ಹೊಸ ಮೇಯರ್ ಹುಡುಕಾಟದಲ್ಲಿ ಬಿಜೆಪಿ ಬ್ಯುಸಿ

ಕ್ಲಿನ್ ಇಮೇಜ್ ಇರುವ ಅಭ್ಯರ್ಥಿಯನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ಸಜ್ಜಾಗಿರುವ ಬಿಜೆಪಿ, ಚಿಕ್ಕಪೇಟೆ ವಾರ್ಡ್ ನ ಎ.ಎಲ್.ಶಿವಕುಮಾರ್ ಮತ್ತು ಪಟ್ಟಾಭಿರಾಮನಗರ ವಾರ್ಡ್ ನ ಸಿ.ಕೆ.ರಾಮಮೂರ್ತಿ ಅವರ ಹೆಸರನ್ನು ಆಯ್ಕೆ ಮಾಡಿದೆ. ಇಬ್ಬರಲ್ಲಿ ಮೇಯರ್ ಪಟ್ಟ ಯಾರಿಗೆ ಎಂಬುದು ಅಂತಿಮವಾಗಿಲ್ಲ.
ಇಬ್ಬರು ಬಿಬಿಎಂಪಿ ಸದಸ್ಯರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರ್ ಎಸ್ಎಸ್ ಬೆಂಗಳೂರಿನ ಅಭಿವೃದ್ಧಿ ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ ತಂದುಕೊಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಬಿಜೆಪಿಗೆ ಸೂಚಿಸಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಮಮೂರ್ತಿ ಅವರನ್ನು ಮೇಯರ್ ಪಟ್ಟದಲ್ಲಿ ಕೂರಿಸಲು ಆಸಕ್ತಿ ಹೊಂದಿದ್ದಾರೆ. ಶಿವಕುಮಾರ್ ಸಹ ವಾರ್ಡ್ ನಲ್ಲಿ ಉತ್ತಮ ಕೆಲಸ ಮಾಡಿದ್ದು, ಉತ್ತಮ ಹೆಸರು ಗಳಿಸಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕಾಗಿ ಬಸವನಗುಡಿ ಪಾಲಿಕೆ ಸದಸ್ಯ ಬಿ.ಎಸ್.ಸತ್ಯನಾರಾಯಣ, ಜೆ.ಪಿ.ಪಾರ್ಕ್ ಸದಸ್ಯ ಬಿ.ಆರ್.ನಂಜುಡಪ್ಪ ಹಾಗೂ ವಿಜಯನಗರ ಸದಸ್ಯ ರವೀಂದ್ರ ಅವರ ಹೆಸರುಗಳು ಮೇಯರ್ ಸ್ಥಾನಕ್ಕೆ ಹೇಳಿಬರುತ್ತಿವೆ.
ಉಪ ಮೇಯರ್ ಭಯ : ಮೇಯರ್ ಆಯ್ಕೆಯನ್ನು ಬಿಜೆಪಿ ಮಾಡಿ ಮುಗಿಸಲಿದೆ. ಆದರೆ, ಉಪ ಮೇಯರ್ ಪಟ್ಟ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದೆ. ಆದ್ದರಿಂದ ಈ ಸ್ಥಾನ ಕಾಂಗ್ರೆಸ್ ವಶವಾಗುವುದರಲ್ಲಿ ಸಂಶಯವಿಲ್ಲ.
ಪ್ರತಿ ವರ್ಷ ಪಾಲಿಕೆ ಖರ್ಚು ವೆಚ್ಚದ ವರದಿಯನ್ನು ಉಪ ಮೇಯರ್ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸುತ್ತಾರೆ. ಆದರೆ, 2010ರಲ್ಲಿ ಬಿಜೆಪಿ ಪಾಲಿಕೆ ಅಧಿಕಾರವಹಿಸಿಕೊಂಡ ನಂತರ ಇಂತಹ ವರದಿ ಬಿಡುಗಡೆ ಮಾಡಿಲ್ಲ.(ಮೇಯರ್ ಚುನಾವಣೆಗೆ ಬಿಬಿಎಂಪಿ ಸಜ್ಜು)
ಪಾಲಿಕೆ ಉಪ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾದ ತಕ್ಷಣ ವರದಿ ಬಿಡುಗಡೆಯಾಗುತ್ತಿದೆ. ಬಿಜೆಪಿ ಆಡಳಿತಕ್ಕೆ ಕನ್ನಡಿ ಹಿಡಿದು, ಚರ್ಚೆಗೆ ಕಾರಣವಾಗುತ್ತದೆ ಎಂಬುದು ಪಕ್ಷಕ್ಕೆ ತಿಳಿದಿದೆ. ಆದ್ದರಿಂದಲೇ ಕ್ಲೀನ್ ಇಮೇಜ್ ಇರುವ ವ್ಯಕ್ತಿಯನ್ನು ಮೇಯರ್ ಪಟ್ಟಕ್ಕೆ ತರಲು ನಿರ್ಧರಿಸಿದೆ.
ಶನಿವಾರ ನಿರ್ಧಾರ : ಬಿಜೆಪಿ ನಾಯಕರ ಮತ್ತು ಬಿಬಿಎಂಪಿ ಸದಸ್ಯರ ಸಭೆ ಶನಿವಾರ ನಡೆಯಲಿದ್ದು, ಅಂದು ಮೇಯರ್ ಯಾರು ಎಂಬ ನಿರ್ಧಾರ ಹೊರಬೀಳುವ ಸಂಭವವಿದೆ.












Click it and Unblock the Notifications