ಮೊಯ್ಲಿ ಐಡಿಯಾ ಫ್ಲಾಪ್, ರಾತ್ರಿಯೂ ಪೆಟ್ರೋಲ್ ಲಭ್ಯ

ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ನಗರಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುವ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರ ಪ್ರಸ್ತಾವನೆಗೆ ಕಾಂಗ್ರೆಸ್ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಪಪಕ್ಷಗಳು ಈ ಕುರಿತು ವಾಗ್ದಾಳಿ ನಡೆಸಿದ್ದವು.
ವಿರೋಧ ಪಕ್ಷ ಮತ್ತು ಸಚಿವರ ವಿರೋಧದಿಂದಾಗಿ ಪೆಟ್ರೋಲ್ ಬಂಕ್ ಗಳನ್ನು ರಾತ್ರಿ ವೇಳೆ ಮುಚ್ಚುವ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ಮತ್ತು ವಿತ್ತ ಸಚಿವಾಲಯ ತಿರಸ್ಕರಿಸಿದೆ. ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಸ್ತವನೆ ತಿರಸ್ಕಾರವಾದ ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿರುವ ಕೇಂದ್ರ ಪೆಟ್ರೋಲಿಂ ಖಾತೆ ಸಚಿವ ವೀರಪ್ಪ ಮೊಯ್ಲಿ, ದಿನದ 24 ಗಂಟೆಯೂ ಪೆಟ್ರೋಲ್ ಒದಗಿಸಲು ನಾವು ಸಿದ್ದರಿದ್ದೇವೆ. ಸರ್ಕಾರ ಯಾವುದೇ ತೈಲ ಬಿಕ್ಕಟ್ಟು ಎದುರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ, ತೈಲ ಬಳಕೆಯನ್ನು ಕಡಮೆ ಮಾಡಲು ರಾತ್ರಿ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುವುದೂ ಸೇರಿದಂತೆ ಕೆಲವೊಂದು ಸಲಹೆಗಳನ್ನು ವೀರಪ್ಪ ಮೊಯ್ಲಿ ಪ್ರಧಾನಿ ಮನಮೋಹನಸಿಂಗ್ ಅವರಿಗೆ ನೀಡಿದ್ದರು.
ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಈ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ ಮತ್ತು ವಿತ್ತ ಸಚಿವ ಪಿ.ಚಿದಂಬರಂ ಪ್ರಸ್ತಾವನೆಯನ್ನು ತಿರಸ್ಕರಿಸಿ ವಿವಾದ ಬಗೆಹರಿಸಿದ್ದಾರೆ. (ನಗರಗಳಲ್ಲಿ ರಾತ್ರಿ ಪೆಟ್ರೋಲ್, ಡೀಸೆಲ್ ಸಿಗಲ್ಲ?)
ದರ ಏರಿಕೆ ಪ್ರಸ್ತಾವನೆ : ಪೆಟ್ರೋಲ್ ಬಂಕ್ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದಿರುವ ವೀರಪ್ಪ ಮೊಯ್ಲಿ, ಡೀಸೆಲ್ ಬೆಲೆಯನ್ನು 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಇದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ.












Click it and Unblock the Notifications