ತುರ್ತುಪರಿಸ್ಥಿತಿಯ ಕೂಸು ಕೊನೆಗೂ ಬಿಜೆಪಿಯಲ್ಲಿ ವಿಲೀನ
ನವದೆಹಲಿ, ಆಗಸ್ಟ್ 12: ಮುಂದಿನ ಲೋಕಸಭಾ ಚುನಾವಣೆ ಅಂಗವಾಗಿ ರಾಜಕೀಯ ಪಕ್ಷಗಳ ವಿಲೀನ, ವಿಘಟನೆಗಳು ಭರಾಟೆ ಜೋರಾಗಿಯೇ ಇದೆ. ಭಾರತೀಯ ಜನಸಂಘದಲ್ಲಿ ಇದ್ದಾಗಿನಿಂದಲೂ ಭಾರತೀಯ ಜನತಾ ಪಕ್ಷದ ಮನಸ್ಥಿತಿಯಲ್ಲೇ ಇದ್ದ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಸುಬ್ರಹ್ಮಣ್ಯ ಸ್ವಾಮಿ ಅವರು ತಮ್ಮ ಜನತಾ ಪಕ್ಷದೊಂದಿಗೆ ಇದೀಗ ಸಂಪೂರ್ಣವಾಗಿ ಬಿಜೆಪಿ ಪಕ್ಷದಲ್ಲಿ ಐಕ್ಯವಾಗಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ತುರ್ತಾಗಿ ಜನಿಸಿದ ಕೂಸು ಜನತಾ ಪಕ್ಷದ ಅಧ್ಯಕ್ಷರಾದ ಸುಬ್ರಹ್ಮಣ್ಯ ಸ್ವಾಮಿ ಅವರ ನಿವಾಸದಲ್ಲಿ ಭಾನುವಾರ ಈ ಸೇರ್ಪಡೆ ಕಾರ್ಯಕ್ರಮ ನೆರವೇರಿದ್ದು, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಈ ಸಂದರ್ಭದಲ್ಲಿ ಹಾಜರಿದ್ದರು.

ಸುಬ್ರಹ್ಮಣ್ಯ ಸ್ವಾಮಿ ಅವರು ಯೋಜನಾ ಆಯೋಗದ ಸದಸ್ಯರಾಗಿದ್ದವರು. ಐದು ಬಾರಿ ಸಂಸದರಾಗಿದ್ದಾರೆ. ಕೇಂದ್ರ ಸಚಿವರೂ ಆಗಿದ್ದರು. ಹಿಂದುತ್ವದ ಕಟ್ಟಾಳು ಎಂದೇ ಬಿಂಬಿತರಾದ ಸ್ವಾಮಿ, ಕಾಂಗ್ರೆಸ್ ಸರಕಾರಕ್ಕೆ ಅನಾದಿಕಾಲದಿಂದಲೂ ಮುಳ್ಳಾಗಿ, ಅನೇಕ ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ತುರ್ತಾಗಿ ಜನಿಸಿದ ಕೂಸು
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ, ಹಲವು ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಒಂದುಗೂಡಿ ಕಾಂಗ್ರೆಸ್ ಸರ್ಕಾರವನ್ನು ಮಣಿಸುವ ನಿರ್ಧಾರಕ್ಕೆ ಬಂದಿದ್ದವು. ಇದರ ಫಲವಾಗಿ 1977ರ ಜ. 23ರಂದು ಹುಟ್ಟಿದ್ದೇ ಜನತಾ ಪಕ್ಷ. ರಾಜ್ ನಾರಾಯಣ್, ಜಾರ್ಜ್ ಫರ್ನಾಂಡಿಸ್, ಚರಣ್ ಸಿಂಗ್ ಮೊದಲಾದವರ ನೇತೃತ್ವದಲ್ಲಿ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು.
ಮೊರಾರ್ಜಿ ದೇಸಾಯಿ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ಕರ್ನಾಟಕದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರೆ, ಲಾಲಕೃಷ್ಣ ಅಡ್ವಾಣಿ ಪಕ್ಷದ ವಕ್ತಾರರಾಗಿದ್ದರು. ಹೀಗೆ ರಚನೆಯಾದ ಬಳಿಕ ಎದುರಿಸಿದ ಮೊದಲ ಲೋಕಸಭಾ ಚುನಾವಣೆಯಲ್ಲೇ ಗೆಲ್ಲುವ ಮೂಲಕ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಮಾತ್ರವಲ್ಲ ದೇಶದಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಎಂಬ ಹೆಗ್ಗಳಿಕೆಯನ್ನೂ ಹೊಂದಿತ್ತು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications