ಮರ್ಡರ್ ಕೇಸ್, ಮೋದಿ ರಾಜೀನಾಮೆಗೆ ಆಗ್ರಹ
ನವದೆಹಲಿ, ಸೆ.3: ಕೊಲೆ, ನಕಲಿ ಎನ್ ಕೌಂಟರ್ ಪ್ರಕರಣವೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೇಳಿ ಬಂದಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ಮೋದಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಬಾರದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ತುಳಸಿ ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಿಂಗ್ ಆಪರೇಷನ್ ನಡೆಸಿದ ವಿಡಿಯೋ ಚಿತ್ರಣವನ್ನು ಸಿಡಿ ರೂಪದಲ್ಲಿ ಕಾಂಗ್ರೆಸ್ ಪ್ರಕಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಜಾರಿಯಲ್ಲಿದ್ದು, ಪ್ರಕರಣ ಮುಗಿಯುವವರೆಗೂ ಮೋದಿ ಅವರು ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಟೈಮ್ಸ್ ನೌ ವರದಿಯಂತೆ ಕಾಂಗ್ರೆಸ್ ನಾಯಕರು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಟಿಂಗ್ ಆಪರೇಷನ್ ಸಿಡಿಯ ಸತ್ಯಾಸತ್ಯತೆಯನ್ನು ಕೂಡಾ ಪರೀಕ್ಷಿಸುವಂತೆ ಕೋರಿದ್ದಾರೆ.ಸ್ಟಿಂಗ್ ಸಿಡಿ ಬಗ್ಗೆ ಇನ್ನಷ್ಟು ವಿವರಗಳು ತಿಳಿಯಬೇಕಿದೆ.

ತುಳಸಿ ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣ: ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತ, ಮಾಜಿ ಸಚಿವ ಅಮಿತ್ ಶಾ ಸೇರಿದಂತೆ 20 ಮಂದಿಯನ್ನು ಸಿಬಿಐ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಈಗ ಅಮಿತ್ ಶಾಗೆ ಜಾಮೀನು ಸಿಕ್ಕಿದ್ದು ಮುಂಬರುವ ಚುನಾವಣೆಗೆ ಸಿದ್ದತೆ ನಡೆಸಿದ್ದಾರೆ.
ಅಮಿತ್ ಶಾ ಜತೆಯಲ್ಲಿ ಆರೋಪ ಪಟ್ಟಿಯಲ್ಲಿ ರಾಜ್ಯದ ಮಾಜಿ ಪೊಲೀಸ್ ಮುಖ್ಯಸ್ಥ ಪಿ.ಸಿ. ಪಾಂಡೆ, ಐಪಿಎಸ್ ಅಧಿಕಾರಿಗಳಾದ ಒ.ಪಿ. ಮಾಥುರ್, ಡಿ.ಜಿ. ವಂಜಾರಾ, ಗೀತಾ ಜೋಹ್ರಿ ಮತ್ತು ಡಿವೈಎಸ್ ಪಿ ಆರ್.ಕೆ. ಪಟೇಲ್ ಮುಂತಾದವರ ಹೆಸರುಗಳಿವೆ.
ಕಳೆದ ಗುಜರಾತ್ ವಿಧಾನಸಭಾ ಚುನಾವಣೆಗೂ ಮೊದಲು ನಕಲಿ ಎನ್ ಕೌಂಟರ್ ಪ್ರಕರಣ ತೀವ್ರತೆ ಪಡೆದುಕೊಂಡಿತ್ತು. ಇದರಿಂದ ಮೋದಿಗೆ ಹಿನ್ನಡೆಯಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು, ಆದರೆ, ಮೋದಿ ಜಯಭೇರಿ ಬಾರಿಸಿದ್ದರು.
ತುಳಸಿ ಪ್ರಜಾಪತಿ: ದಾವೂದ್ ಇಬ್ರಾಹಿಂ ಜತೆ ನಿಕಟ ಸಂಬಂಧ ಹೊಂದಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಗೆ ತುಳಸಿ ಪ್ರಜಾಪತಿ ಸಾಕ್ಷಿಯಾಗಿದ್ದ. ಅಲ್ಲದೆ ಸೊಬ್ರಾಬುದ್ದೀನ್ ನ ಸಹಚರನಾಗಿದ್ದ.
2005ರ ನವೆಂಬರ್ 23ರಂದು ಹೈದರಾಬಾದ್ ನಿಂದ ಸಾಂಗ್ಲಿಗೆ ಸರಕಾರಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀಯನ್ನು ಗುಜರಾತ್ ಪೊಲೀಸರು ತಡೆದು, ವಶಕ್ಕೆ ಪಡೆದಿದ್ದರು. ಇದಾದ ಮೂರು ದಿನಗಳ ನಂತರ ಸೊಹ್ರಾಬುದ್ದೀನ್ ನನ್ನು ಹೆದ್ದಾರಿಯೊಂದರಲ್ಲಿ ಎನ್ ಕೌಂಟರ್ ಮಾಡಲಾಗಿತ್ತು. ಎರಡು ದಿನಗಳ ನಂತರ ಕೌಸರ್ ಬೀಯನ್ನು ಕತ್ತು ಹಿಸುಕಿ ಸಾಯಿಸಲಾಗಿತ್ತು.
ಸೊಹ್ರಾಬುದ್ದೀನ್ ನ ಭೂಗತ ಸಹಚರ ಪ್ರಜಾಪತಿಯನ್ನು ಬನಸ್ಕಾಂತ ಜಿಲ್ಲೆಯ ಛಪ್ರಿ ಎಂಬಲ್ಲಿ 2006ರ ಡಿಸೆಂಬರ್ 28ರಂದು ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದರು ಎಂದು ಸಿಬಿಐ ವಾದ ಮಂಡಿಸಿತ್ತು.
ನರೇಂದ್ರ ಮೋದಿ ಸರಕಾರದಲ್ಲಿ ಗೃಹಸಚಿವರಾಗಿದ್ದ ಅಮಿತ್ ಶಾ ವಿರುದ್ಧ ಸಿಬಿಐ ಸೊಬ್ರಾಬುದ್ದೀನ್ ಮತ್ತು ಪ್ರಜಾಪತಿ ಕೊಲೆ, ಸಂಚು ಮತ್ತು ಸಾಕ್ಷ್ಯ ನಾಶದ ಆರೋಪಗಳನ್ನು ಹೊರಿಸಿದೆ. ಆಗ ಸಚಿವರಾಗಿದ್ದ ಶಾ ನಿರ್ದೇಶನದಂತೆ ಪೊಲೀಸರು ಎನ್ ಕೌಂಟರ್ ಮಾಡಿದ್ದರು ಎಂಬ ವಾದವಿದೆ.












Click it and Unblock the Notifications