ಮುಂಬೈ ರೇಪಿಸ್ಟುಗಳು ಸಿಕ್ಕಿಬಿದ್ದಿದ್ದಾದರೂ ಹೇಗೆ?
ಮುಂಬೈ, ಆಗಸ್ಟ್ 27: ಮುಂಬೈ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿರುವ ಪಾತಕಿಗಳು 77 ಗಂಟೆಗಳಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿರುವ ಸ್ವಾರಸ್ಯಕರವಾಗಿದೆ.
ಶಕ್ತಿ ಮಿಲ್ಸ್ ಎಂಬ ಪಾಳುಬಿದ್ದ ಬಟ್ಟೆ ಗಿರಣಿಯ ಅಡ್ಡೆಯಲ್ಲಿ ಕಳೆದ ಗುರುವಾರ ರಾತ್ರಿ ಒಟ್ಟು 5 ಮಂದಿ ಛಾಯಾಗ್ರಾಹಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಶಕ್ತಿ ಮಿಲ್ಸ್ ಜಾಗದಲ್ಲಿ ಏನೇನೂ ಸುಳಿವು ಇಲ್ಲದೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ 12 ವರ್ಷದ ಬಾಲಕನೊಬ್ಬ ಮತ್ತು 48 ವರ್ಷದ ಶಿಕ್ಷಕರೊಬ್ಬರು ನೆರವಾಗಿದ್ದಾರೆ. ಅದಕ್ಕೂ ಮುನ್ನ ದಿಟ್ಟತನ ತೋರಿದ ಬಾಧಿತೆ ಸಹ ಆರೋಪಿಗಳ ಚಹರೆಯನ್ನು ಬಿಡಿಸಿದ್ದರು.
ಬಾಲಕ ಮತ್ತು ಕಲಾ ಶಿಕ್ಷಕರೊಬ್ಬರು ಪೊಲೀಸರ ಕೈಹಿಡಿದಿದ್ದರು:
ಮೊದಲ ಆರೋಪಿ ಅಬ್ದುಲ್ ಸತ್ತಾರ್ ಚಾಂದನನ್ನು ದೂರು ದಾಖಲಾದ 24 ಗಂಟೆಯೊಳಗಾಗಿ ಹೆಡೆಮುರಿಗೆ ಕಟ್ಟಲು ಸಾಧ್ಯವಾಗಿದ್ದು ಬಾಲಕ ನೀಡಿದ ಮಹತ್ವದ ಸುಳಿನಿಂದ. ಚಾಂದನ ಖಾಯಂ ಆಡ್ಡೆಯಾಗಿದ್ದ ಮಹಾಲಕ್ಷ್ಮಿ ಬಳಿಯ ಧೋಬಿ ಘಾಟ್ ಮತ್ತು ಶಕ್ತಿ ಮಿಲ್ಸ್ ಬಳಿಗೆ ಪೊಲೀಸರನ್ನು ಈ ಬಾಲಕ ಕೈಹಿಡಿದು ನಡೆಸಿದ್ದ.

ಆರೋಪಿಗಳು ಕಳ್ಳಕಾಕರು ಅಂದುಕೊಂಡಿದ್ದೆ
ಅಪರಾಧ ನಡೆದ ಸ್ವಲ್ಪ ಹೊತ್ತಿನಲ್ಲಿ ಇದೇ ಬಾಲಕನ ಜತೆ ಆರೋಪಿ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಾಗಾಗಿ ಬಾಲಕನನ್ನು ಮಾತನಾಡಿಸಿದಾಗ ಆತ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದ. ಶಾಲೆ ಬಿಟ್ಟಿರುವ ಈ ಬಾಲಕ ತನ್ನ ಹೊಟ್ಟೆಪಾಡಿಗಾಗಿ ಒಂದಷ್ಟು ಪುಡಿಗಾಸಿಗಾಗಿ ಸದರಿ ಪಾತಕಿಗಳಿಗೆ ಆಗಾಗ ಅವರು ಹೇಳಿದ ಕೆಲಸಗಳನ್ನು ಮಾಡಿಕೊಡುತ್ತಿದ್ದ.
ಅನೇಕ ವರ್ಷಗಳ ಹಿಂದೆಯೇ ಅಪ್ಪನನ್ನು ಕಳೆದುಕೊಂಡಿರುವ ಬಾಲಕ, ಅಮ್ಮ ಮತ್ತು ಸೋದರಿಯ ಜತೆ ವಾಸಿಸುತ್ತಿದ್ದಾನೆ. 'ಅವರು (ಆರೋಪಿಗಳು) ಕಳ್ಳಕಾಕರು ಇರಬಹುದು ಅಂದುಕೊಂಡಿದ್ದೆ. ಆದರೆ ಇಂತಹ ಘೋರ ಅಪರಾಧಗಳನ್ನು ಮಾಡುತ್ತಾರೆ ಅಂತ ಅಂದ್ಕೊಂಡಿರಲಿಲ್ಲ' ಎಂದು ಬಾಲಕ ಪೊಲೀಸರಿಗೆ ಹೇಳಿದ್ದಾನೆ.

ಅತ್ಯಾಚಾರ ನಡೆದ ಶಕ್ತಿ ಮಿಲ್ಸ್ ಜಾಗ
ಇಂತಿಪ್ಪ ಬಾಲಕನನ್ನು ಪೊಲೀಸರು ಹುಡುಕಿಕೊಂಡು ಬಂದಿದ್ದಾರೆ. 'ಹೌದು, ಚಾಂದ್ ತನ್ನನ್ನು ಈಗತಾನೇ ಸಂಧಿಸಿದ್ದ. ತನಗಾಗಿ ಹೊಸ ಬಟ್ಟೆ ತಗೊಂಬಾ ಅಂದಿದ್ದಾನೆ. ಪೊಲೀಸರು ತನ್ನನ್ನು ಹುಡುಕುತ್ತಿರುವುದಾಗಿಯೂ ಹೇಳಿದ್ದಾನೆ' ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರಿಗೆ ಅಷ್ಟು ಸಾಕಿತ್ತು. ಬಾಲಕ, ಚಾಂದನ ಮನೆಯಿಂದ ಬಟ್ಟೆ ತೆಗೆದುಕೊಂಡು ಹೊರಟ... ಎರಡು ತಂಡಗಳಲ್ಲಿ ಪೊಲೀಸರು ಅವನನ್ನು ಹಿಂಬಾಲಿಸಿದರು. ಕೊನೆಗೆ ಸಾತ್ ರಾಸ್ತಾದ ಜೈಭವಾನಿ ನಗರದಲ್ಲಿ ಚಾಂದನ ಜತೆ ಪೊಲೀಸರ ಮುಲಾಖತ್ ಆಯ್ತು. ಮುಂಬೈ ಕ್ರೈಂ ಬ್ರಾಂಚಿನ ಮುಖ್ಯಸ್ಥ ಹಿಮಾಂಷು ರಾಯ್ ಅವರು ಪೊಲೀಸ್ ಇನ್ಫಾರ್ಮರ್ ಬಾಲಕನ್ನು ಕೊಂಡಾಡಿದ್ದಾರೆ.

