Unblock the Notifications