ರಾಜಧಾನಿ ಕಟ್ಟಲು 2.5 ಲಕ್ಷ ಕೋಟಿ ರು ಬೇಕು
ಹೈದರಾಬಾದ್, ಆ.2: ದೇಶದ 29ನೇ ರಾಜ್ಯವಾಗಿರುವ ತೆಲಂಗಾಣ ಹಾಗೂ ಸೀಮಾಂಧ್ರ ಭಾಗಕ್ಕೆ ಹೈದರಾಬಾದ್ 10 ವರ್ಷಗಳ ಕಾಲ ರಾಜಧಾನಿಯಾಗಿರಲಿದೆ. ಆದರೆ, ನಂತರ ಹೈದರಾಬಾದ್ ಕಥೆಯೇನು? ಸೀಮಾಂಧ್ರಕ್ಕೆ ಹೊಸ ರಾಜಧಾನಿ ಸೃಷ್ಟಿಸಬೇಕೇ? ಅಥವಾ ಹೈದರಾಬಾದ್ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕಾ? ಎಂಬ ಪ್ರಶ್ನೆಗಳು ಎದ್ದಿವೆ.
ಹೈದರಾಬಾದಿನ ಕಥೆ ಏನಾಗುತ್ತದೋ ಗೊತ್ತಿಲ್ಲ ಆದರೆ, ಸೀಮಾಂಧ್ರಕ್ಕೆ ಹೊಸ ರಾಜಧಾನಿ ಕಟ್ಟಲು ಚಿಂತನೆ ನಡೆದಿದೆ. ಒಂದು ಮೂಲದ ಪ್ರಕಾರ ರಾಯಲ ಸೀಮೆಯ ಪ್ರಮುಖ ಪ್ರದೇಶ ಕರ್ನೂಲ್ ಅನ್ನು ಸೀಮಾಂಧ್ರದ ರಾಜಧಾನಿ ಮಾಡುವಂತೆ ಬೇಡಿಕೆ ಇದೆ. ಕರ್ನೂಲ್ ಈ ಹಿಂದೆ ಆಂಧ್ರಪ್ರದೇಶದ ರಾಜಧಾನಿ ಕೂಡಾ ಆಗಿತ್ತು.

ರಾಜಧಾನಿ ನಿರ್ಮಾಣ ಸುಲಭವಲ್ಲ: ಆದರೆ, ಕೋಸ್ತಾ ಆಂಧ್ರ ಭಾಗದ ಜನರು ಕರ್ನೂಲ್ ಅನ್ನು ರಾಜಧಾನಿಯಾಗಿ ಒಪ್ಪುವುದು ಕಷ್ಟ. ವೈಜಾಕ್ ಅನ್ನು ರಾಜಧಾನಿ ಮಾಡಲು ಸರ್ವಾನುಮತ ಸಿಕ್ಕಿಲ್ಲ ಹೀಗಾಗಿ ಹೊಸ ರಾಜಧಾನಿ ಉದಯ ಅನಿವಾರ್ಯವಾಗಿದೆ. ಮೂಲಗಳ ಪ್ರಕಾರ ನಯಾ ರಾಯಪುರ, ಗಾಂಧಿನಗರ ಅಥವಾ ಭುವನೇಶ್ವರ ನಗರಗಳಂತೆ ಹೊಸ ರಾಜಧಾನಿಯ ನಿರ್ಮಾಣವಾಗಲಿದೆಯಂತೆ.
ದೆಹಲಿ ಐಐಟಿ ಹಾಗೂ ಹೈದರಾಬಾದಿನ ವಾದ ಫೌಂಡೇಶನ್ ಸಂಸ್ಥೆ ಈಗಾಗಲೇ ರಾಜಧಾನಿ ನಗರ ನಿರ್ಮಾಣಕ್ಕೆ ಬೇಕಾದ ಮೂಲ ಸೌಕರ್ಯಗಳ ಪಟ್ಟಿಯನ್ನು ತಯಾರಿಸಿಕೊಂಡಿದೆ. ಆಂಧ್ರಪ್ರದೇಶ ವಿಭಜನೆಗೂ ಮುನ್ನವೇ ರಾಜಧಾನಿ ನಗರ ನಿರ್ಮಾಣ ಮುನ್ನೋಟದ ಸ್ಕೆಚ್ ತಯಾರಿಸಲಾಗುತ್ತಿದ್ದರು ಎನ್ನಲಾಗಿದೆ. ಸುಮಾರು 2.5 ಲಕ್ಷ ಕೋಟಿ ರು ಹೂಡಿಕೆ ಮಾಡಿದರೆ ಸುಂದರ ನಗರ ನಿರ್ಮಾಣ ಸಾಧ್ಯ ಎಂದು ತಿಳಿದು ಬಂದಿದೆ.
ರಾಜಧಾನಿಗೆ ಬೇಕಾದ ಮೂಲ ಸೌಕರ್ಯಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಸ್ತೆ ಸಂಪರ್ಕ, ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ನಗರಗಳನ್ನು ಸಂರ್ಪಕಿಸಲು ಬೇಕಾದ ಹೆದ್ದಾರಿ ರಸ್ತೆಗಳು ಸೇರಿವೆ.
ಇದರ ಜೊತೆಗೆ ನಗರ ಸಾರಿಗೆ ರೈಲು, ಬಸ್ ಸಂಪರ್ಕ ಕೂಡಾ ಮುಖ್ಯವಾಗುತ್ತದೆ ಎಂದು ವಾದ ಸಂಸ್ಥೆ ಸ್ಥಾಪಕ ಪಿ ಸುರೇಶ್ ರಾಜು ಹೇಳಿದ್ದಾರೆ. ಉಳಿದಂತೆ ವಿದ್ಯುತ್ ಸಂಪರ್ಕ, ಗ್ರಿಡ್ ಪ್ರಸರಣ, ವಿದ್ಯುತ್ ಶೇಖರಣೆ, ಒಳ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಘನ ತ್ಯಾಜ್ಯ ನಿರ್ವಹಣೆ ಮುಂತಾದ ವ್ಯವಸ್ಥೆ ಆಗಬೇಕಾಗುತ್ತದೆ.
ಕಳೆದ ವರ್ಷದ ಹೈದರಾಬಾದಿನ HMDA ನೀಡಿದ ವರದಿಯಂತೆ ಪ್ರತಿ ವರ್ಷ 5000 ಕೋಟಿ ರು ಪ್ರತಿ ವರ್ಷದಂತೆ ಖರ್ಚು ಮಾಡಿದರೆ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಬಹುದು ಎನ್ನಲಾಗಿತ್ತು. ಸದ್ಯಕ್ಕೆ ವಾದ ಸಂಸ್ಥೆ ತನ್ನ ವರದಿಯನ್ನು ಕೇಂದ್ರದ ಸಮಿತಿಗೆ ನೀಡಿದ್ದು ಉಭಯ ರಾಜ್ಯಗಳ ಸಂಪನ್ಮೂಲ ಹಂಚಿಕೆ ಆಧಾರದ ಮೇಲೆ ಮುಂದಿನ ರಾಜಧಾನಿ ನಿರ್ಮಾಣ ಯೋಜನೆ ನಿರ್ಧಾರವಾಗಲಿದೆ.












Click it and Unblock the Notifications