ಮತ್ತೊಬ್ಬ ಹೀರೂ ಯಾರು?
ಅವರು ಹಿರಿಯ ಕಲಾ ಶಿಕ್ಷಕರು. ಹೆಸರು ನಿತಿನ್ ಮಹಾದೇ ಯಾದವ್ ಅಂತ. ಬಾಧಿತ ಯುವತಿ ಮತ್ತು ಆಕೆಯ ಸಹೋದ್ಯೋಗಿ ನೀಡಿದ ಕಚ್ಚಾ ಮಾಹಿತಿಯನ್ನಾಧರಿಸಿ ಸ್ಥಳೀಯ ಕಲಾ ಶಿಕ್ಷಕರಾದ ನಿತಿನ್ ಅವರು ಆರೋಪಿ ರೇಖಾಚಿತ್ರವನ್ನು ಬಿಡಿಸಿದರು. ಅದು ಶೇ. 90ರಷ್ಟು ಪಕ್ಕಾ ಆಗಿತ್ತು. ಅದನ್ನು ಸ್ಥಳೀಯರಿಗೆ ತೋರಿಸುತ್ತಿದ್ದಂತೆ 'ಓ ಅವನಾ? ಚಾಂದ್!' ಎಂದು ಉದ್ಘರಿಸಿದ್ದರು. ಶಿಕ್ಷಕ ನಿತಿನ್ ಅವರು ಪ್ರಕರಣವನ್ನು ಬೇಧಿಸಲು ಹೀಗೆ ನೆರವಾಗಿದ್ದರು.
ಮುಂದೆ ಶಿಕ್ಷಕ ನಿತಿನ್ ಅವರನ್ನು ಪೊಲೀಸರು ಅಷ್ಟಕ್ಕೇ ಬಿಡಲಿಲ್ಲ. ಹೇಗೂ ಆರೋಪಿ ಚಾಂದನನ್ನು ಬಂಧಿಸಿಯಾಗಿದೆ. ಅವನಿಂದ ಮಾಹಿತಿ ಪಡೆದು ಇತರೆ ಆರೋಪಿಗಳ ಚಿತ್ರವನ್ನೂ ಬಿಡಿಸಿ ಎಂದು ದುಂಬಾಳು ಬಿದ್ದರು. ಸರಿ ಶಿಕ್ಷಕ ನಿತಿನ್, ಸಿರಾಜ್ ರೇಖಾಚಿತ್ರ ಬಿಡಿಸಿಟ್ಟರು. ಅಂದಹಾಗೆ ಶಿಕ್ಷಕ ನಿತಿನ್ ಅವರು ಕಳೆದ 20 ವರ್ಷಗಳಿಂದ Chembur Education Society Primary schoolನಲ್ಲಿ ಶಿಕ್ಷಕರಾಗಿದ್ದಾರೆ. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಅವರು ಪೊಲೀಸರಿಗಾಗಿ ಆರೋಪಿಗಳ ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ.

ಇನ್ನೊಂದು ಕುತೂಹಲಕಾರಿ ಸಂಗತಿ
ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರಲ್ಲಾ, ಸಾಮಾನ್ಯಾವಾಗಿ ಪೊಲೀಸರು ಅಂತಹ ಅಡ್ನಾಡಿಗಳ ಬೆನ್ನುಹತ್ತಿ ಅವರನ್ನು ತಮ್ಮ ಇನ್ಫಾರ್ಮೆಂಟ್ ಆಗಿ ಬಳಸಿಕೊಳ್ಳುತ್ತಾರೆ. ಈ ಪ್ರಕರಣದಲ್ಲೂ ಹಾಗೇ ಆಗಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಪ್ರಮುಖ ಆರೋಪಿ, ಮಧ್ಯ ಮುಂಬೈನ ಅಗ್ರಿಪಾಡಾ ನಿವಾಸಿ ಖಾಸಿಂ ಬೆಂಗಾಲಿ ಅಲಿಯಾಸ್ ಮೊಹಮದ್ ಖಾಸಿಂ ಹಫೀಜಾ ಷೇಕ್ ನನ್ನು ಭೇಟಿಯಾಗಿ ಹೀಗೀಗೆ ಅತ್ಯಾಚಾರವಾಗಿಬಿಟ್ಟಿದೆ. ಆರೋಪಿಗಳ ಬಗ್ಗೆ ನಿನಗೇನಾದರೂ ಗೊತ್ತಾ? ಎಂದು ನೇರವಾಗಿ (ಅವನೇ ಆರೋಪಿ ಎಂದು ತಿಳಿಯದೆ!) ಕೇಳಿದ್ದಾರೆ. ಇದರಿಂದ ಖಾಸಿಂ ಬೆಂಗಾಲಿ ವಿಚಲಿತನಾದರೂ ಅದನ್ನು ತೋಡಗೊಡದೆ, ಪೊಲೀಸರನ್ನು ದಾರಿತಪ್ಪಿಸಲು ಒಂದಷ್ಟು ಬೇರೆಯವರ ಹೆಸರುಗಳನ್ನೆಲ್ಲಾ ಹೇಳಿದ್ದಾನೆ. ಪೊಲೀಸರಿಗೆ ಅದೂ ಮಹತ್ವದ ಸುಳಿವಾಗಿ ಪರಿಣಮಿಸಿದೆ.












Click it and Unblock the Notifications