ಚಿಕ್ಕಬಳ್ಳಾಪುರ : ಭೀಕರ ಅಪಘಾತಕ್ಕೆ 4 ಬಲಿ

ಮಂಗಳವಾರ ರಾಷ್ಟ್ರೀಯ ಹೆದ್ದಾರಿ 7ರ ದೊಡ್ಡಪೈಲಗುರ್ಕಿ ಗೇಟ್ ಬಳಿ ಮಾರುತಿ ಸ್ವಿಫ್ಟ್ ಕಾರು ಕೆಎಸ್ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸಲ್ಮಾ (35), ಫಾತಿಮಾ (48), ಶಬರೀನ್(27) ಮತ್ತು ಕಾರು ಚಾಲಕ ಜಾಕಿರ್ (38) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯಿಂದಾಗಿ ಆರು ಜನರು ಗಾಯಗೊಂಡಿದ್ದು, ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಮತ್ತು ನಾಲ್ವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮಕ್ಕಳ ಪ್ರಾಣ ಉಳಿಸಿದರು : ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಸರ್ಕಾರಿ ಬಸ್ ದೊಡ್ಡಪೈಲಗುರ್ಕಿ ಗೇಟ್ ಬಳಿ ನಿಂತಿತ್ತು. ಅದರಿಂದ ಇಳಿದ ಶಾಲಾ ಮಕ್ಕಳು ರಸ್ತೆಯ ಇನ್ನೊಂದು ಬದಿಗೆ ದಾಟುತ್ತಿದ್ದರು.
ಇದೇವೇಳೆ ಆಂಧ್ರಪ್ರದೇಶದ ಪೆನುಗೊಂಡಕ್ಕೆ ತೆರಳುತ್ತಿದ್ದ ಕಾರು ವೇಗವಾಗಿ ಬಂದಿದೆ. ಮಕ್ಕಳು ರಸ್ತೆ ದಾಟುತ್ತಿದ್ದದ್ದನ್ನು ಗಮನಿಸಿದ ಚಾಲಕ ಮಕ್ಕಳ ಪ್ರಾಣ ಉಳಿಸಲು ಹೋಗಿದ್ದಾನೆ. ಈ ಸಮಯದಲ್ಲಿ ಕಾರಿನ ನಿಯಂತ್ರಣ ತಪ್ಪಿ ಬಸ್ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ವೇಗಕ್ಕೆ ಸಂಪೂರ್ಣ ಜಖಂಗೊಂಡಿದೆ. ಕಾರಿನ ಅವಶೇಷಗಳಲ್ಲಿ ಶವಗಳು ಸಿಕ್ಕಿ ಹಾಕಿಕೊಂಡಿದ್ದವು. ಕ್ರೇನ್ ನೆರವಿನೊಂದಿಗೆ ವಾಹನಗಳನ್ನು ಬೇರ್ಪಡಿಸಿ ಶವಗಳನ್ನು ಹೊರತೆಗೆಯಲಾಗಿದೆ.
ಕನಕಪುರ ಮೂಲದವರು : ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕನಕಪುರ ಬಳಿಯ ತಿಮ್ಮಾಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರು ಪೆನುಗೊಂಡ ಬಳಿಯ ದರ್ಗಾಕ್ಕೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications