ಶನಿವಾರ ಮತ ಎಣಿಕೆ, ಫಲಿತಾಂಶದತ್ತ ಎಲ್ಲರ ಚಿತ್ತ
ಬೆಂಗಳೂರು, ಆ.23 : ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರತಿಷ್ಠೆ ಅಡಗಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಯ ಲೋಕಸಭೆ ಉಪ ಚುನಾವಣೆಯ ಮತ ಎಣಿಕೆಗೆ ಶನಿವಾರ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ.
ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮಂಡ್ಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಂಡ್ಯ ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಮತ ಎಣಿಕೆ ನಡೆಯಲಿರುವ ಸ್ಥಳದ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದ್ದು, ಶುಕ್ರವಾರ ಸಂಜೆಯಿಂದ ಶನಿವಾರ ರಾತ್ರಿಯ ತನಕ ಜಿಲ್ಲೆಯಲ್ಲಿ ಮದ್ಯ ಮರಾಟವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ ವಿಜಯೋತ್ಸವಕ್ಕೆ ನಿಷೇಧ ಹೇರಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮತ್ತು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದ್ದು, ಎಷ್ಟು ಮತಗಳ ಅಂತರದಿಂದ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ಶೇ.50.93 ಮತದಾನ ನಡೆದಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೂ 14 ಕೌಂಟರ್ ತೆರಲಾಗಿದ್ದು, ಎಲ್ಲಾ ಕಡೆ ಏಕಕಾಲಕ್ಕೆ ಮತ ಎಣಿಕೆ ಪ್ರಾರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.
ಮಂಡ್ಯ ಕ್ಷೇತ್ರದಲ್ಲಿ ಶೇ.58.51 ಮತದಾನವಾಗಿದೆ. ಒಟ್ಟು 18 ಸುತ್ತಿಗಳಲ್ಲಿ ಮಂಡ್ಯ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ ಮತ್ತು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಚುನಾವಣೆ ಮುಗಿದ ಬಳಿಕ ಉಭಯ ಕ್ಷೇತ್ರದಲ್ಲೂ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಆರಂಭವಾಗಿದೆ. ಸರ್ಕಾರದ ಮಟ್ಟದಲ್ಲಿಯೂ, ಸಿಎಂ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಚುನಾವಣೆ ವೈಯಕ್ತಿಕ ಪ್ರತಿಷ್ಠೆಯಾಗಿದೆ. ಗೆಲುವು ಯಾರಿಗೆ ಎಂದು ಕಾದು ನೋಡಬೇಕು.












Click it and Unblock the Notifications