ಸಬ್ ಮರಿನ್ ಬೆಂಕಿ ಅನಾಹುತದಲ್ಲಿ 18 ಮಂದಿ ಹತ
ಮುಂಬೈ, ಆ.14 : ಮುಂಬೈನಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಸಿಂಧು ರಕ್ಷಕ್ ಸಬ್ ಮೆರಿನ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ 18 ಜನರು ಸಾವನ್ನಪ್ಪಿದ್ದು, ಇದರಲ್ಲಿ ಮೂವರು ಹಿರಿಯ ಅಧಿಕಾರಗಳು ಸೇರಿದ್ದಾರೆ.
ಐಎನ್ ಎಸ್ ಸಿಂಧು ರಕ್ಷಕ್ ಸಬ್ ಮೆರಿನ್ ನಲ್ಲಿ ಬುಧವಾರ ಮಧ್ಯರಾತ್ರಿ ಭಾರೀ ಸ್ಫೋಟ ಸಂಭವಿಸಿ, ನಂತರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಅಕ್ಕಪಕ್ಕದಲ್ಲಿದ್ದ ಎರಡು ಹಡಗುಗಳಿಗೂ ವ್ಯಾಪಿಸಿತ್ತು. ಬೆಳಗ್ಗೆ 3 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ ನೌಕಾಪಡೆ ಮತ್ತು ಮುಂಬೈ ಅಗ್ನಿಶಾಮಕ ದಳದ 16 ವಾಹನಗಳು ಬೆಂಕಿಯನ್ನು ನಂದಿಸಿದವು.

ಅಗ್ನಿ ಅವಘಡ ಸಂಭವಿಸುವಾಗ 18 ಸಿಬ್ಬಂದಿ ಸಬ್ ಮೆರಿನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ. ಸಿಬ್ಬಂದಿಯನ್ನು ರಕ್ಷಿಸಲು ತುರ್ತು ರಕ್ಷಣಾ ಕಾರ್ಯ ಕೈಗೊಂಡರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಕಿ ಆಕಸ್ಮಿಕದಿಂದಾಗಿ ಸಬ್ ಮೆರಿನ್ ಭಾಗಶಃ ಸುಟ್ಟು ಕರಕಲಾಗಿದೆ. ಅದರ ಅರ್ಧಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ನೌಕಾಪಡೆಯ ವಕ್ತಾರ ಪಿ.ವಿ.ಎಸ್.ಸತೀಶ ಹೇಳಿದ್ದಾರೆ. ಬೆಂಕಿ ಹೊತ್ತಿಕೊಳ್ಳುವ ಮುನ್ನ ಸಬ್ ಮೆರಿನ್ ನಲ್ಲಿ ಸ್ಪೋಟ ಸಂಭವಿಸಿತ್ತು. ಸ್ಫೋಟಕ್ಕೆ ಕಾರಣವೇನಿರಬಹುದು ಎಂದು ನೌಕಾಪಡೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ತನಿಖೆಗೆ ಆದೇಶ : ಅತ್ಯಂತ ಬಿಗಿ ಭದ್ರತೆಯ ಸಬ್ ಮೆರಿನ್ ನ ಬೆಂಕಿಗೆ ಆಹುತಿಯಾದ ಪ್ರಕರಣದ ಬಗ್ಗೆ ತನಿಖೆಗೆ ನೌಕಾಪಡೆ ಆದೇಶ ನೀಡಿದೆ. ಬೆಂಕಿ ಮತ್ತು ಸ್ಫೋಟಕ್ಕೆ ಕಾರಣಗಳೇನು ಎಂದು ಸಮಗ್ರ ವರದಿ ನೀಡುವಂತೆ ನೌಕಾಪಡೆ ತನಿಖೆ ನಡೆಸುತ್ತಿರುವ ಸಮಿತಿಗೆ ನಿರ್ದೇಶನ ನೀಡಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications