ಬ್ಯೂಗಲ್ ರಾಕ್‌ನಲ್ಲಿ ಮೋದಿ ಭಾಷಣ ಲೈವ್ : ಚಿತ್ರಗಳು
ಬೆಂಗಳೂರು, ಆ. 12 : ಜಗತ್ತಿನಲ್ಲಿ ಯಾವುದೇ ಘಟನೆ ನಡೆಯುತ್ತಿರಲಿ ಅದನ್ನು ಲೈವ್ ಸ್ಟ್ರೀಮಿಂಗ್ ಮುಖಾಂತರ ನೇರವಾದ ದೃಶ್ಯಾವಳಿಗಳನ್ನು ಅಂತರ್ಜಾಲದಲ್ಲಿ ಜಗತ್ತಿನ ಯಾವುದೇ ಮೂಲೆಯಿಂದ ನೋಡಬಹುದಾಗಿದೆ. ಇಂಥದೇ ಲೈವ್ ಸ್ಟ್ರೀಮಿಂಗ್ ಮೂಲಕ ಬಿತ್ತರವಾದ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿ ಮಾಡಿದ 50 ನಿಮಿಷಗಳ ಭಾಷಣವನ್ನು ಬೆಂಗಳೂರಿನ ನಾಗರಿಕರು ನೇರವಾಗಿ ನೋಡಿದ್ದಾರೆ.
ಹೈದರಾಬಾದ್ ನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ಭಾನುವಾರ ನೆರೆದಿದ್ದ ಸಹಸ್ರಾರು ಜನರೆದಿರು, ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಮಾಡಿದ ಭಾಷಣವನ್ನು 'ನಮೋ ಬ್ರಿಗೇಡ್ ಬೆಂಗಳೂರು' ಸಂಘದ ಸದಸ್ಯರು ಬೆಂಗಳೂರಿನ ಜನತೆಯ ಮುಂದೆ ಲೈವ್ ಸ್ಟ್ರೀಮಿಂಗ್ ಮೂಲಕ ತಂದಿಟ್ಟರು. ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕ್ ನಲ್ಲಿ ಸುಮಾರು 300 ನಾಗರಿಕರು ಈ ಭಾಷಣವನ್ನು ಆಲಿಸಿದರು.
ಹೆಚ್ಚಾಗಿ ಸಾಫ್ಟ್ ವೇರ್ ಇಂಜಿನಿಯರುಗಳೇ ಇರುವ ನಮೋ ಬ್ರಿಗೇಡ್ ಸದಸ್ಯರಿಗೆ ಇದು ಅಸಾಧ್ಯವೇನೂ ಆಗಿರಲಿಲ್ಲ. ಕರ್ನಾಟಕದುದ್ದಕ್ಕೂ ಪಸರಿಸುತ್ತಿರುವ ನಮೋ ಬ್ರಿಗೇಡ್ ಮೊದಲ ಬಾರಿಗೆ ಮೋದಿ ಭಾಷಣವನ್ನು ಲೈವ್ ವೆಬ್ ಕಾಸ್ಟ್ ಮಾಡಿದೆ. ಈ ಭಾಷಣವನ್ನು ಎಲ್ಲ ಪ್ರಮುಖ ಖಾಸಗಿ ಟಿವಿಗಳು ಮಾತ್ರವಲ್ಲ, ಇಪ್ಪತ್ತಕ್ಕೂ ಹೆಚ್ಚು ವೆಬ್ ಸೈಟ್ ಗಳು ಲೈವ್ ವೆಬ್ ಕಾಸ್ಟ್ ಮಾಡಿವೆ.
ಮುಂದಿನ ದಿನಗಳಲ್ಲಿ ಇದೇ ತಂತ್ರಜ್ಞಾನಕ್ಕೆ ಇತರ ರಾಜಕೀಯ ಪಕ್ಷಗಳೂ ಮೊರೆಹೋದರೆ ಅಚ್ಚರಿಯಿಲ್ಲ. ಲೋಕಸಭೆ ಚುನಾವಣೆ ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಎನ್ಎಮ್‌ಕೆಆರ್‌ವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಶತಾವಧಾನಿ ಗಣೇಶ್ ಅವರ ಕಾರ್ಯಕ್ರಮವನ್ನು ಕೂಡ ಲೈವ್ ಸ್ಟ್ರೀಮಿಂಗ್ ಮುಖಾಂತರ ವೆಬ್ ಕಾಸ್ಟ್ ಮಾಡಲಾಗಿತ್ತು.

