ಕುದುರಿದ ದೋಸ್ತಿ: ಡಿಕೆಶಿ- ಯೋಗೀಶ್ವರ್ 'ಹಸ್ತ'ಲಾಘವ
ಚನ್ನಪಟ್ಟಣ, ಆಗಸ್ಟ್ 16: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಒತ್ತಡದಲ್ಲಿ ಮತ್ತು ಸ್ವಹಿತ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷ ಶಾಸಕ ಸಿಪಿ ಯೋಗೀಶ್ವರ್ ನಡುವೆ ಮತ್ತೆ ದೋಸ್ತಿ ಕುದುರಿದೆ. ಪರಸ್ಪರ ಬದ್ಧವೈರಿಗಳಾಗಿದ್ದ ಇಬ್ಬರೂ ನಾಯಕರು ರಾಜಕೀಯ ಅನಿವಾರ್ಯತೆಗಳಿಗೆ ಸಿಲುಕಿ ನಿರೀಕ್ಷೆಯಂತೆ ಕೈಜೋಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಪಕ್ಷದ ಕಾರ್ಯರ್ತರ ಸಮಾವೇಶ ನಡೆಸಿದ ಯೋಗೀಶ್ವರ್ ತಮ್ಮ ನಿರ್ಧಾರ ಪ್ರಕಟಿಸುವ ಉಮೇದಿಯಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ಅದೆಲ್ಲಿಂದಲೋ ದಿಢೀರನೆ ಬಂದ ಡಿಕೆಶಿ, ಯೋಗೀಶ್ವರ್ ಮತ್ತು ಅವರ ಬೆಂಲಿಗರ ನಿರ್ಧಾರಕ್ಕೂ ಕಾಯದೆ ಯೋಗಿ ಕೊರಳಿಗೆ ಗಂಧದ ಹಾರಿ ಹಾಕಿ ತಾವಿಬ್ಬರೂ ಕೊರಳ ಗೆಳೆಯರು ಎಂದು ಘೋಷಿಸಿಯೇಬಿಟ್ಟರು.
ಈ ಮಧ್ಯೆ, ತಮ್ಮನಿಗಾಗಿ ಅಲ್ಲ, ಬದಲಿಗೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಮಾಜವಾದಿ ಪಕ್ಷದತ್ತ ನೆರವಿನ ಹಸ್ತ ಚಾಚಿರುವೆ ಎಂದು ಡಿಕೆಶಿ ಸಮಜಾಯಿಷಿ ನೀಡಿದ್ದಾರೆ. ಇದೇ ರೀತಿ ತಮ್ಮ ಮತ್ತೊಬ್ಬ ವೈರಿ ಮಾಜಿ ಸಂಸದೆ, ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಅವರನ್ನೂ ಮುಖತಃ ಕಂಡು ತಮ್ಮನನ್ನು ಬೆಂಬಲಿಸುವಂತೆ ಡಿಕೆಶಿ ಕೋರಿದ್ದರು. ಅತ್ತ ಡಿಕೆಶಿ ದೂರ ಸಾಗುತ್ತಿದ್ದಂತೆ 'ಕಾಂಗ್ರೆಸ್ ಪಕ್ಷದ ಪರ ಕತ್ತೆ ನಿಂತರೂ ಅದನ್ನು ಬೆಂಬಲಿಸುವೆ' ಎಂದು ತೇಜಸ್ವಿನಿ ಅವರು ಮಾರ್ಮಿಕವಾಗಿ ಡಿಕೆಶಿ ಕೋರಿಗೆ ಪ್ರತಿಸ್ಪಂದಿಸಿದ್ದಾರೆ.

ಎಸ್ಪಿ ಕಾರ್ಯಕರ್ತರ ಭಾರಿ ವಿರೋಧ:
ಈ ಉಪಚುನಾವಣೆಯಲ್ಲಿ ಯೋಗೀಶ್ವರ್ ಅವರು ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ವೇದಿಕೆಯಲ್ಲಿ ಘೋಷಿಸಿಯೂಬಿಟ್ಟರು. ಇದಕ್ಕೆ ಎಸ್ಪಿ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಯಿತು. ಡಿಕೆಶಿ ವಿರುದ್ಧ ರೊಚ್ಚಿಗೆದ್ದ ಕಾರ್ಯಕರ್ತರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯೋಗೀಶ್ವರ್ ಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದವರಿಗೆ ಈಗ ಯೋಗೀಶ್ವರ್ ಬೇಕಾಯಿತೇ? ಮೊದಲು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಎಂದು ಧಿಕ್ಕಾರ ಕೂಗಿದರು. ಈ ವೇಳೆ ಯೋಗೀಶ್ವರ್ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಇದಕ್ಕೆ ಉತ್ತರವೆಂಬಂತೆ ಮಾತನಾಡಿದ ಡಿಕೆಶಿ, 'ಚುನಾವಣೆ ಮುಗಿದ ನಂತರವೂ ಅವರ ಕೈ ಬಿಡುವುದಿಲ್ಲ' ಎಂಬ ಭರವಸೆ ನೀಡಿದರು.

ರಾಮನಗರದ ರೆಸಾರ್ಟಿನಲ್ಲಿ ಮೊದಲೇ ಫಿಕ್ಸ್:
ಎಸ್ಪಿ ಕಾರ್ಯಕರ್ತರ ಸಭೆ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿತ್ತು. ಆದರೆ ಮಧ್ಯಾಹ್ನ 1-30ಕ್ಕೆ ಆರಂಭವಾಯಿತು. ಆದರೆ ಸಭೆಗೂ ಮುನ್ನ ಯೋಗೀಶ್ವರ್ ಮತ್ತು ಡಿಕೆಶಿ ರಾಮನಗರದ ರೆಸಾರ್ಟ್‌ವೊಂದರಲ್ಲಿ ಮಾತುಕತೆ ನಡೆಸಿ, ಡಿಕೆಶಿ ಈ ಸಭೆಗೆ ಬರುವುದನ್ನು ಅಲ್ಲೇ ಫಿಕ್ಸ್ ಮಾಡಿಕೊಂಡಿದ್ದರು ಎಂದು ಸಭೆಯಲ್ಲಿ ಕಾಣಿಸಿಕೊಂಡ ಕೆಲ ಕಾಂಗ್ರೆಸ್ ಮುಖಂಡರು ಪಿಸುಗುಟ್ಟಿದ್ದು ದಾಖಲಾರ್ಹವಾಗಿತ್ತು.

ಸಮಾಜವಾದಿ ಪಕ್ಷದ ನಿಲುವೇನು?
ವಾಸ್ತವವಾಗಿ ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ಸಿನಿಂದ ವಿಮುಖವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ಸನ್ನು ಝಾಡಿಸಿ, ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಎಸ್ಪಿ ಕೈಹಿಡಿದ್ದಾರೆ. ಆದಾಗ್ಯೂ ಈಗ ಎಸ್ಪಿ ಮತ್ತು ಕಾಂಗೈ ಕೂಡಿಕೆಯಾಗಿದೆ.
ಎರಡೂ ಪಕ್ಷಗಳಿಗೆ ಸಂಬಂಧಿಸಿದಂತೆ ಮಹತ್ವದ ತಾಜಾ ಬೆಳವಣಿಗೆಗಳು ನಡೆದಿವೆ. ಹಾಗಾಗಿ, ಪ್ರಸಕ್ತ ಸನ್ನಿವೇಶದಲ್ಲಿ ತಟಸ್ಥವಾಗಿ ಉಳಿಯುವುದೇ ಸೂಕ್ತ ಎಂದು ಪಕ್ಷದ ನಾಯಕರು ಸಲಹೆ ನೀಡಿದರೂ ಚನ್ನಪಟ್ಟಣದ ಸಮಾಜವಾದಿ ಪಕ್ಷದ ಶಾಸಕ ಯೋಗೀಶ್ವರ್ ತಮಗೆ ಸರಿ ಕಾಣಿಸಿದ ಹಾದಿಯನ್ನೇ ತುಳಿದಿದ್ದಾರೆ.

ಯೋಗೀಶ್ವರ್ ಕಾಂಗ್ರೆಸ್ ಒಲವಿಗೆ ಕಾರಣವೇನು?
ಇದಕ್ಕೆ ಕಾರಣವೂ ಇಲ್ಲದಿಲ್ಲ. ಜೆಡಿಎಸ್ ಗೆ ಬೆಂಬಲ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಬೆಂಬಲಿಸಿದಲ್ಲಿ ತರೇಹವಾರಿ ಅನುಕೂಲವಾಗಬಹುದು ಎಂಬ ದೊಡ್ಡಮಟ್ಟದ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡೇ ಯೋಗೀಶ್ವರ್ ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ.
ಕೇಂದ್ರದ ಯುಪಿಎ ಸರ್ಕಾರಕ್ಕೆ ಸಮಾಜವಾದಿ ಪಕ್ಷ ಬಾಹ್ಯ ಬೆಂಬಲ ನೀಡಿದೆ. ಆದರೆ, ಆ ಪಕ್ಷದ ನಾಯಕರು ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಬೇಕು ಎಂಬ ಮಾತನ್ನೇನು ಹೇಳಿರಲಿಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ.

ಅಭಿವೃದ್ಧಿಯ ಹೆಸರಿನಲ್ಲಿ 'ಹಸ್ತ'ಲಾಘವ
'ತಟಸ್ಥನಾಗಿ ಉಳಿಯುವ ಬಗ್ಗೆ ಯೋಚನೆ ಮಾಡಿದರೆ ಅದರಿಂದ ಪ್ರಯೋಜನವೇನು? ನನ್ನ ತಾಲೂಕಿನಲ್ಲಿ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕು. ಅಭಿವೃದ್ಧಿ ಕೆಲಸಗಳಾಗಬೇಕು. ಈ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳಿಗೆ ಕೆಲವು ಪ್ರಮುಖ ಷರತ್ತುಗಳನ್ನು ಹಾಕಿದ್ದೇನೆ. ಮೇಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎರಡು ಬಾರಿ ದೂರವಾಣಿ ಕರೆ ಮಾಡಿ ಮನವಿ ಮಾಡಿದರು. ಇದು ಈ ಉಪಚುನಾವಣೆಗೆ ಸಂಬಂಧಿಸಿದಂತೆ ನೀಡಿರುವ ಬೆಂಬಲ ಮಾತ್ರ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಜೆಡಿಎಸ್ಸಿಗೆ ಬೆಂಬಲಿಸುವುದರಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಏನೂ ಮಹತ್ತರ ಬದಲಾವಣೆ ಆಗುವುದಿಲ್ಲ' ಎಂಬುದು ಯೋಗಿ ಪ್ರಬಲವಾದ.

ಕಾಂಗ್ರೆಸ್ ಪಾಲಿಗೆ ಯೋಗೀಶ್ವರ್ ನ್ಯಾಪ್ಕಿನ್:
ಅಧಿಕಾರದಲ್ಲಿರುವ ಪಕ್ಷದ ಕಡೆ ಹೋಗುವ ಹಳೆಯ ಚಾಳಿಯನ್ನೇ ಮಾಜಿ ಸಚಿವ ಸಿಪಿ ಯೋಗೀಶ್ವರ್ ಮುಂದುವರಿಸಿದ್ದಾರೆ. ಬಿಜೆಪಿಗೆ ಹೋದಾಗ ಆದಷ್ಟು ಲಾಭ ಅವರಿಗೆ ಕಾಂಗ್ರೆಸ್ ಬೆಂಬಲಿಸುವುದರಿಂದ ಸಿಗದು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಗುರುವಾರ ಮತಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾಲಿಗೆ ಯೋಗೀಶ್ವರ್ ನ್ಯಾಪ್ಕಿನ್ ಆಗುತ್ತಾರಷ್ಟೇ' ಎಂದು ಕಟಕಿಯಾಡಿದರು.
'ಮರು ಚುನಾವಣೆಯಲ್ಲಿ ಯೋಗೀಶ್ವರ್ ಅವರನ್ನು ಬಳಸಿಕೊಂಡು, ಅದಾದ ಬಳಿಕ ಕೊಟ್ಟ ಭರವಸೆಗಳಿಗೆ ಕಾಂಗ್ರೆಸ್ ನಾಯಕರು ಎಳ್ಳು ನೀರು ಬಿಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬೆಂಬಲ ನೀಡುವ ಕಾಂಗ್ರೆಸ್ ಭರವಸೆ ಅನುಷ್ಠಾನ ಅನುಮಾನ' ಎಂದು ಯೋಗೀಶ್ವರ್ ಬಗ್ಗೆ ಕುಮಾರಸ್ವಾಮಿ ಕಾಳಜಿ ವ್ಯಕ್ತಪಡಿಸಿದರು.
'ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪಕ್ಷ ಸೇರಿಕೊಂಡ ಯೋಗೀಶ್ವರ್ ಅಧಿಕಾರ ಗಿಟ್ಟಿಸಿ, ರಾಜಕೀಯ ಮತ್ತು ಆರ್ಥಿಕವಾಗಿ ಸದೃಢರಾದರು. ಈಗಲೂ ಅದೇ ಗತವೈಭವ ಮರುಕಳಿಸುತ್ತದೆ ಎಂದು ಅವರೇನಾದರೂ ಭಾವಿಸಿದ್ದರೆ ಅದು ಭ್ರಮೆ ಆಗುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications