ಮಳೆಯ ಆರ್ಭಟಕ್ಕೆ ಮತ್ತೊಮ್ಮೆ ತತ್ತರಿಸಿದ ಕರ್ನಾಟಕ
ಬೆಂಗಳೂರು, ಆ.2 : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ಮತ್ತು ಉಪ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ.
ಮೈಸೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ರೌದ್ರಾವತಾರ ತಾಳಿದೆ. ದಾವಣಗೆರೆಯಲ್ಲಿ ಸುರಿದ ಭಾರೀ ಮಳೆಗೆ ಬಾಲಕನೊಬ್ಬ ಬಲಿಯಾಗಿದ್ದು, ಚಿಕ್ಕಮಗಳೂರಿನಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಕೊಡಗು, ಕರಾವಳಿ ಭಾಗದಲ್ಲಿ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಹೆದ್ದಾರಿಗಳು ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. [ಕೊಡಗಿನ ಮಳೆಯ ಚಿತ್ರಗಳು]

ಸಕಲೇಶಪುರ ತಾಲ್ಲೂಕಿನಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆ 7 ಗಂಟೆಯವರೆಗೆ 185 ಮಿ.ಮೀ. ಮಳೆ ಯಾಗಿದೆ. ರಾಜ್ಯದಲ್ಲೇ ಗುರುವಾರ ಸಕಲೇಶಪುರದಲ್ಲಿ ಅತ್ಯಧಿಕ ಮಳೆ ಸುರಿದಿದೆ. ಹಾಸನ- ಸಕಲೇಶಪುರ ರೈಲು ಮಾರ್ಗದಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ.
ಸಕಲೇಶಪುರ ಪಟ್ಟಣದಲ್ಲೇ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. 25 ವಿದ್ಯುತ್ ಕಂಬಗಳು ಬಿದ್ದಿದ್ದು, ಗ್ರಾಮೀಣ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಕಂಬಗಳು ನೆಲಕಚ್ಚಿವೆ. ಇದರಿಂದ ತಾಲೂಕಿನ ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿದೆ.
ಕೊಡಗು : ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಮಡಿಕೇರಿ ಸಮೀಪದ ಕೊಯಿನಾಡು ಬಳಿಯಲ್ಲಿ ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿಯು ಮಧ್ಯಭಾಗದಲ್ಲಿಯೇ ಬಿರುಕು ಬಿಟ್ಟಿದ್ದು, ವಾಹಸ ಸಂಚಾರ ಸ್ಥಗಿತಗೊಂಡಿದೆ.
ಕೊಡಗಿನ ಮದಾಪುರದಲ್ಲಿ 12 ಸೆಂ.ಮೀ. ಮತ್ತು ಮೂರ್ನಾಡುವಿನಲ್ಲಿ 10 ಸೆಂ.ಮೀ, ಸೋಮವಾರ ಪೇಟೆಯಲ್ಲಿ 8 ಸೆಂ.ಮೀ ಮಳೆ ಗುರುವಾರ ಸುರಿದಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನದ ರಜೆ ಘೋಷಿಸಲಾಗಿದೆ.
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿಯೂ ಬುಧವಾರ ರಾತ್ರಿಯಿಂದ ಭಾರೀ ಮಳೆ ಸುರಿಯತ್ತಿದ್ದು, ಸುಮಾರು 15 ಸಾವಿರ ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಹೊಸನಗರ, ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ 7 ಸೆಂ.ಮೀ. ಮಳೆಸುರಿದಿದೆ.
ಲಿಂಗನಮಕ್ಕಿ ಜಲಾಶಯಕ್ಕೆ ಭರ್ತಿಯಾಗಲು ಕೇವಲ 3.5 ಅಡಿ ಬಾಕಿ ಇದೆ. ಜಲಾಶಯದ 11 ಕ್ರಸ್ಟ್‌ಗೇಟ್‌ಗಳನ್ನು ತೆರೆದು 27,500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ, ಜೋಗ ಜಲಪಾತ ನೋಡಲು ನೋಡಲು ಆಕರ್ಷಕವಾಗಿ ಕಾಣುತ್ತಿದೆ.
ಕೃಷ್ಣಾ ಪ್ರವಾಹ ಇಳಿಮುಖ : ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಿದ್ದು, ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಸುಮಾರು 3 ಅಡಿಯಷ್ಟು ಇಳಿಕೆಯಾಗಿದೆ.
ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಹರಿದು ಬುಧವಾರ ಹರಿದು ಬರುತ್ತಿದ್ದ ಒಟ್ಟು 1.78 ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ ಗುರುವಾರ 1.69 ಲಕ್ಷ ಕ್ಯೂಸೆಕ್‌ಗೆ ತಗ್ಗಿದೆ.












Click it and Unblock the Notifications