ಒಂದೇ ದಿನದಲ್ಲಿ ಲೈವ್ ಸ್ಟ್ರೀಮಿಂಗ್ ಸಿದ್ಧತೆ
"ನರೇಂದ್ರ ಮೋದಿ ಅವರ ಭಾಷಣವನ್ನು ಲೈವ್ ಸ್ಟ್ರೀಮಿಂಗ್ ಮುಖಾಂತರ ಜನರಿಗೆ ತಲುಪಿಸಬೇಕೆಂದು ಕೇವಲ ಒಂದೇ ದಿನದಲ್ಲಿ ನಿರ್ಧರಿಸಿ, ತಯಾರಿ ಮಾಡಿಕೊಳ್ಳಲಾಗಿತ್ತು. ಜನರಿಂದಲೂ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು" ಎಂದು ನಮೋ ಬ್ರಿಗೇಡ್ ತಂಡದ ಸದಸ್ಯ ವಸಂತ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಯಾವುದೇ ಪಕ್ಷಕ್ಕೆ ಸೇರಿದವರಲ್ಲ
"ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ನರೇಂದ್ರ ಮೋದಿ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ನಮೋ ಬ್ರಿಗೇಡ್ ತಂಡ ಕಟ್ಟಿದ್ದೇವೆ ಮತ್ತು ಅವರ ಆಡಳಿತದ ಧನಾತ್ಮಕ ಅಂಶಗಳನ್ನು ಜನರಿಗೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ ಅಷ್ಟೆ" ಎಂದು ನಮೋ ಬ್ರಿಗೇಡ್ ತಂಡದ ಸದಸ್ಯ ನಂದ ಗಿರೀಶ್ ಅವರು ಒನ್ಇಂಡಿಯಾಗೆ ತಿಳಿಸಿದರು.

ಜನರಲ್ಲಿ ತಿಳಿವಳಿಕೆ ಮೂಡಿಸುವುದು ಉದ್ದೇಶ
"ದೇಶ ಇಂದು ಕೆಟ್ಟ ರಾಜಕೀಯದಿಂದ ಹದಗೆಟ್ಟು ಹೋಗಿದೆ. ಜನರಲ್ಲಿ ಉತ್ತಮ ಆಡಳಿತ ಬಗ್ಗೆ ಅರಿವು ಮೂಡಿಸುವುದು, ಜನರಿಗೆ ಎಂಥ ನಾಯಕತ್ವದ ಅಗತ್ಯವಿದೆ ಎಂಬ ಬಗ್ಗೆ ತಿಳಿವಳಿಕೆ ನೀಡುವುದು ನಮೋ ಬ್ರಿಗೇಡ್ ತಂಡದ ಆಶಯವಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ" ಎನ್ನುತ್ತಾರೆ ಅವರು.

300ಕ್ಕೂ ಹೆಚ್ಚು ಉತ್ಸಾಹಿ ಜನರು
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಬ್ಯೂಗಲ್ ರಾಕ್ ಪಾರ್ಕ್‌ನಲ್ಲಿ, ದೊಡ್ಡ ಬಸವನ ದೇವಸ್ಥಾನದ ಬಳಿ ಭಾನುವಾರ 300ಕ್ಕೂ ಹೆಚ್ಚು ಉತ್ಸಾಹಿ ಜನರು ನೆರೆದಿದ್ದರು. ಯುವಕರು, ಹಿರಿಯರು, ಮಕ್ಕಳು ಕೂಡ ರಜಾದಿನದಂದು ಅಲ್ಲಿ ಸೇರಿ ಮೋದಿ ಭಾಷಣದ ಸವಿಯನ್ನು ಆಸ್ವಾದಿಸಿದರು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications