ದೇಸಿ ನಿರ್ಮಿತ ಐಎನ್ಎಸ್ ವಿಕ್ರಾಂತ ಲೋಕಾರ್ಪಣೆ
ಕೊಚ್ಚಿ, ಆ.12:ಭಾರತದ ಮೊಟ್ಟಮೊದಲ ದೇಸೀ ನಿರ್ಮಾಣವಾದ ವಿಮಾನವಾಹಕ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಪತ್ನಿ ಎಲಿಜಬೆತ್ ಆಂಟನಿ ಅವರು ಕೊಚ್ಚಿ ಬಂದರಿನಲ್ಲಿ ಸೋಮವಾರ ಲೋಕಾರ್ಪಣೆ ಮಾಡಿದರು.
ದೇಶದಲ್ಲಿ ತಯಾರಾಗಿರುವ ಅತ್ಯಂತ ದೊಡ್ಡ ಗಾತ್ರದ ಸಮರ ನೌಕೆ ಇದಾಗಿದೆ. ಐಎನ್ ಎಸ್ ವಿಕ್ರಾಂತ್ ಲೋಕಾರ್ಪಣೆಯೊಂದಿಗೆ ಭಾರಿ ಯುದ್ಧ ಹಡಗು ನಿರ್ಮಾಣ ಮಾಡುವ ಇತರ ದೇಶಗಳ ಸಾಲಿನಲ್ಲಿ ಭಾರತವೂ ಗುರುತಿಸಿಕೊಳ್ಳುವಂತಾಗಿದೆ.ಯುಎಸ್, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ಈ ರೀತಿ ಸೌಲಭ್ಯ ಹೊಂದಿವೆ.
ಸಮರನೌಕೆ ಲೋಕಾರ್ಪಣೆಯ ನಂತರ ಮಾತನಾಡಿದ ರಕ್ಷಣಾ ಸಚಿವ ಎ.ಕೆ.ಆಂಟನಿ, ಈ ಐಎನ್ ಎಸ್ ವಿಕ್ರಾಂತ್ ನಿರ್ಮಾಣದಿಂದ ಈ ಕ್ಷೇತ್ರದಲ್ಲಿ ನಾವು ಸ್ವಲ್ಪ ಹಾದಿಯನ್ನು ಕ್ರಮಿಸಿದ್ದೇವೆ. ಇನ್ನೂ ಸಾಗಬೇಕಾದ ದಾರಿ ಸುದೀರ್ಘವಾಗಿದೆ. ದೇಸಿ ಸಮರ ನೌಕೆ ಅಭಿವೃದ್ಧಿ ಪಡಿಸುವ ಪ್ರಕ್ರಿಯೆ ಮುಂದುವರಿಯಬೇಕಾಗಿದೆ ಎಂದು ಹೇಳಿದರು.

ದೇಶದ ಹಡಗು ನಿರ್ಮಾಣ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸಚಿವರು ಭಾರತೀಯ ಹಡಗು ನಿರ್ಮಾಣ ಉದ್ಯಮಕ್ಕೆ ಒತ್ತಾಯಿಸಿದರು. ಈ ನೌಕೆಯನ್ನು ನಿರ್ಮಾಣ ಮಾಡಿರುವ ಕೊಚ್ಚಿ ಶಿಪ್ ಯಾರ್ಡ್ ಲಿಮಿಟೆಡ್ ಕಂಪನಿ, ಭಾರತದ ನೌಕಾಪಡೆಯ ಸಾಮರ್ಥ್ಯ, ಶಕ್ತಿಗಳ ಕೇಂದ್ರವಾಗಲಿದೆ ಎಂದು ಆಂಟನಿ ಹೇಳಿದ್ದಾರೆ.
ಭೂಮಿಯ ಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ಯುದ್ಧೋಪಯುಕ್ತ ಸಿಡಿತಲೆಗಳ ಸಹಿತ ವಿವಿಧ ಶಸ್ತ್ರಾಸ್ತ್ರಗಳನ್ನು ಹಾಗೂ ದೂರ ವ್ಯಾಪ್ತಿಯ ರಾಕೆಟ್ ಗಳನ್ನು ಹೊಂದಿರುವ ಸಮರ ನೌಕೆಯ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಸಮರನೌಕೆಯಲ್ಲಿ ವಿಮಾನ ನಿಲ್ಲಿಸುವ ಸ್ಥಳ ಎರಡು ಫುಟ್ಬಾಲ್ ಮೈದಾನಗಳಿಗೂ ಹೆಚ್ಚಾಗಿದೆ. ನೌಕೆಯ ವಿದ್ಯುತ್ ಘಟಕದ ಸಾಮರ್ಥ್ಯ ಇಡೀ ಕೊಚ್ಚಿ ನಗರವನ್ನು ಬೆಳಗಿಸುವಷ್ಟಿದೆ. ಅಲ್ಲದೆ ಕೊಚ್ಚಿಯಿಂದ ದೆಹಲಿವರೆಗೆ ಸಂಪರ್ಕ ಕಲ್ಪಿಸುವಷ್ಟು ಕೇಬಲ್ ವೈರ್ ಹೊಂದಿದೆ.
ವಿಕ್ರಾತ್ ಎತ್ತರ 260 ಮೀಟರ್, ಉದ್ದ 60 ಮೀ. ಇದ್ದು ಗಂಟೆಗೆ 56 ಕಿಲೋಮೀಟರ್ ಓಡಬಲ್ಲದು ಎಂದು ನೌಕಾದಳದ ಕಮಾಂಡರ್ ಸೈಬಲ್ ಸೇನ್ ಹೇಳಿದ್ದಾರೆ. ವೇಗ ಸುಮಾರು 28 knots( 56 kms/hr) ಹಡಗಿನಲ್ಲಿ ಸುಮಾರು 30ಕ್ಕೂ ಅಧಿಕ ದೇಸಿ ನಿರ್ಮಿತ ಸಣ್ಣ ಯುದ್ಧ ವಿಮಾನ, (ಎಲ್ ಸಿಎ), ಮಿಗ್-29ಕೆ -ಜೆಟ್ ಗಳು ಮತ್ತು ಹೆಲಿಕಾಪ್ಟರ್ ಗಳನ್ನು ನಿಲ್ಲಿಸಬಹುದು.












Click it and Unblock the Notifications