VHP ಯಾತ್ರೆಗೆ ಕ್ಷಣಗಣನೆ:ಸಿಎಂ ಎಲ್ಲಾ ಕೆಲಸ ಬಂದ್
ಲಕ್ನೋ, ಆ 24: ವಿಶ್ವ ಹಿಂದೂ ಪರಿಷತ್ ನಡೆಸಲು ಉದ್ದೇಶಿಸಿರುವ 'ಚೌರಾಸಿ ಕೋಸ್ ಪರಿಕ್ರಮಾ ಯಾತ್ರೆ'ಗೆ ಕ್ಷಣಗಣನೆ ಆರಂಭವಾಗಿದೆ. ಯಾತ್ರೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಉತ್ತರಪ್ರದೇಶ ಸರಕಾರ ಹೇಳಿದರೆ, ಶತಾಯುಗತಾಯು ಯಾತ್ರೆ ನಡೆಸಿಯೇ ತೀರುವುದಾಗಿ ವಿಎಚ್ಪಿ ಹಠ ಹಿಡಿದಿದೆ.
ಭಾನುವಾರದಿಂದ (ಆ 25) ಆರಂಭವಾಗಲಿರುವ ವಿಎಚ್ಪಿ ಪ್ರಾಯೋಜಿತ ಯಾತ್ರೆಗೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯಾದ್ಯಂತ ಭಾರೀ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಮಧ್ಯೆ, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭಾನುವಾರದ (ಆ 25) ತನ್ನ ಎಲ್ಲಾ ಸರಕಾರಿ ಮತ್ತು ಖಾಸಾಗಿ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ. ಲಕ್ನೋದಲ್ಲಿ ಕೂತು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದ್ದಾರೆ.
ಶುಕ್ರವಾರ (ಆ 23) ಸೇನೆ ಅಯೋಧ್ಯೆಯಲ್ಲಿ ಪಥಸಂಚಲನ ನಡೆಸಿ ಶಾಂತಿ ಕಾಪಾಡುವ ಭರವಸೆಯನ್ನು ಜನತೆಗೆ ನೀಡಿದೆ. ಯಾವುದೇ ಕಾರಣಕ್ಕೂ ಯಾತ್ರೆಯನ್ನು ಕೈಬಿಡುವುದಿಲ್ಲ ಎಂದು ವಿಎಚ್ಪಿ ನಾಯಕರು ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಏನಿದು ಯಾತ್ರೆ? ಸ್ಲೈಡಿನಲ್ಲಿ..

ಚೌಕಾಸಿ ಕೋಸ್ ಯಾತ್ರೆ
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಒತ್ತಡ ತರಲು ವಿಎಚ್ಪಿ ಈ ಯಾತ್ರೆಗೆ ಮುಂದಾಗಿದೆ. ಆಗಸ್ಟ್ 25ರಿಂದ ಸೆಪ್ಟಂಬರ್ 13ರ ವರೆಗೆ ಉತ್ತರ ಪ್ರದೇಶದ ಆರು ಜಿಲ್ಲೆಗಳ ಮೂಲಕ ಈ ಯಾತ್ರೆ ಸಾಗಲಿದೆ.

ಯಾತ್ರೆ ಸಾಗುವ ಜಿಲ್ಲೆಗಳು
ಅಯೋಧ್ಯೆಯಲ್ಲಿ ಆರಂಭವಾಗುವ ಈ ಯಾತ್ರೆ ಫೈಜಾಬಾದ್, ಬಸ್ತಿ, ಬಾರಬಂಕಿ, ಗೊಂಡಾ, ಬಹ್ರಿಚ್ ಮತ್ತು ಅಂಬೇಡ್ಕರ್ ನಗರ ಜಿಲ್ಲೆಯ ಮೂಲಕ ಸಾಗಲಿದೆ. ಹಿಂದೂ ಸಂಘಟನೆಯ ಪ್ರಮುಖ ನಾಯಕರು ಅಯೋಧ್ಯೆಯಲ್ಲಿ ಈಗಾಗಲೇ ಬೀಡು ಬಿಟ್ಟಿದ್ದಾರೆ.

ವಿಎಚ್ಪಿ ಮುಖಂಡರಿಗೆ ಅರೆಸ್ಟ್ ವಾರಂಟ್
ವಿಎಚ್ಪಿ ಮುಖಂಡರಾದ ಅಶೋಕ್ ಸಿಂಘಾಲ್, ಪ್ರವೀಣ್ ಭಾಯ್ ತೊಗಡಿಯಾ, ರಾಮ್ ವಿಲಾಸ್ ವೇದಂತಿ ಸೇರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಪ್ಪತ್ತು ವಿಎಚ್ಪಿ ನಾಯಕರಿಗೆ ಉತ್ತರಪ್ರದೇಶ ಸರಕಾರ ಬಂಧನದ ವಾರಂಟ್ ಜಾರಿ ಮಾಡಿದೆ.

ಅಶೋಕ್ ಸಿಂಘಾಲ್
ಸರಕಾರದ ಯಾವುದೇ ಬೆದರಿಕೆಗೆ ನಾವು ಸೊಪ್ಪು ಹಾಕುವುದಿಲ್ಲ. ಯಾತ್ರೆ ನಡೆಸಿಯೇ ತೀರುತ್ತೇವೆ. ರಾಮಮಂದಿರಕ್ಕಾಗಿ ಯಾತ್ರೆ ನಡೆಸುವುದು ಹಿಂದೂಗಳ ಧಾರ್ಮಿಕ ಹಕ್ಕು ಎಂದು ಸಿಂಘಾಲ್ ಯಾತ್ರೆಯ ಉದ್ದೇಶವನ್ನು ಸ್ಪಷ್ಟ ಪಡಿಸಿದ್ದಾರೆ.

ಉತ್ತರಪ್ರದೇಶ ಸರಕಾರ
ಯಾತ್ರೆಯನ್ನು ತಡೆಯಲು ಅಖಿಲೇಶ್ ಸರಕಾರ ಸಾಧ್ಯವಾದ ಎಲ್ಲಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಎರಡು ಎಸ್ಪಿ, 16 ಸಹಾಯಕ ಎಸ್ಪಿ, 32 ಡೆಪ್ಯುಟಿ ಎಸ್ಪಿ, 80 ಇನ್ಸ್ ಪೆಕ್ಟರ್, 240 ಸಬ್ ಇನ್ಸ್ ಪೆಕ್ಟರ್ ಸೇರಿ ಪೋಲಿಸ್ ಸರ್ಪಗಾವಲನ್ನೇ ಹಾಕಿದೆ.












Click it and Unblock the Notifications