ಸಿದ್ದರಾಮಯ್ಯ ತವರು ಜಿಲ್ಲೆ ಆಡಳಿತ ಜೆಡಿಎಸ್ ಪಾಲು!

ಗುರುವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎನ್.ಎಂ.ರಾಜೇಶ್ವರಿ ಮೇಯರ್ ಆಗಿ ಆಯ್ಕೆಯಾದರೆ, ಬಿಜೆಪಿಯ ಶೈಲೇಂದ್ರ ಉಪ ಮೇಯರ್ ಆಗಿ ಆಯ್ಕೆಯಾಗಿ ಕಾಂಗ್ರೆಸ್ ಗೆ ಪಾಲಿಕೆ ಅಧಿಕಾರ ಕೈ ತಪ್ಪುವಂತೆ ಮಾಡಿದರು.
ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗೆ ಮೈಸೂರು ಪಾಲಿಕೆ ಮೇಯರ್ ಹುದ್ದೆ ಮೀಸಲಾಗಿತ್ತು. ವಾರ್ಡ್ ನಂ 33ರ ಜೆಡಿಎಸ್ ಸದಸ್ಯೆ ರಾಜೇಶ್ವರಿ ಮೇಯರ್ ಹುದ್ದೆ ಆಕಾಂಕ್ಷಿಯಾಗಿದ್ದರು. ಬಿಜೆಪಿ ಬೆಂಬಲದಿಂದ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಉಪ ಮೇಯರ್ ಹುದ್ದೆಗೆ ವಾರ್ಡ್ ನಂ 9ರ ಬಿಜೆಪಿ ಸದಸ್ಯ ಶೈಲೇಂದ್ರ ಚುನಾಯಿತರಾದರು.
ಕಾಂಗ್ರೆಸ್ ಪಕ್ಷದ ಮಂಜಳಾ ಮೇಯರ್ ಸ್ಥಾನಕ್ಕಾಗಿ ಮತ್ತು ಭಾಗ್ಯವತಿ ಉಪ ಮೇಯರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ಒಟ್ಟು 65 ಸದಸ್ಯರ ಮಹಾನಗರ ಪಾಲಿಕೆ ಅಧಿಕಾರ ಪಡೆಯಲು 37 ಸದಸ್ಯರ ಬೆಂಬಲ ಬೇಕಾಗಿತ್ತು. ಪಾಲಿಕೆಯಲ್ಲಿ ಜೆಡಿಎಸ್ 22 ಸದಸ್ಯ ಬಲ ಹೊಂದಿತ್ತು. ಬಿಜೆಪಿ 12 ಸದಸ್ಯರನ್ನು ಹೊಂದಿತ್ತು. ಪಕ್ಷೇತರ ಮತ್ತು ಕೆಜೆಪಿ ಅಭ್ಯರ್ಥಿಗಳ ಬೆಂಬಲ ಪಡೆದ ಜೆಡಿಎಸ್ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಪಾಲಿಕೆ ಬಲಾಬಲ : ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 65 ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್-22, ಬಿಜೆಪಿ-12, ಜೆಡಿಎಸ್-20 ಸದಸ್ಯರಿದ್ದಾರೆ. ಕೆಜೆಪಿ-1, ಬಿಎಸ್‌ಆರ್-1, ಎಸ್‌ಡಿಪಿಎಸ್-2, ಪಕ್ಷೇತರರು 7 ಮಂದಿ ಸದಸ್ಯರಿದ್ದಾರೆ.
ರೆಸಾರ್ಟ್ ರಾಜಕೀಯ : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿ ಸದಸ್ಯರ ಜೊತೆ ಚುನಾವಣೆಗೆ ಎರಡು ದಿನಗಳು ಇರುವಾಗ ರೆಸಾರ್ಟ್ ಗೆ ತೆರಳಿ, ಕಾಂಗ್ರೆಸ್ ಕೈಗೆ ಪಾಲಿಕೆ ಅಧಿಕಾರ ದೊರೆಯದಂತೆ ಮಾಡುವಲ್ಲಿ ಯಶಸ್ವಿಯಾದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ತಮ್ಮ ತವರು ಜಿಲ್ಲೆಯ ಆಡಳಿತವನ್ನು ಸಿಎಂ ಸಿದ್ದರಾಮಯ್ಯ ಜೆಡಿಎಸ್ ಕೈಗೆ ಒಪ್ಪಿಸಿದ್ದಾರೆ.












Click it and Unblock the Notifications