ಯಡಿಯೂರಪ್ಪ ಜಪ: ಈಗ ಸುರೇಶ್ ಗೌಡ ಸರದಿ
ತುಮಕೂರು, ಆ.28: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅತ್ತ ಬಿಜೆಪಿಯಿಂದ ಹೊರಬೀಳುತ್ತಿದ್ದಂತೆ ಅವರನ್ನು ಹೀನಾಯವಾಗಿ ಹಿಯಾಳಿಸತೊಡಗಿದ್ದ ಅವರ ಪಟ್ಟಶಿಷ್ಯ, ಶಾಸಕ ಬಿ ಸುರೇಶ್‌ಗೌಡ ಅವರು ಮತ್ತೆ ಯಡಿಯೂರಪ್ಪ ಜಪ ಆರಂಭಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮತದಾರ ಗುದ್ದುಕೊಟ್ಟ ಬಳಿಕ ವಾಸ್ತವಕ್ಕೆ ಮರಳಿರುವ ಬಿಜೆಪಿ ನಾಯಕರು 'ಮೂಲ ಬಿಜೆಪಿ' ಬಗ್ಗೆ ಚಿಂತಿಸಲಾರಂಭಿಸಿದ್ದಾರೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ 'ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವುದು ಅನಿವಾರ್ಯ ಎಂದು ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದ ಸುರೇಶ್ ಗೌಡ ಷರಾ ಬರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಅನಿವಾರ್ಯವಾಗಿ ಉಂಟಾದ ಬೆಳವಣಿಗೆಗಳಿಂದ ಪಕ್ಷದಿಂದ ಹೊರಹೋಗಿದ್ದಾರೆ. ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಲ್ಲಾ ಅಶೋಕ್ ದೇ ಪಾರುಪತ್ಯ!:
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಪಕ್ಷ ಅಧಿಕೃತವಾಗಿ ಜೆಡಿಎಸ್ ಜತೆ ಹೊಂದಾಣಿಕೆಯನ್ನಾಗಲಿ, ಬೆಂಬಲವನ್ನಾಗಲಿ ನೀಡಿರಲಿಲ್ಲ. ಆದರೆ ಮಾಜಿ ಗೃಹ ಸಚಿವ ಆರ್ ಅಶೋಕ್ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿರುವುದು ಅವರ ವೈಯಕ್ತಿಕ ನೆಲೆಯಲ್ಲಿ ಎಂದು ಸುರೇಶ್ ಗೌಡರು ಮೈತ್ರಿ ಫಲಿತಾಂಶ ಹೊರಬಿದ್ದ ನಾಲ್ಕು ದಿನದಲ್ಲಿ ಹೇಳಿದ್ದಾರೆ.

ಪಕ್ಷದ ವೇದಿಕೆಯಲ್ಲಿ ಅಶೋಕ್ ತರಾಟೆಗೆ
ಲೋಕಸಭೆಯ ಉಪಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಬಗ್ಗೆ ಶಾಸಕಾಂಗ ಸಭೆಯಲ್ಲಾಗಲಿ, ಪಕ್ಷದ ಪದಾಧಿಕಾರಿಗಳ ಸಭೆಯಲ್ಲಾಗಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ ಮಾಜಿ ಸಚಿವ ಅಶೋಕ್ ಅವರು ಪಕ್ಷವೇ ನಿರ್ಧಾರ ತೆಗೆದುಕೊಂಡಿದೆ ಎಂದು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹೋಗಿದ್ದಾರೆ. ಅವರ ನಿಲುವನ್ನು ಖಂಡಿಸಿ, ಖಂಡಿತ ಪಕ್ಷದ ಸಭೆಯಲ್ಲಿ ಪ್ರಶ್ನಿಸುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ತಮ್ಮ ವಿರೋಧವಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ಜನತಾ ಪಕ್ಷ ಏಕಾಂಗಿ ಹೋರಾಟ
ಈ ಮಧ್ಯೆ, ಬಿಜೆಪಿಗೆ ವಾಪಸಾಗುವ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ, (ಬಿಜೆಪಿ-ಜೆಡಿಎಸ್ ಜತೆಗಿನ) ಮೈತ್ರಿ ರಾಜಕೀಯಕ್ಕೆ ಪೆಟ್ಟುಬಿದ್ದಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಕರ್ನಾಟಕ ಜನತಾ ಪಕ್ಷವನ್ನು ಏಕಾಂಗಿಯಾಗಿ ಸಂಘಟಿಸುವತ್ತ ಗಮನಹರಿಸಿದ್ದಾರೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಯಡಿಯೂರಪ್ಪ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ವಿಶೇಷ ಒತ್ತು ನೀಡಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಜೆಪಿ ಕೋರ್ ಕಮಿಟಿ ಸಭೆಯೂ ನಡೆಯುತ್ತಿದೆ
ಈ ಹಿನ್ನೆಲೆಯಲ್ಲಿ ಬುಧವಾರ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕೆಜೆಪಿ ಕೋರ್ ಕಮಿಟಿ ಸಭೆ ಕರೆದಿರುವ ಯಡಿಯೂರಪ್ಪ, ಪಕ್ಷದ ಮುಂದಿನ ಸಂಘಟನೆ ಹಾಗೂ ಲೋಕಸಭಾ ಚುನಾವಣೆಯ ಸಿದ್ಧತೆ ಕುರಿತು ಮುಖಂಡರ ಜತೆ ಸುದೀರ್ಘ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ.
ಶಿವಮೊಗ್ಗ, ಹಾವೇರಿ, ಧಾರವಾಡ, ತುಮಕೂರು, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಬೀದರ್, ಬೆಂಗಳೂರು ದಕ್ಷಿಣ, ಚಾಮರಾಜನಗರ ಕ್ಷೇತ್ರಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವ ಯಡಿಯೂರಪ್ಪ ಈಗಿನಿಂದಲೇ ಈ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಉದ್ದೇಶ ಹೊಂದಿದ್ದಾರೆ.












Click it and Unblock the Notifications