ದೇವೇಗೌಡರು ಅವಕಾಶವಾದಿ, ಸ್ವಾರ್ಥಿ : ಸಿದ್ದರಾಮಯ್ಯ
ಬೆಂಗಳೂರು, ಆ.8 : "ದೇವೇಗೌಡರು ಸ್ವಾರ್ಥಿ ಹಾಗೂ ಅವಕಾಶವಾದಿ. ಕರ್ನಾಟಕವನ್ನು ತಮ್ಮ ಕುಟುಂಬದ ಆಸ್ತಿ ಎಂಬಂತೆ ವರ್ತಿಸುವ ವ್ಯಕ್ತಿ". ಹೀಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಗೌಡರ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಗೊಟ್ಟಿಗೆರೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬುಧವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ಪಕ್ಷದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. ವೈಯಕ್ತಿಕ ಮಟ್ಟದಲ್ಲಿ ದೇವೇಗೌಡರ ವಿರುದ್ಧ ಸಿಎಂ ಈ ಪರಿ ವಾಗ್ಧಾಳಿ ನಡೆಸಿದ್ದು, ಇದೇ ಮೊದಲು.
"ದೇವೇಗೌಡರಿಗೆ ಸತ್ಯ ಹೇಳಿ ಗೊತ್ತಿಲ್ಲ. ಅವರಿಗೆ ರಾಜಕೀಯದಲ್ಲಿ ಯಾವುದೇ ತತ್ವ ಮತ್ತು ಸಿದ್ಧಾಂತಗಳಿಲ್ಲ. ಸಹಾಯ ಮಾಡುವವರಿಗೇ ಒದ್ದು ಬಿಡುತ್ತಾರೆ". ಅವರಿಗೆ ಉಪಕಾರ ಸ್ಮರಣೆ ಎಂಬುದು ತಿಳಿದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯ ಕುರಿತು ಕಿಡಿ ಕಾರಿರುವ ಸಿದ್ದರಾಮಯ್ಯ ಕೋಮವಾದಿ ಪಕ್ಷದೊಂದಿ ಕೈ ಜೋಡಿಸಿ ಜೆಡಿಎಸ್ ತನ್ನ ತತ್ವ ಮತ್ತು ಸಿದ್ದಾಂತಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರ ವಾಗ್ದಾಳಿಯ ಪ್ರಮುಖ ಅಂಶಗಳು

ದೇವೇಗೌಡರು ಸಾರ್ಥಿ
ದೇವೇಗೌಡರು ಒಬ್ಬ ದೊಡ್ಡ ಸ್ವಾರ್ಥಿ ಹಾಗೂ ಅವಕಾಶವಾದಿ. ರಾಜ್ಯವನ್ನು ತಮ್ಮ ಕುಟುಂಬದ ಆಸ್ತಿ ಎಂಬಂತೆ ವರ್ತಿಸುವ ವ್ಯಕ್ತಿ. ಕರ್ನಾಟಕದ ರಾಜಕಾರಣದಲ್ಲಿ ಹಲವು ಸಮರ್ಥ ನಾಯಕರನ್ನು ರಾಜಕೀಯವಾಗಿ ನಾಶ ಮಾಡಿದ ಕೀರ್ತಿ ಈ ದೇವೇಗೌಡರದ್ದು.

ಕಣ್ಣೀರಿನ ಮೂಲಕ ಜನರಿಗೆ ವಂಚಿಸುತ್ತಾರೆ
ಪ್ರತಿ ಬಾರಿ ಚುನಾವಣೆ ಬಂದಾಗಲೂ ಕಣ್ಣೀರು ಹಾಕುತ್ತಾ, ಇದೇ ನನ್ನ ಕಡೆಯ ಹೋರಾಟ ಎಂದು ಕಳೆದ 20 ವರ್ಷದಿಂದ ಮತದಾರರಿಗೆ ವಂಚಿಸುತ್ತಿದ್ದಾರೆ. ಈ ಬಾರಿ ಜನರು ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಮೂಲಕ ದೇವೇಗೌಡರ ಪಾಲಿಗೆ ಇದು ಕೊನೆ ಹೋರಾಟ ಆಗುವಂತೆ ಮಾಡಬೇಕು ಎಂದು ಮನವು ಮಾಡಿದರು.

ಮದುವೆ ಊಟಕ್ಕೆ ಹೋಗೋಲ್ಲ
ಸಿ.ಎಂ. ಇಬ್ರಾಹಿಂ ಹೇಳುವಂತೆ ದೇವೇಗೌಡರು ಯಾರ ಮನೆಗೂ ಮದುವೆ ಊಟಕ್ಕೆ ಹೋಗುವುದಿಲ್ಲ. ತಿಥಿ ಊಟಕ್ಕೆ ಮಾತ್ರ ಹೋಗುತ್ತಾರೆ. ಏಕೆಂದರೆ, ಅವರು ಬೇರೆಯವರನ್ನು ಬೆಳೆಸುವ ಬದಲು ಮುಗಿಸಿಬಿಡುತ್ತಾರೆ.

