ಅನಾಥ ಕಾಳಮ್ಮನ ಲಗ್ನಕ್ಕೆ ಸರಕಾರದ ಪೌರೋಹಿತ್ಯ
ಬೆಂಗಳೂರು, ಆ. 18 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 'ಸ್ವೀಕಾರ' ಕೇಂದ್ರದಲ್ಲೀಗ ಮದುವೆಯ ಸಂಭ್ರಮ. ಸ್ವೀಕಾರ ಕೇಂದ್ರದ ನಿವಾಸಿ, ಕಾಳಮ್ಮ ಪೂಜಾಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಆರೂವರೆ ವರ್ಷದವಳಿದ್ದಾಗಲೇ ಅನಾಥಳಾಗಿ ಬಾಲಕಿಯರ ಬಾಲ ಮಂದಿರ ಸೇರಿದ ಕಾಳಮ್ಮ, ಸೋಮವಾರ ಆಗಸ್ಟ್ 19ರಂದು ಹಸೆಮಣೆ ಏರಲಿದ್ದಾಳೆ. ಸರ್ಕಾರವೇ ಅವಳ ವಿವಾಹ ನೆರವೇರಿಸಲು ಮುಂದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ವಿಶಿಷ್ಟ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ವರ ಸತೀಶ ವಾಣಿಜ್ಯ ಪದವೀಧರನಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರ ಪೇಟೆಯ ಪೂರ್ಣಪ್ರಜ್ಞ ವಸತಿ ಶಾಲೆಯ ಉದ್ಯೋಗಿ. ಎಸ್‌ಎಸ್‌ಎಲ್‌ಸಿ ಓದಿರುವ ಕಾಳಮ್ಮ, ಪ್ರಸಾಧನ, ಹೊಲಿಗೆ ಮತ್ತು ಗಣಕ ತರಬೇತಿ ಪಡೆದಿದ್ದಾಳೆ.

ದಾನಿಗಳಿಗೊಂದು ಥ್ಯಾಂಕ್ಸ್ : ಈ ವಿವಾಹವನ್ನು ಯಶಸ್ವಿಯಾಗಿ ನೆರವೇರಿಸಲು ಸರ್ಕಾರವೇ ತಂದೆ ತಾಯಿಯಾಗಿ, ದಾನಿಗಳೇ ಬಳಗವಾಗಿ ಶ್ರಮಿಸಿದ್ದಾರೆ. ಸರ್ಕಾರದೊಂದಿಗೆ ಕೈಜೋಡಿಸಿರುವ ಸಹೃದಯರ ಸಂಖ್ಯೆ ಎರಡಂಕಿ ದಾಟಿದೆ. ಐಡ ಮಾರ್ಗರೆಟ್ ಡಿ ಕುನ್ಹ ಹಾಗೂ ರಾಜಾರಾಮ್ ಸೋಮಪ್ರಭ ದಂಪತಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ.
ಎಚ್.ಎಸ್. ಶಶಿಧರ ಮತ್ತು ರಾಜಸಾಗರ್ ಅವರು ಮದುವೆ ಹಾರ, ಬಿಡಿ ಹೂವು ನೀಡಿದರೆ, ಯು ಅಂಡ್ ಐ ಸದಸ್ಯರು ಧ್ವನಿವರ್ಧಕ ವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ರವಿಕುಮಾರ್ ಅವರು ನಾಮಫಲಕ, ನಾಗಪ್ಪ ದಂಪತಿ ಆಹ್ವಾನ ಪತ್ರಿಕೆ, ನಂದಿ ಪ್ರಸಾದ್ ಪ್ರೇಮ ದಂಪತಿ ವೀಳ್ಯದೆಲೆ ಹೂವು, ಚಂದನ ಮತ್ತು ದಾಕ್ಷಾಯಿಣಿ ತಾಂಬೂಲ ವಿತರಿಸಲಿದ್ದಾರೆ.
ಶ್ರೀರಾಮ್ ಬೈರಸಂದ್ರ ನಾದಸ್ವರ, ಚಾಮರಾಜಪೇಟೆಯ ಚಂದ್ರ ಮೋಹನ್ ಸಾಯಿ ಮಂಡಳಿಯವರು ಶಾಮಿಯಾನಾ ಮತ್ತು ಪೂಜಾ ಸಾಮಗ್ರಿ, ಡಿ. ಕೃಷ್ಣಮೂರ್ತಿ ರಾವ್-ರಮಾಬಾಯಿ ದಂಪತಿ ಹುಡುಗನ ಪಂಚೆ ಶಲ್ಯ, ಉಷಾ ದಿವಾಕರ್ ದಂಪತಿ ಅತಿಥಿಗಳ ಹೂಗುಚ್ಛದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಾಂತಾ ಶ್ರೀನಿವಾಸ್ ದಂಪತಿ ವಧುವಿನ ಕೇಶಾಲಂಕಾರ, ಸುಶ್ಮಿತ ಹಾಗೂ ಆಶಿಕ ಅಬ್ರಹಾಂ ದಂಪತಿ ವಧುವಿನ ಸೀರೆ, ಉಡುಪುಗಳ ಉಡುಗೊರೆ ನೀಡಲಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟ ನಿರಾಶ್ರಿತ ಯುವತಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರ ತಾತ್ಕಾಲಿಕ ಆಸರೆ ಒದಗಿಸುತ್ತಿದೆ. ಬದುಕಿನಲ್ಲಿ ನೊಂದು-ಬೆಂದು ಆಸರೆ ಕಳೆದುಕೊಂಡ ಈ ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಬದುಕಿಗೆ ನೆಲೆ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ. ಯೋಗ್ಯ ವರರು ಮುಂದೆ ಬಂದರೆ ಕೆಲವರ ವಿವಾಹವನ್ನೂ ನೆರವೇರಿಸಲಾಗುತ್ತದೆ. ಈವರೆಗೆ ಹತ್ತು ಮಂದಿ ಯುವತಿಯರು ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಳಮ್ಮಳದ್ದು ಇಂತಹ ಹನ್ನೊಂದನೇ ಮದುವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಮೇಶ್ ಝಳಕಿ, ಇಲಾಖೆಯ ನಿರ್ದೇಶಕರಾದ ಗುರ್ನಿತ್ ತೇಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ಜಿ.ಸಿ. ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್ ಹಾಲಭಾವಿ ಅವರ ಸಮಕ್ಷಮದಲ್ಲಿ ಸುಧಾರಣಾ ಸಂಸ್ಥೆ ಆವರಣದ ಗಣಪತಿ ದೇವಾಲಯದಲ್ಲಿ ಈ ವಿವಾಹ ನಡೆಯಲಿದೆ.












Click it and Unblock the Notifications