ಸೈಕೋ ಜೈಶಂಕರ್ ಅರೆಸ್ಟ್: ಪೊಲೀಸರಿಗೆ ಬಹುಮಾನ ಪ್ರಕಟ
ಬೆಂಗಳೂರು, ಸೆ. 6: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಒಂದು ವಾರದ ಹಿಂದೆ (ಸೆ. 1) ನಿಗೂಢವಾಗಿ ಪರಾರಿಯಾಗಿದ್ದ ಸರಣಿ ಅತ್ಯಾಚಾರಿ ಹಂತಕ ಸೈಕೋ ಜೈಶಂಕರ ಮತ್ತೆ ಪತ್ತೆಯಾಗಿದ್ದಾನೆ.
ಅಲ್ಲಿ ಕಾಣಿಸಿಕೊಂಡ ಇಲ್ಲಿ ಕಾಣಿಸಿಕೊಂಡ ಎಂಬ ವದಂತಿಗಳ ನಡುವೆ ಪಾತಕಿ ಶಂಕರನ ಬಂಧನವಾಗಿದ್ದು, ಪೊಲೀಸರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಎಲ್ಲಿ, ಹೇಗೆ ಸಿಕ್ಕಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲವಾದರೂ ಉನ್ನತ ಪೊಲೀಸ್ ಮೂಲಗಳ ಪ್ರಕಾರ ಬೆಂಗಳೂರಿನಲ್ಲೇ ಸೈಕೋ ಜೈಶಂಕರ ಪತ್ತೆಯಾಗಿದ್ದಾನೆ. ಹೊಸೂರು ರಸ್ತೆಯಲ್ಲಿ ಕೂಡ್ಲು ಗೇಟ್ ಬಳಿ ಇಂದು ಬೆಳಗ್ಗೆ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಒಟ್ಟು ನಾಲ್ಕು ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ 34 ವರ್ಷದ ಎಂ ಶಂಕರ್ ಅಲಿಯಾಸ್ ಜೈಶಂಕರನನ್ನು ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಇದೀಗತಾನೆ ತಿಳಿಸಿದ್ದಾರೆ.
ಪೊಲೀಸರಿಗೆ ಬಹುಮಾನ ಪ್ರಕಟ ಕಿಲ್ಲರ್ ಜೈಶಂಕರ್ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಆತನ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಗೃಹ ಸಚಿವ ಕೆಜೆ ಜಾರ್ಜ್ ಅವರು ಘೋಷಿಸಿದ್ದರು.
ಅದರಂತೆ ವಿಕೃತಕಾಮಿಯ ಬಂಧನಕ್ಕೆ ನೆರವಾದ ಪೊಲೀಸ್ ಸಿಬ್ಬಂದಿಗೆ ಈ ಬಹುಮಾನದ ಮೊತ್ತವನ್ನು ಹಂಚುವುದಾಗಿ ಸಚಿವ ಜಾರ್ಜ್ ಘೋಷಿಸಿದ್ದಾರೆ.












Click it and Unblock the Notifications