ಒಳ ಒಪ್ಪಂದವಿಲ್ಲವೇ ಗೌಡರೇ
ಜೆಡಿಎಸ್ ಮತ್ತು ಬಿಜೆಪಿ ಉಪ ಚುನಾವಣೆಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ನಾನು ಹೇಳಿದ್ದೆ. ದೇವೇಗೌಡರು ಒಪ್ಪಂದವಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಹಾಗಾದರೆ, ದೇವೇಗೌಡರೇ, ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಈಗ ಹೇಳಿ.

ಜಾತ್ಯತೀತ ಪದ ಕಾಗದದಲ್ಲಿ ಮಾತ್ರ
ಉಪ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿರುವುದರಿಂದ ನಿಮ್ಮ ಜೆಡಿಎಸ್ ಪಕ್ಷಕ್ಕೆ ಅಂಟಿಸಿಕೊಂಡಿರುವ ಜಾತ್ಯತೀತ ಪದವನ್ನು ಕಿತ್ತು ಹಾಕಿ. ಅದನ್ನು ನೀವು ಕಾಗದದಲ್ಲಿ ಮಾತ್ರ ಇಟ್ಟುಕೊಂಡಿದ್ದೀರಿ ಎಂದು ನಮಗೂ ತಿಳಿದಿದೆ.

ಅವರೇ ಸಿಎಂ, ಅವರೇ ಪಿಎಂ
ಕರ್ನಾಟಕ ನಮ್ಮದು ಎಂದು ದೇವೇಗೌಡರು ಮತ್ತು ಅವರ ಕುಟುಂಬ ತಿಳಿದು ಕೊಂಡಿದೆ. ನಾನೇ ಸಿಂಎ, ನಾನೇ ಪ್ರಧಾನಿ ಎಂದು ಎಲ್ಲರೂ ಹೇಳುತ್ತಾರೆ. ನನ್ನನ್ನು ಹಿಂದೆ ಹಣಕಾಸು ಸಚಿವ ಮಾಡಿದ್ದು ದೇವೇಗೌಡರು ಎಂದು ಹೇಳುತ್ತಾರೆ. ಹಾಗಾದರೆ, ಅವರನ್ನು ಪ್ರಧಾನಿ ಮಾಡಿದ್ದು ಯಾರು? ನಮ್ಮೆಲ್ಲರ ಬೆಂಬಲವಿಲ್ಲದೆ ದೇವೇಗೌಡರು ಪ್ರಧಾನಿ ಹೇಗೆ ಅದರು ಎಂದು ಅವರು ಉತ್ತರಿಸಬೇಕು.

ಭ್ರಷ್ಟಾಚಾರದ ಬಗ್ಗೆ ಮಾತೇ ಇಲ್ಲ
ದೇವೇಗೌಡರ ಕುಟುಂಬ ಅಧಿಕಾರಕ್ಕೆ ಬಂದರೆ ಲೂಟಿ ಮಾಡುವುದೇ ಜನಸೇವೆ ಎಂದು ತಿಳಿದುಕೊಳ್ಳತ್ತಾರೆ. ಆದ್ದರಿಂದ ದೇವೇಗೌಡರು, ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ಯಾವತ್ತೂ ಮಾತನಾಡವುದಿಲ್ಲ.

ಬಿಜೆಪಿ ಅವರಿಗೆ ಏನಾಗಿದೆ
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅಧಿಕಾರ ಬಿಟ್ಟು ಕೊಡದಿದ್ದಾಗ ಯಡಿಯೂರಪ್ಪನವರು 'ದೇವೇಗೌಡರು ನನ್ನ ಬೆನ್ನಿಗೆ ತೂರಿ ಹಾಕಿದರು, ನನಗೆ ವಿಷ ಕೊಟ್ಟರು' ಎಂದೆಲ್ಲ ಹೇಳಿದ್ದರು. ಈಗ ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡಿದೆ. ಇದು ಯಾವ ತರಹದ ಮೈತ್ರಿ? ಬಿಜೆಪಿಗೆ ಏನಾಗಿದೆ.

ಸಾಕು ಆಚೆ ಕಳಿಸಿ
ನನಗೆ ತಿಳಿದಂತೆ ಕಳೆದ 20 ವರ್ಷಗಳಿಂದ ದೇವೇಗೌಡರು. ಕಣ್ಣೀರು ಹಾಕುತ್ತಾ, ಇದು ನನ್ನ ಕೊನೆಯ ಹೋರಾಟ ಎಂದು ಹೇಳುತ್ತಿದ್ದಾರೆ. ಹಾಗಾದರೆ, ದೇವೇಗೌಡರಿಗೆ ಎಷ್ಟು ಕೊನೆ ಹೋರಾಟಗಳಿವೆ ? ಸಾಕು. ಈ ಚುನಾವಣೆಯಲ್ಲಿ ಇದೇ ನಿಮ್ಮ ಕೊನೆ ಹೋರಾಟ ಎಂದು ಅವರನ್ನು ಸೋಲಿಸಿ, ಆಚೆ ಕಳುಹಿಸಿ.












Click it and Unblock the Notifications