ಮೋದಿ, ಮುಸ್ಲಿಂ, ಮೀಡಿಯಾ : ಬೆಂಗಳೂರಿನಲ್ಲಿ ಸಂವಾದ
ಬೆಂಗಳೂರು, ಆ. 22 : ಗುಜರಾತ್ ರಾಜ್ಯದಲ್ಲಿ ಮುಸ್ಲಿಂ ಬಾಂಧವರು ಸುಖದಿಂದ ಇದ್ದಾರಾ? ಮುಖ್ಯಮಂತ್ರಿ ನರೇಂದ್ರ ಮೋದಿ ಆಡಳಿತದಿಂದ ಅವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರಾ? ನಿಜಕ್ಕೂ ಮೋದಿ ಮುಸ್ಲಿ ಪರವಾ, ವಿರೋಧಿಯಾ? ಮೋದಿ ವ್ಯಕ್ತಿತ್ವಕ್ಕೆ ಮಸಿಬಳಿಯಲು ಗುಜರಾತ್ ನಲ್ಲಿ ವ್ಯವಸ್ಥಿತ ಸಂಚು ಹೂಡಲಾಗಿದೆಯಾ? ಹಾಗಿದ್ರೆ ಇದರ ಹಿಂದೆ ಯಾರ್ಯಾರಿದ್ದಾರೆ?
ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಬಯಸುವವರು ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿರುವ ರಾಷ್ಟ್ರೋತ್ಥಾನ ಯೋಗಿಕ್ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಗಸ್ಟ್ 25ರಂದು ಭಾನುವಾರ, ಅಪರಾಹ್ನ 3.30ಕ್ಕೆ ಆಯೋಜಿಸಲಾಗಿರುವ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ನಡೆಸುತ್ತಿರುವ 'ಜಿಜ್ಞಾಸಾ' ಎಂಬ ಸಂಸ್ಥೆ ಆಯೋಜಿಸಿರುವ ಈ ಸಂವಾದದಲ್ಲಿ, ಮೋದಿ ಅವರ ಆಡಳಿತದ ಬಗ್ಗೆ ಗುಜರಾತ್ ನಲ್ಲಿ ಖುದ್ದು ಅಧ್ಯಯನ ನಡೆಸಿರುವ ಶಿಕ್ಷಣತಜ್ಞೆ ಮತ್ತು ಬರಹಗಾರ್ತಿ ಮಧು ಪೂರ್ಣಿಮಾ ಕಿಶ್ವರ್ ಅವರು ಭಾಗವಹಿಸುತ್ತಿದ್ದಾರೆ. ಅವರು 'ಮೋದಿ, ಮುಸ್ಲಿ ಮತ್ತು ಮೀಡಿಯಾ' ಎಂಬ ವಿಷಯದ ಕುರಿತು ತಮ್ಮ ಅನುಭವ ಮತ್ತು ವಿಚಾರವನ್ನು ಹಂಚಿಕೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಸಂಶೋಧನೆ ನಡೆಸಿರುವ ಮಧು ಕಿಶ್ವರ್ ಅವರು 'ಮೋದಿನಾಮಾ' ಎಂಬ ಸಂಶೋಧನಾ ಕೃತಿಯನ್ನು ಹೊರತಂದಿದ್ದಾರೆ. ಅದರಲ್ಲಿ ಮೋದಿ ಅವರ ಆಡಳಿತ, ಅಭಿವೃದ್ಧಿ ಕಾರ್ಯಕ್ರಮ, ಅಲ್ಪಸಂಖ್ಯಾತರು ಮತ್ತು ಅದರಲ್ಲೂ ಮುಸ್ಲಿಂ ಜೊತೆಗೆ ಅವರಿಗಿರುವ ಬಾಂಧವ್ಯದ ಬಗ್ಗೆ ಬರಹ ಮತ್ತು ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ.
ಮಧು ಕಿಶ್ವರ್ ಅವರ ಪ್ರಕಾರ, ಮೋದಿ ಅವರ ವಿರುದ್ಧ ಮಾಡಲಾಗಿರುವ ಹಲವಾರು ಆರೋಪಗಳು ಸುಳ್ಳು ಮತ್ತು ಅವರ ವಿರುದ್ಧ ಪತ್ರಕರ್ತರು ಸೇರಿದಂತೆ, ಸರಕಾರೇತರ ಸಂಸ್ಥೆಗಳು, ಬುದ್ಧಿಜೀವಿಗಳು, ವಿರೋಧಿ ರಾಜಕಾರಣಿಗಳು ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಇದನ್ನೆಲ್ಲ ಅವರು ಕಂಡುಕೊಂಡಿದ್ದು, ಅವರಿವರನ್ನು ಕೇಳಿ ಅಲ್ಲ, ಗುಜರಾತ್ ರಾಜ್ಯಕ್ಕೆ ಖುದ್ದಾಗಿ ಭೇಟಿ ನೀಡಿ.
ಮೋದಿ ಆಡಳಿತದ ಅಡಿಯಲ್ಲಿ ಗುಜರಾತ್ ನಲ್ಲಿ ಮುಸ್ಲಿಂರು ಸುಭಿಕ್ಷದಿಂದಿದ್ದಾರೆ, ಮೋದಿ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯವನ್ನೂ ಹೊಂದಿದ್ದಾರೆ ಅಂತಾರೆ ಮಧು ಕಿಶ್ವರ್. ಮೋದಿ ಅವರ ಪರವಾಗಿ ಅಲ್ಪಸಂಖ್ಯಾತರರು ಮಾತನಾಡಿದಾಗ, ಸ್ವಹಿತಾಸಕ್ತಿಗಳಿಂದ ಅವರ ಮೇಲೆ ದಾಳಿಗಳು ಕೂಡ ಆಗಿವೆ ಅಂತಾರೆ ಕಿಶ್ವರ್.
ಕಿಶ್ವರ್ ಅವರ ಮಾತನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಬಿಜೆಪಿಯ ಚುನಾವಣಾ ಪ್ರಚಾರದ ಮುಂದಾಳತ್ವವನ್ನು ವಹಿಸಿರುವ ನರೇಂದ್ರ ಮೋದಿ ಅವರನ್ನು ಆದರಿಸುವವರು ಮತ್ತು ಟೀಕಿಸುವವರೂ ಇದ್ದಾರೆ. ಈ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕಿದ್ದರೆ ಮಧು ಕಿಶ್ವರ್ ಅವರು ಬೆಂಗಳೂರಿನಲ್ಲೇ ಭಾನುವಾರ ಸಿಗುತ್ತಿದ್ದಾರೆ. ನಿಮ್ಮ ಪ್ರಶ್ನೆ, ಸಂದೇಹಗಳನ್ನು ಅವರೊಂದಿಗೆ ಹಂಚಿಕೊಂಡು ಉತ್ತರ ಕಂಡುಕೊಳ್ಳಿ.
ಸಂವಾದ ಕಾರ್ಯಕ್ರಮದ ವಿವರ
ವಿಷಯ : ಮೋದಿ, ಮುಸ್ಲಿಂ, ಮೀಡಿಯಾ
ಮಾತನಾಡುವವರು : ಮಿಸ್ ಮಧು ಪೂರ್ಣಿಮಾ ಕಿಶ್ವರ್, ಶಿಕ್ಷಣತಜ್ಞೆ ಮತ್ತು ಬರಹಗಾರ್ತಿ
ದಿನಾಂಕ ಮತ್ತು ಸಮಯ : ಆಗಸ್ಟ್ 25, 2013, ಭಾನುವಾರ, ಅಪರಾಹ್ನ 3.30ಕ್ಕೆ
ಎಲ್ಲಿ? : ರಾಷ್ಟ್ರೋತ್ಥಾನ ಯೋಗಿಕ್ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಅಜಿತಾ ಸ್ಮೃತಿ, ಬಿಎಸ್ಎನ್ಎಲ್ ಟೆಲಿಫೋನ್ ಎಕ್ಸ್ ಚೇಂಜ್ ಬಳಿ, 36ನೇ ಅಡ್ಡರಸ್ತೆ, 10ನೇ ಮುಖ್ಯ ರಸ್ತೆ, ಜಯನಗರ 4ನೇ ಬ್ಲಾಕ್, ಬೆಂಗಳೂರು - 560 011.












Click it and Unblock the Notifications